ಲಿಂಗಾಯತ ವಿರೋಧಿ ನಾನಲ್ಲ: ರಘು ಆಚಾರ್‌

By Kannadaprabha News  |  First Published Mar 17, 2023, 11:47 AM IST

ಕಿಡಿಗೇಡಿಗಳು ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ. ನಾನು ಸುತ್ತೂರು ಮಠದಲ್ಲಿ ಓದಿ ಬೆಳೆದವನಾಗಿದ್ದು, ನನ್ನ ಜೀವಮಾನದಲ್ಲಿ ಎಂದೂ ಜಾತಿ ಭೇದ ಮಾಡಿ ಗೊತ್ತಿಲ್ಲ. ಮಠ ಮಾನ್ಯಗಳು ನಮ್ಮ ಸಂಸ್ಕೃತಿಯ ಪ್ರತೀಕ, ನನಗೆ ಸುತ್ತೂರು ಮಠ ಸಂಸ್ಕಾರ ಕಲಿಸಿಕೊಟ್ಟಿದೆ. ಎಲ್ಲಾ ಜಾತಿ ಧರ್ಮಗಳ ಬಗ್ಗೆ ಗೌರವವಿದೆ. ನಾನು ಯಾವುದೇ ಜಾತಿ ಧರ್ಮದ ವಿರುದ್ಧ ಹಗುರವಾಗಿ ಮಾತನಾಡಿಲ್ಲ: ರಘು ಆಚಾರ್‌ 


ಚಿತ್ರದುರ್ಗ(ಮಾ.17):  ನಾನು ಅಹಿಂದ ಪರ. ಕಡಿಮೆ ಜನಸಂಖ್ಯೆ ಇರುವ ಸಮುದಾಯದಿಂದ ಬಂದಿರುವ ನನ್ನ ವಿರುದ್ಧ ಕುತಂತ್ರ ನಡೆದಿದೆ. ನಾನು ಲಿಂಗಾಯತರ ವಿರುದ್ಧ ಮಾತನಾಡಿಲ್ಲ. ನಕಲಿ ಆಡಿಯೋ ಬಿಟ್ಟು ಕಳಂಕ ಹಚ್ಚುವ ಪ್ರಯತ್ನ ನಡೆದಿದೆ. ಸುತ್ತೂರು ಮಠದ ಸಂಸ್ಕಾರ ಹೊಂದಿರುವ ನಾನು ಎಂದೂ ಜಾತಿ ಭೇದ ಮಾಡಿದವನಲ್ಲ. ಹೀಗಂತ ವಿಧಾನಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್‌ ಸ್ಪಷ್ಟಪಡಿಸಿದ್ದಾರೆ. ಲಿಂಗಾಯತರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುದ್ದಿಗೋಷ್ಠಿ ನಡೆಸಿದ ರಘು ಆಚಾರ್‌ ಈ ಸ್ಪಷ್ಟನೆ ನೀಡಿದರು.

ಕಿಡಿಗೇಡಿಗಳು ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ. ನಾನು ಸುತ್ತೂರು ಮಠದಲ್ಲಿ ಓದಿ ಬೆಳೆದವನಾಗಿದ್ದು, ನನ್ನ ಜೀವಮಾನದಲ್ಲಿ ಎಂದೂ ಜಾತಿ ಭೇದ ಮಾಡಿ ಗೊತ್ತಿಲ್ಲ. ಮಠ ಮಾನ್ಯಗಳು ನಮ್ಮ ಸಂಸ್ಕೃತಿಯ ಪ್ರತೀಕ, ನನಗೆ ಸುತ್ತೂರು ಮಠ ಸಂಸ್ಕಾರ ಕಲಿಸಿಕೊಟ್ಟಿದೆ. ಎಲ್ಲಾ ಜಾತಿ ಧರ್ಮಗಳ ಬಗ್ಗೆ ಗೌರವವಿದೆ. ನಾನು ಯಾವುದೇ ಜಾತಿ ಧರ್ಮದ ವಿರುದ್ಧ ಹಗುರವಾಗಿ ಮಾತನಾಡಿಲ್ಲ. ನಾಲ್ಕು ದಿನಗಳ ಹಿಂದೆಯಷ್ಟೇ ನಡೆದ ನನ್ನ ನೂತನ ಗೃಹ ಪ್ರವೇಶಕ್ಕೆ ಸುತ್ತೂರು ಶ್ರೀಗಳು ಆಗಮಿಸಿ ಆಶೀರ್ವಾದ ಮಾಡಿ ಹೋಗಿದ್ದಾರೆ. ನಾನೇಕೆ ಲಿಂಗಾಯತರ ವಿರೋಧಿಯಾಗಲಿ ಎಂದು ಪ್ರಶ್ನಿಸಿದರು.

Tap to resize

Latest Videos

ಗಣಿಗಾರಿಕೆ ಮಾರ್ಗ ಬದಲಿಸಿದ ಮಾಲೀಕರು: ರಸ್ತೆಗಾಗಿ ರೈತರ ಭೂಮಿ ಕಬಳಿಕೆ

ಯಾರೋ ಕಿಡಿಗೇಡಿಗಳು, ಯಾರದೋ ಆಡಿಯೋ ಬಳಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ನನ್ನ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಈಗಾಗಲೇ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಕ್ಷಮೆ ಕೇಳಬೇಕು ಎನ್ನುತ್ತಿರುವವರು ಮೊದಲು ನನ್ನ ತಪ್ಪನ್ನು ಸಾಬೀತು ಮಾಡಲಿ ಎಂದು ರಘು ಆಚಾರ್‌ ಸವಾಲು ಹಾಕಿದರು.

ರಾಜಕೀಯ ಮಾಡುವವರು ನೇರವಾಗಿ ಚುನಾವಣೆ ಎದುರಿಸಬೇಕು. ಅದನ್ನು ಬಿಟ್ಟು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದು. ಕಡಿಮೆ ಜನಸಂಖ್ಯೆ ಇರುವ ಸಮುದಾಯದಿಂದ ಬಂದಿರುವ ನನ್ನ ವಿರುದ್ಧ ಕುತಂತ್ರ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾನು ಚಿತ್ರದುರ್ಗದಿಂದಲೇ ಸ್ಪರ್ಧೆ ಮಾಡುತ್ತೇನೆ. ಚಿತ್ರದುರ್ಗದ ಜನರು ನನ್ನ ಭವಿಷ್ಯ ಬರೆಯುತ್ತಾರೆ. ನನ್ನ ಒಂಬತ್ತು ವರ್ಷದ ಸೇವಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಯಾರಿಗೂ ಮೋಸ ವಂಚನೆ ಎಸಗಿಲ್ಲ. ಸಂಸ್ಥೆಗಳಿಂದ ಆಯ್ಕೆಯಾಗಿ ನನ್ನನ್ನು ಗೆಲ್ಲಿಸಿದ್ದ ಜನಪ್ರತಿನಿಧಿಗಳನ್ನು ಕೇಳಲಿ, ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ರಾಜಕೀಯ ಮಾಡುತ್ತೇನೆಯೇ ಹೊರತು, ತೀರಾ ಕೆಳಮಟ್ಟಕ್ಕೆ ಇಳಿಯುವುದಿಲ್ಲ. ನಾನು ತಪ್ಪು ಮಾಡಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೆ. ತಪ್ಪೇ ಮಾಡದಿದ್ದಾಗ ಕ್ಷಮೆ ಕೇಳುವ ಅಗತ್ಯವಿಲ್ಲ, ಬದಲಾಗಿ ನಕಲಿ ಆಡಿಯೋ ಬಿಟ್ಟಿರುವ ವ್ಯಕ್ತಿ ನನ್ನ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಲಿಂಗಾಯತ ಮುಖಂಡ ಕೆ.ಆರ್‌ ಪುನೀತ್‌ ಸಿಂಗಾಪುರ, ದಲಿತ ಮುಖಂಡ ಕ್ಯಾದಿಗೆರೆ ತಿಪ್ಪೇಸ್ವಾಮಿ, ವಾಲ್ಮೀಕಿ ಸಮುದಾಯದ ಆನಂದ್‌, ಕಾಂಗ್ರೆಸ್‌ ಮುಖಂಡರಾದ ಮಹಮದ್‌ ರೆಹಮಾನ್‌, ವಸೀಂ ಬಡಾಮಖಾನ್‌ ಸುದ್ದಿಗೋಷ್ಠಿಯಲ್ಲಿದ್ದರು.

click me!