ATM ಬಂದ್: ಹಣಕ್ಕಾಗಿ ಸಾರ್ವಜನಿಕರ ಪರದಾಟ

By Suvarna NewsFirst Published Jan 2, 2020, 7:32 AM IST
Highlights

ಹಣಕ್ಕಾಗಿ ಸಾರ್ವಜನಿಕರ ಅಲೆದಾಟ| 15 ದಿನಗಳಿಂದ ಬಾಗಿಲು ಹಾಕಿದ ಎಟಿಎಂಗಳು| ರಾಷ್ಟ್ರೀಕೃತ ಬ್ಯಾಂಕ್‌ಗಳು ಕುಂಟ ನೆಪ ಒಡ್ಡಿ ಬಾಗಿಲು ಹಾಕಿವೆ| ಖಾಸಗಿ ಎಟಿಎಂಗಳಿಗೆ ಹಣ ಪಡೆಯಲು ಹೋದ್ರೆ, ಐದು ಸಾವಿರ ಹಣ ತೆಗೆದರೆ 23 ಗಿಂತ ಹೆಚ್ಚು ಹಣ ತೆರಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ|

ಹನುಮಸಾಗರ(ಜ.02): ಗ್ರಾಮದಲ್ಲಿರುವ ನಾನಾ ಬ್ಯಾಂಕಿನ ಎಟಿಎಂಗಳು ಕಳೆದ ಹದಿನೈದು ದಿನಗಳಿಂದ ಬಾಗಿಲು ಹಾಕಿದ್ದು ಸಾರ್ವಜನಿಕರು ಹಣಕ್ಕಾಗಿ ಪರದಾಡುವಂತಾಗಿದೆ. ಸ್ಥಳೀಯವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಎಸ್‌ಬಿಐ ಇವೆರಡು ರಾಷ್ಟ್ರೀಕೃತ ಬ್ಯಾಂಕಗಳಾಗಿವೆ. ಒಟ್ಟು ನಾಲ್ಕು ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖೆ ಹಾಗೂ ಖಾಸಗಿ ಎರಡು ಎಟಿಎಂಗಳ ಗ್ರಾಮದಲ್ಲಿವೆ.

ರಾಷ್ಟ್ರೀಕೃತ ಬ್ಯಾಂಕ್‌ಗಳು ಕುಂಟ ನೆಪ ಒಡ್ಡಿ ಬಾಗಿಲು ಹಾಕಿವೆ. ಇನ್ನು ಖಾಸಗಿ ಎಟಿಎಂಗಳಿಗೆ ಹಣ ಪಡೆಯಲು ಹೋದ್ರೆ, ಐದು ಸಾವಿರ ಹಣ ತೆಗೆದರೆ 23 ಗಿಂತ ಹೆಚ್ಚು ಹಣ ತೆರಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಬ್ಯಾಂಕ್‌ನಲ್ಲಿ ಹಣವಿಟ್ಟು ನಮ್ಮ ಹಣ ನಾವು ಪಡೆಯಲು ಹೆಚ್ಚುವರಿ ಶುಲ್ಕ ನೀಡಬೇಕಾಗಿದೆ. ಇಷ್ಟಾದ್ರು ಪರವಾಗಿಲ್ಲ ಎಂದು ಖಾಸಗಿ ಸ್ವಾಮ್ಯದ ಬೇರೆ ಎಟಿಎಂಗಳಿಗೆ ಹೋದಾಗ ಒಂದೊಂದು ಸಮಯದಲ್ಲಿ ಹಣವಿದ್ದರೆ, ಇನ್ನೊಂದು ಸಮಯದಲ್ಲಿ ಹಣದ ಅಭಾವ ಕಾಡುತ್ತಿದೆ. ಹೀಗಾಗಿ, ಬ್ಯಾಂಕಿನಲ್ಲಿ ಹಣವನ್ನಿಟ್ಟು ಹಣಕ್ಕಾಗಿ ಅಲೆದಾಡುವಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಗ್ರಾಮದ ಹನುಮಸಾಗರ ಎಸ್‌ಬಿಐ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಉದಯಕುಮಾರ ಅವರು, ಎಸ್‌ಬಿಐ ಶಾಖೆಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸದಾಗಿ ಎಟಿಎಂ ಹಾಗೂ ಹಣ ಡಿಪಾಸಿಟ್‌ ಮಾಡುವ ಒಂದೇ ಮಷೀನ್‌ ಬಂದಿದೆ. ಅದನ್ನು ಅಳವಡಿಸುವ ಉದ್ದೇಶದಿಂದ ಕೆಲವು ದಿನಗಳ ಕಾಲ ಎಟಿಎಂ ಕೊಠಡಿಯನ್ನು ಬಂದ್‌ ಮಾಡಲಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಅದನ್ನು ಅಳವಡಿಸಿ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮದಲ್ಲಿರುವ ಎರಡು ರಾಷ್ಟ್ರೀಕೃತ ಬ್ಯಾಂಕಿನ ಎಟಿಎಂಗಳು ಸರಿಯಾಗಿ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿಲ್ಲ. ಸಾವಿರಾರು ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಮಾನಗಳಲ್ಲಿ ಬ್ಯಾಂಕಿನ ವಿರುದ್ಧ ಗ್ರಾಹಕರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಹಕರಾದ ಶರಣಪ್ಪ ಬೋದುರ, ರಮೇಶ ಬಡಿಗೇರ, ವೀರೇಶ ಇಳಗೇರ ಅವರು ತಿಳಿಸಿದ್ದಾರೆ. 
 

click me!