ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆ ಈಡೇರಲಿದೆ. ಇದು ಚಿಕ್ಕಬಳ್ಳಾಪುರದ ಜನತೆಗೆ ಯುಗಾದಿ ಕೊಡುಗೆ ಎಂದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್.
ಬೆಂಗಳೂರು(ಮಾ.17): ಬೆಂಗಳೂರು- ಚಿಕ್ಕಬಳ್ಳಾಪುರ ನಡುವೆ ಬಿಎಂಟಿಸಿಯ ಎರಡು ಎಸಿ ಬಸ್‌ಗಳನ್ನು ಪ್ರಾಯೋಗಿಕವಾಗಿ ಕಾರ್ಯಾಚರಣೆ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅನುಮತಿ ನೀಡಿದೆ.
ಮುಂದಿನ ಒಂದು ವಾರದೊಳಗೆ ಬಿಎಂಟಿಸಿಯ ಎರಡು ಎಸಿ ಬಸ್‌ಗಳು ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ದಿನಕ್ಕೆ ನಾಲ್ಕರಿಂದ ಆರು ಟ್ರಿಪ್ ಸಂಚರಿಸುವ ಸಾಧ್ಯತೆ ಇದೆ. ಬಸ್ ಟಿಕೆಟ್ ದರ, ಎಷ್ಟು ಟ್ರಿಪ್‌ಗಳು, ಸಮಯ ಇತ್ಯಾದಿಗಳ ನಿಗದಿ ಇನ್ನೂ ಆಗಬೇಕಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳು ಈ ಕುರಿತು ನಿರ್ಧಾರ ಕೈಗೊಂಡ ಬಳಿಕವಷ್ಟೇ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬಿಎಂಟಿಸಿ 840 ಹೊಸ ಬಸ್ ಖರೀದಿ ಸಲೀಸು
ಈ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆ ಈಡೇರಲಿದೆ. ಇದು ಚಿಕ್ಕಬಳ್ಳಾಪುರದ ಜನತೆಗೆ ಯುಗಾದಿ ಕೊಡುಗೆ ಎಂದಿದ್ದಾರೆ.
ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ. ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ. ಚಿಕ್ಕಬಳ್ಳಾಪುರದ ಜನತೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಈ ಬೇಡಿಕೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಬಿಎಂಟಿಸಿ ಉಪಾಧ್ಯಕ್ಷರಾದ ನವೀನ್‌ಕಿರಣ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.