ಬೆಂಗಳೂರು: ಹಲಸಿನ ಹಣ್ಣಿನ ಆಸೆಗಾಗಿ ಮರ ಹತ್ತಿದ ಪ್ರಶಸ್ತಿ ವಿಜೇತ ಬಳ್ಳಾರಿ ಮೂಲದ ಜಿಕೆವಿಕೆ ಕೃಷಿ ವಿದ್ಯಾರ್ಥಿ ಸಾವು!

Published : Jun 05, 2026, 07:23 PM IST
MSc Agriculture student Akash dies

ಸಾರಾಂಶ

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಹಲಸಿನ ಹಣ್ಣು ಕೀಳಲು ಮರ ಹತ್ತಿದ್ದ ಎಂ.ಎಸ್ಸಿ ವಿದ್ಯಾರ್ಥಿ ಆಕಾಶ್, ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ, ಪ್ರತಿಭಾವಂತನಾಗಿದ್ದ ಈ ಯುವಕನ ಅಕಾಲಿಕ ಮರಣವು ಎಲ್ಲೆಡೆ ಶೋಕವನ್ನುಂಟುಮಾಡಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ನಡೆದಿದೆ. ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಕೆಳಗೆ ಬಿದ್ದ ಕೃಷಿ ವಿಶ್ವವಿದ್ಯಾಲಯದ ಎಂ.ಎಸ್ಸಿ (M.Sc Agriculture) ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಆಕಾಶ್ (23) ಮೃತಪಟ್ಟ ದುರ್ದೈವಿಯಾಗಿದ್ದಾನೆ.

ರೈತಾಪಿ ಕುಟುಂಬದಿಂದ ಬಂದು, ಕಷ್ಟಪಟ್ಟು ಓದಿ ಸರ್ಕಾರಿ ಸೀಟು ಪಡೆದುಕೊಂಡು ಬೆಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಹಲಸಿನ ಹಣ್ಣಿನ ಸಣ್ಣ ಆಸೆಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಇಡೀ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.

ಮಧ್ಯರಾತ್ರಿ ನಡೆದಿದ್ದೇನು?

ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆಯು ರಾತ್ರಿ 12:00 ರಿಂದ 1:00 ಗಂಟೆಯ ಅವಧಿಯಲ್ಲಿ ಜಿಕೆವಿಕೆ ಕ್ಯಾಂಪಸ್ ಆವರಣದಲ್ಲಿ ನಡೆದಿದೆ. ನಿನ್ನೆ ರಾತ್ರಿ ವಿದ್ಯಾರ್ಥಿ ಆಕಾಶ್ ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳುವ ಆಸೆಯಿಂದ ಜಿಕೆವಿಕೆ ಆವರಣದ ದೊಡ್ಡ ಮರವನ್ನು ಹತ್ತಿದ್ದ ಎನ್ನಲಾಗಿದೆ. ಆದರೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಆಯತಪ್ಪಿ ಮರದ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಆಕಾಶ್ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಪೆಟ್ಟಾಗಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಆಕಾಶ್ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸಹಪಾಠಿಗಳು ತಕ್ಷಣವೇ ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.

ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪ್ರತಿಭಾವಂತ ಯುವಕ!

ಮೃತ ಆಕಾಶ್ ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರೆ ಚಟುವಟಿಕೆಗಳಲ್ಲೂ ಅತ್ಯಂತ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಕಾಲೇಜಿನ ಎನ್.ಎಸ್.ಎಸ್ (NSS) ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಈತನಿಗೆ ರಾಷ್ಟ್ರಪತಿಯವರಿಂದ "ಉತ್ತಮ ಸ್ವಯಂಸೇವಕ" ಪ್ರಶಸ್ತಿ ಲಭಿಸಿತ್ತು. ಅಷ್ಟೇ ಅಲ್ಲದೆ, 2024 ರ ಗಣರಾಜ್ಯೋತ್ಸವದ (Republic Day Parade) ಪರೇಡ್‌ನಲ್ಲಿ ಕರ್ನಾಟಕ ರಾಜ್ಯವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಕೀರ್ತಿ ತಂದಿದ್ದನು. ಬಡತನದ ಹಿನ್ನೆಲೆಯುಳ್ಳ ರೈತ ಕುಟುಂಬದಿಂದ ಬಂದಿದ್ದ ಆಕಾಶ್, ಇಡೀ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಹೆಮ್ಮೆಯಾಗಿದ್ದನು. ಆತನ ಅಕಾಲಿಕ ಮರಣವು ಕುಟುಂಬದ ದೊಡ್ಡ ಶಕ್ಷಿಯನ್ನೇ ಕಳೆದುಕೊಂಡಂತಾಗಿದೆ.

ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಕೆವಿಕೆ ಆವರಣದಲ್ಲಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತರ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಯಲಹಂಕ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಕಾಲಚಕ್ರದಲ್ಲಿ ಮೌನವಾದ ಸಿಗಂದೂರು ಲಾಂಚ್‌: ಸೇತುವೆ ಉದ್ಘಾಟನೆ ಬಳಿಕ ಇದನ್ನ ಕೇಳುವವರೇ ಇಲ್ಲ
ಡಿಕೆಶಿ ಕೇವಲ ಕೀಲುಗೊಂಬೆ, ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದಾರೆ: ಆರ್.ಅಶೋಕ್ ವ್ಯಂಗ್ಯ