ಬೈಕ್‌ಟ್ಯಾಕ್ಸಿ ನಿಷೇಧಕ್ಕಾಗಿ ಬೆಂಗ್ಳೂರಲ್ಲಿ ಆಟೋ ಸೇವೆ ಬಂದ್‌..!

By Kannadaprabha NewsFirst Published Mar 17, 2023, 1:25 PM IST
Highlights

ರಾಜ್ಯ ಸರ್ಕಾರ ಬೈಕ್‌ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಬಡ ಆಟೋ ಚಾಲಕರು ಮತ್ತು ಕುಟುಂಬ ವರ್ಗ ಬೀದಿಗೆ ಬೀಳುವುದನ್ನು ತಡೆಯಬೇಕು. ಅಲ್ಲಿಯವರೆಗೂ ಹೋರಾಟ ನಡೆಸಲು ತೀರ್ಮಾನ. 

ಬೆಂಗಳೂರು(ಮಾ.17):  ರ‍್ಯಾಪಿಡೋ, ಓಲಾ, ಊಬರ್‌ ಸೇರಿದಂತೆ ವಿವಿಧ ಬೈಕ್‌ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಆಟೋ ಚಾಲಕರು ಮಾರ್ಚ್‌ 20ರಂದು ಬೆಂಗಳೂರಿನಲ್ಲಿ 24 ಗಂಟೆಗಳ ಕಾಲ ಆಟೋ ಸೇವೆ ಬಂದ್‌ ಮಾಡಲು ನಿರ್ಧರಿಸಿದ್ದಾರೆ.

ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಬೈಕ್‌ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಬಡ ಆಟೋ ಚಾಲಕರು ಮತ್ತು ಕುಟುಂಬ ವರ್ಗ ಬೀದಿಗೆ ಬೀಳುವುದನ್ನು ತಡೆಯಬೇಕು. ಅಲ್ಲಿಯವರೆಗೂ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗ್ಳೂರಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸಲು ಸರ್ಕಾರಕ್ಕೆ 3 ದಿನ ಗಡುವು

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಒಕ್ಕೂಟದ ಸಂಚಾಲಕ ಎಂ.ಮಂಜುನಾಥ್‌, ಆಟೋ ಚಾಲಕರಿಗೆ ಬೈಕ್‌ ಟ್ಯಾಕ್ಸಿಗಳಿಂದ ಸಾಕಷ್ಟುಅನ್ಯಾಯವಾಗುತ್ತಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಮೂರು ದಿನಗಳ ಕಾಲ ಆಟೋ ಚಾಲಕರು ತಮ್ಮ ಆಟೋಗಳಿಗೆ ಸಾಂಕೇತಿಕವಾಗಿ ಕಪ್ಪುಬಾವುಟ ಕಟ್ಟಿಪ್ರತಿಭಟನೆ ನಡೆಸಲಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12ರವರೆಗೆ ಆಟೋ ಸೇವೆ ಬಂದ್‌ ಮಾಡಲು ನಿರ್ಧರಿಸಿದ್ದೇವೆ ಎಂದರು.

ಒಂದು ವೇಳೆ ಸೋಮವಾರ ಕೂಡ ರಾಜ್ಯ ಸರ್ಕಾರ ಯಾವುದೇ ನಿರ್ಧಾರವನ್ನು ಕೈಗೊಳ್ಳದಿದ್ದರೆ ಈ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುತ್ತೇವೆ. ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ. ನಮ್ಮ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಬೆಂಗಳೂರು ನಗರದ 21 ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಬೆಂಬಲವಿದೆ ಎಂದು ಮಂಜುನಾಥ್‌ ಹೇಳಿದರು.

ಕಾನೂನು ಬಾಹಿರವಾಗಿ ಬೈಕ್‌ ಟ್ಯಾಕ್ಸಿ ಸಂಚಾರ

ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ. ನ್ಯಾಯಬದ್ಧವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಕಾನೂನುಬಾಹಿರವಾಗಿ ಬೈಕ್‌, ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರೂ ರಾಜ್ಯ ಸರ್ಕಾರ ಕ್ರಮಕೈಗೊಳ್ಳದೆ ಕಾರ್ಪೊರೇಟ್‌ ಕಂಪನಿಗಳ ಪರವಾಗಿ ನಿಂತಿದೆ. ಇದರಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ. ಕೂಡಲೇ ಬೈಕ್‌ ಸೇವೆ ನೀಡುತ್ತಿರುವ ಕಂಪನಿಗಳ ವಿರುದ್ಧ ಸರ್ಕಾರ ಕ್ರಮಕೈಗೊಂಡು ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಆಟೋ ಸಂಘಟನೆಗಳು ಆಗ್ರಹಿಸಿವೆ.

click me!