
ಬೆಳ್ತಂಗಡಿ: ಕುದುರೆಮುಖ ವನ್ಯಜೀವಿ ವಿಭಾಗದ ಬಂಡಾಜೆ ಕಾಡಿನಲ್ಲಿ ಗುಡ್ಡ ಕುಸಿತ ಉಂಟಾಗಿದೆ. ದೂರದ ಅರಣ್ಯ ಪ್ರದೇಶದಲ್ಲಿ ಗುಡ್ಡ ಹಾಗೂ ಕಲ್ಲುಗಳು ಜರಿದು ಬಿದ್ದಿದ್ದು, ಒಂದು ಕಿ.ಮೀ. ದೂರದಲ್ಲಿರುವ ಜನರು ಇದನ್ನು ಕಂಡಿದ್ದಾರೆ. ಈ ಅರಣ್ಯ ಪ್ರದೇಶದಲ್ಲಿ ಯಾವುದೇ ಜನ ವಾಸ್ತವ್ಯ ಇಲ್ಲ. 2019ರ ನೆರೆ ಸಂದರ್ಭದಲ್ಲಿ ಬಂಡಾಜೆ ಅರಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಹಲವು ಅವಾಂತರ ಸಂಭವಿಸಿದ್ದವು. ಈ ನೆನಪು ಇನ್ನೂ ತಾಲೂಕಿನ ಜನರಲ್ಲಿ ಹಸಿರಾಗಿದೆ. ಪ್ರಸ್ತುತ ಅಂತಹ ದೊಡ್ಡ ಪ್ರಮಾಣದ ಕುಸಿತ ಉಂಟಾಗಿಲ್ಲ. ಬಂಡಾಜೆ ಅರಣ್ಯದಲ್ಲಿ ಇಂತಹ ಲಘು ಪ್ರಮಾಣದ ಕುಸಿತಗಳು ಮಳೆ ಸಂದರ್ಭದಲ್ಲಿ ಆಗಾಗ ನಡೆಯುತ್ತಿರುತ್ತವೆ. ಮಳೆಗಾಲ ಆರಂಭಕ್ಕೆ ಗುಡ್ಡ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಳ್ಳುವುದು ಸಾಮಾನ್ಯವಾಗಿದ್ದು, ಕೆಲವು ಲಘು ಪ್ರಮಾಣದ ಕುಸಿತಗಳು ಉಂಟಾಗುತ್ತವೆ. ಇದರಿಂದ ಯಾವುದೇ ಅಪಾಯಕಾರಿ ಸನ್ನಿವೇಶ ಉಂಟಾಗುವುದಿಲ್ಲ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವ ಕುದುರೆಮುಖ, ಗಂಗಡಿಕಲ್, ನೇತ್ರಾವತಿ ಹಾಗೂ ಕುರಿಂಜಾಲ್ ಬೆಟ್ಟಗಳ ಚಾರಣಕ್ಕೆ ಅರಣ್ಯ ಇಲಾಖೆ ಜೂ. 1ರಿಂದ ಅಧಿಕೃತ ಅನುಮತಿ ನೀಡಿದೆ.
ಅರಣ್ಯ ಇಲಾಖೆ ಪ್ರಕಟಣೆ ಪ್ರಕಾರ,ಈ ನಾಲ್ಕು ಪ್ರಮುಖ ಚಾರಣ ತಾಣಗಳಿಗೆ ಭೇಟಿ ನೀಡಲು ಬಯಸುವವರು ಕಡ್ಡಾಯವಾಗಿ ‘ಅರಣ್ಯ ವಿಹಾರ’ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಅನುಸಾರ ಚಾರಣ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಪರಿಸರ ಸಂರಕ್ಷಣೆ ಹಾಗೂ ಚಾರಣಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ ಶುವರಾಮ್ ಬಾಬು ಅವರು ಮಾಹಿತಿ ನೀಡಿ, ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 300 ಮಂದಿ ಸ್ಥಳೀಯ ಗೈಡ್‌ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಗೈಡ್‌ಗಳಿಗೆ ವಾಕಿಟಾಕಿ, ಪ್ರಥಮ ಚಿಕಿತ್ಸಾ ಕಿಟ್, ಸುರಕ್ಷತಾ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ಒದಗಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಚಾರಣದ ವೇಳೆ ಹಾದಿ ತಪ್ಪುವ ಸಾಧ್ಯತೆಯನ್ನು ಕಡಿಮೆಗೊಳಿಸಲು ಮಾರ್ಗದುದ್ದಕ್ಕೂ ಸೂಚನಾ ಫಲಕಗಳು, ದಿಕ್ಕು ಸೂಚಿಸುವ ಸೈನ್‌ಬೋರ್ಡ್‌ಗಳು ಹಾಗೂ ಸ್ಥಳದ ಮಾಹಿತಿ ಒಳಗೊಂಡ ಹ್ಯಾಂಡ್‌ಬುಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಚಾರಣಿಗರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.