* ಅಫಜಲ್ಪುರ ಅಣ್ತಮ್ಮರ ಖತರ್ನಾಕ್ ಪ್ಲಾನ್‌ಗೆ ಪಿಎಸ್‌ಐ ಆಕಾಂಕ್ಷಿಗಳು ಪರೇಶಾನ್
* ಪರಿಚಯದವರು, ಸ್ನೇಹಿತರ ಮೊಬೈಲ್ ಬಳಕೆ, ಅಕ್ರಮದ ಶಂಕೆ ಬಾರದಂತೆ ಕ್ರಮ
* ಕುತೂಹಲ ಹೆಚ್ಚಿಸಿದ ರುದ್ರಗೌಡ ವಿಚಾರಣೆ
ಶೇಷಮೂರ್ತಿ ಅವಧಾನಿ
ಕಲಬುರಗಿ(ಏ.24): ಸಿಐಡಿ ತನಿಖೆ(CID Investigation) ಚುರುಕಾಗುತ್ತಿದ್ದಂತೆಯೇ ಪಿಎಸ್‌ಐ ಪರೀಕ್ಷಾ ಅಕ್ರಮದ(PSI Recruitment Scam) ಕರಾಳ ಮುಖಗಳು ಒಂದೊಂದಾಗಿ ಗೋಚರಿಸುತ್ತಿವೆ. ಅಕ್ರಮದಲ್ಲಿ ಬಂಧನಕ್ಕೊಳಗಾಗುತ್ತಿರುವ ಆರೋಪಿಗಳು ವಿಚಾರಣೆಯಲ್ಲಿ ಹಲವು ಅಚ್ಚರಿಗಳನ್ನು ಉಸುರಿದ್ದರಿಂದ ಅಕ್ರಮದ ತರಹೇವಾರಿ ರೂಪಗಳು ಅನಾವರಣಗೊಳ್ಳುತ್ತಿವೆ. ಅದರಲ್ಲೂ ಹಗರಣದಲ್ಲಿ ಬಂಧನಕ್ಕೊಳಾದ ಅಫಜಲ್ಪುರ ಶಾಸಕ ಎಂವೈ ಪಾಟೀಲರ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ, ಕಾಂಗ್ರೆಸ್(Congress) ಮುಖಂಡ ಮಹಾಂತೇಶ ಪಾಟೀಲ್, ಪೇದೆ ರುದ್ರಗೌಡ, ಸೊನ್ನ ಗ್ರಾಮಸ್ಥ ಶರಣಪ್ಪ ವಿಚಾರಣೆಯಲ್ಲಿ ಬಾಯಿಬಿಟ್ಟಂತಹ ಬ್ಲೂಟೂತ್(Bluetooth) ಹಗರಣದ ರಹಸ್ಯಗಳನ್ನು ಕೇಳಿ ವಿಚಾರಣಾಧಿಕಾರಿಗಳೇ ದಂಗಾಗಿದ್ದಾರೆ!
ಪಿಎಸ್‌ಐ ಪರೀಕ್ಷೆ ಬರೆದಂತಹ ಇನ್ ಸರ್ವಿಸ್ ಪೇದೆಗಳಲ್ಲೇ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ಹೆಚ್ಚಿನ ಅಂಕ ಪಡೆದು ಕಲ್ಯಾಣ ಕರ್ನಾಟಕದ(Kalyana Karnataka) ಆಯ್ಕೆ ಪಟ್ಟಿಯಲ್ಲೇ ಮೊದಲಿಗನಾಗಿದ್ದ. ಈತನ ಓಂಎಂಆರ್ ಶೀಟ್‌ನಲ್ಲಿಯೂ(OMR Sheet) ಯಾವುದೇ ದೋಷಗಳಿರಲಿಲ್ಲ. ಸಿಐಡಿ ವಿಚಾರಣೆಗೂ ಹಾಜರಾಗಿ ಬಂದಿದ್ದ. ಆದಾಗ್ಯೂ ಈತ ಬ್ಲೂಟೂತ್ ಬಳಸಿ ಪಾಸಾಗಿದ್ದಾನೆಂಬ ಖಚಿತ ಮಾಹಿತಿ ಆಧರಿಸಿ ಸಿಐಡಿ ಆತನ ವಿಚಾರಣೆಗೊಳಪಡಿಸಿದಾಗ ಹಗರಣದ ಬಣ್ಣವೇ ಬಯಲಾಗಿದೆ.
ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐ ನೇಮಕದಲ್ಲೂ ಅಕ್ರಮ?
ಪರಿಚಯದವರು, ಸ್ನೇಹಿತರ ಮೊಬೈಲ್ ಬಳಕೆ:
ಬ್ಲೂಟೂತ್ ಡಿವೈಸ್ ಬಳಸಿ ನಕಲು ಮಾಡಬೇಕಾದರೆ 2 ಮೊಬೈಲ್ ಸೆಟ್ ಬೇಕೇಬೇಕು. ಇವರೆಲ್ಲರಿಗೂ ಸಂಪರ್ಕದಲ್ಲಿದ್ದ ಹಗರಣ ರೂವಾರಿಗಳು ಹೊಸ ಮೊಬೈಲ್, ಸಿಮ್ ಬೇಡ, ಹಳೆ ಮೊಬೈಲ್ ಇದ್ದರೆ ಅನುಕೂಲ ಎಂಬ ಸೂಚನೆ ರವಾನಿಸಿದಾಗ ಆಗ ಅಯ್ಯಣ್ಣ ಬಳಸಿದ್ದು ತನ್ನ ಗೆಳೆಯ ರುದ್ರಗೌಡನಿಗೆ ಸೇರಿದ್ದ ಮೊಬೈಲ್. ಈ ಸಂಗತಿಯನ್ನು ಖುದ್ದು ರುದ್ರಗೌಡ, ಅಯ್ಯಣ್ಣ ಇಬ್ಬರು ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ.
ಇವರಿಬ್ಬರೂ ಪೇದೆಗಳು, ಸ್ನೇಹಿತರು ಬೇರೆ. ಇಲ್ಲಿನ ಪೊಲೀಸ್(Police) ವಸತಿ ಗ್ರಹದ ಒಂದೇ ಬ್ಲಾಕ್‌ನಲ್ಲಿ ನೆರೆಹೊರೆ ಆಗಿದ್ದವರು. ಹಗರಣದಲ್ಲಿ ಮೊಬೈಲ್ ಬಳಕೆಗೆ ಯಾಕೆ ಅವಕಾಶ ನೀಡಿದೆ ಎಂಬ ಸಿಐಡಿ ಪ್ರಶ್ನೆಗೆ ರುದ್ರಗೌಡ ತನಗಿದು ಗೊತ್ತಿ ಇಲ್ಲವೆಂಬ ಸಮಜಾಯಿಷಿ ನೀಡಿದ್ದಾನೆ. ಆದರೆ ಅಯ್ಯಣ್ಣನ ಬ್ಲೂಟೂತ್ ಕಾರ್ಯಾಚರಣೆಯಲ್ಲಿ ಈತನದ್ದೇ ಮೊಬೈಲ್ ಬಳಕೆಯಾಗಿದೆ. ಇದರ ಜೊತೆಗೇ ಸೊನ್ನದ ಶರಣಬಸಪ್ಪ ಎಂಬಾತನ ಮೊಬೈಲ್ ಕೂಡ ಬಳಕೆಯಾಗಿರೋದು ಖಚಿತವಾಗಿದೆ. ಇವೆರಡೂ ಮೊಬೈಲ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಬಳಸಿದ ನಂತರ ಮತ್ತೆ ಬಳಕೆಯೇ ಆಗಿಲ್ಲ!
ಸದರಿ ಪ್ರಕರಣದಲ್ಲಿ ಬಂಧಿತನಾಗಿರುವ ಪೇದೆ ರುದ್ರಗೌಡ ಹೆಸರು ಕಲಬುರಗಿ ಸಂಚಾರ ಠಾಣೆಯಲ್ಲಿ ಕಳೆದ ವರ್ಷ ಸುದ್ದಿಯಾಗಿದ್ದ ಮರಳು ಟಿಪ್ಪರ್ ಕಳವಿನ ಪ್ರಕರಣದಲ್ಲಿತ್ತು. ಠಾಣೆಯ ಎಸ್‌ಐ ಟಿಪ್ಪರ್ ಜಪ್ತಿ ಮಾಡಿ ಠಾಣೆಯ ಮುಂದೆ ನಿಲ್ಲಿಸಿದ್ದಾಗಲೇ ಸದರಿ ಟಿಪ್ಪರ್ ಮಾಯವಾಗಿತ್ತು. ಟಿಪ್ಪರ್ ಕಾಣೆಯಾಗಿದೆ ಎಂದು ಎಸ್‌ಐ ದಾಖಲಿಸಿದ್ದ ದೂರಿನಲ್ಲಿ ರುದ್ರಗೌಡ ಹೆಸರು ಪ್ರಸ್ತಾಪವಾಗಿದ್ದನ್ನು ಸ್ಮರಿಸಬಹುದು.
ಬ್ಲೂಟೂತ್ ಅಕ್ರಮದಲ್ಲಿ ಬಳಕೆಯಾದ ಮೊಬೈಲ್‌ಗಳ ವಿಚಾರದಲ್ಲಿ ಸಿಐಡಿಗೆ ಪಕ್ಕಾ ಪುರಾವೆ ದೊರಕಿದ್ದರಿಂದ ಹಗರಣದಲ್ಲಿ ಯಾರ್ಯಾರ ಪಾತ್ರ ಎಂಬುದು ಪತ್ತೆ ಹಚ್ಚೋದು ಸುಲಭವಾಗಲಿದೆ. ಸಾಮಾನ್ಯವಾಗಿ ಬ್ಲೂಟೂತ್ ಬಳಸಿ ನಡೆಯೋ ನಕಲು, ಅಕ್ರಮಗಳನ್ನು ಸಾಬೀತು ಪಡಿಸೋದು ಕಷ್ಟ, ಆದರಿಲ್ಲಿ ಕಲಬುರಗಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದಿರೋ ಬ್ಲೂಟೂತ್ ಅಕ್ರಮ ಸಿಐಡಿ ಪತ್ತೆಹಚ್ಚಿ ಅಚ್ಚರಿ ಮೂಡಿಸಿದೆ.
ಅಡ್ಡ ದಾರಿ ಹಿಡಿದವ್ರರಲ್ಲಿ ಬಿಇ, ಎಂಬಿಎ ಪದವೀಧರರು!
ಪಿಎಸ್‌ಐ ಆಗಬೇಕೆಂಬ ಆಕಾಂಕ್ಷೆಯಲ್ಲಿ ಅಡ್ಡದಾರಿ ಹಿಡಿದು ಸಿಐಡಿ ಖೆಡ್ಡಾಕ್ಕೆ ಬಿದ್ದವರಲ್ಲಿ ಬಿಇ, ಎಂಬಿಎ, ಎಂಎ ಪದವೀಧರರೂ ಇದ್ದಾರೆ. ಈಗಾಗಲೇ ಸಿಐಡಿ ಬಂಧಿಸಿರುವ ಪಿಎಸ್‌ಐ ಪರೀಕ್ಷೆ ಪಾಸಾದವರಲ್ಲಿ ರಾಯಚೂರಲ್ಲಿ ಜೈಲ್ ವಾರ್ಡರ್ ಆಗಿರೋ ಚೇತನ ನಂದಗಾಂವ್, ರಾಯಚೂರಿನ ಪ್ರವೀಣ ಕೆ ಇವರಿಬ್ಬರೂ ಬಿಇ ಪದವೀಧರರು, ಎಎಸ್‌ಐ ಪುತ್ರ ವಿರೇಶ ಎಂಬಿಎ ಪದವೀಧರ, ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ಮೂಲತಃ ಮುದೇನೂರಿನವ, ಬಿಎ, ಬಿಎಡ್ ಪದವೀಧರ. ಅಕ್ರಮದ ಆರೋಪದಲ್ಲಿ ಸಿಐಡಿ ವಶದಲ್ಲಿರುವ ಅಫಜಲ್ಪುರ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ್ ಎಂಎ (ಇತಿಹಾಸ) ಸ್ನಾತಕೋತ್ತರ ಪದವೀಧರ.
ಪಿಎಸ್‌ಐ ಆಕಾಂಕ್ಷಿಗಳಿಗೆ ಗಾಳ ಹಾಕೋದೇ ಮಹಾಂತೇಶ ಕೆಲ್ಸ
ಸೊನ್ನದ ಮಹಾಂತೇಶ ಪಾಟೀಲ್ ಮೊದಮೊದಲು ಇಂತಹ ಅಕ್ರಮಗಳಿಗೆಲ್ಲ ಸೊಪ್ಪು ಹಾಕದೆ ಹೋದರು ಬರಬರುತ್ತ ಸಹೋದರ ನಡೆಸುವ ಇಂತಹ ಕೆಲಸಗಳಲ್ಲಿ ತಮ್ಮದು ಕೊಡುಗೆ ನೀಡಿದವರು. ಈ ಸಂಗತಿ ವಿಚಾರಣೆಯಲ್ಲಿ ಅವರೇ ಬಾಯಿ ಬಿಟ್ಟಿದ್ದಾರೆ. ಯಾರಾದರೂ ಪರೀಕ್ಷೆ ಬರೆದವರು, ನಂಬಿಕಸ್ತರು, ಹಣವಂತರು ಇರೋರನ್ನ ಹೀಗೆಲ್ಲಾ ಪರಿಶೀಲನೆ ನಡೆಸಿ ಅವರನ್ನ ಹುಡುಕಿ ತರೋದು ಮಹಾಂತೇಶ ಕೆಲ್ಸವಾಗಿತ್ತಂತೆ!
ಪಿಎಸ್‌ಐ ನೇಮಕಾತಿ ಅಕ್ರಮ: 545 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್
ಪರೀಕ್ಷೆಯಲ್ಲಿನ(Exams) ಅಕ್ರಮ ದಾರಿಗಳಿಗೆ ತಾಂತ್ರಿಕ ನೆರವು ನೀಡೋದು ಮಾಡಿದ್ದಾರೆ, ಬ್ಲೂಟೂತ್ ಡಿವೈಸ್ ಬಳಕೆಗೆ ಬೇಕಾಗುವ ಮೋಬೈಲ್ ಸೊನ್ನ ಊರಿನವರೊಬ್ಬರಿಂದ ತಂದು ಬಳಸಿರೋದನ್ನ ಅವರೇ ಒಪ್ಪಿಕೊಂಡಿದ್ದಾರೆಂಬುದು ಸಿಐಡಿ ಮೂಲಗಲು ಖಚಿತಪಡಿಸಿವೆ. ರಾಜಕೀಯವಾಗಿ ಹಲವು ಸ್ಥಾನಮಾನ ಹೊಂದಿದ್ದ ಮಹಾಂತೇಶ ಮುಂಬರುವ ಅಸೆಂಬ್ಲಿ ಇಲೆಕ್ಷನ್ ಕಣಕ್ಕಿಳಿಯೋ ಆಕಾಂಕ್ಷೆ ಹೊಂದಿದ್ದರು ಎಂದು ಅಫಜಲ್ಪುರದವರು ಹೇಳುತ್ತಿದ್ದಾರೆ.
ಕುತೂಹಲ ಹೆಚ್ಚಿಸಿದ ರುದ್ರಗೌಡ ವಿಚಾರಣೆ
ಈಗಾಗಲೇ ಸಿಐಡಿಯಿಂದ ಬಂಧಿತನಾಗಿರುವ ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ವಿಚಾರಣೆಯಿಂದ ಅದ್ಯಾವ ಸಂಗತಿಗಳು ಬಯಲಾಗಲಿವಿಯೋ ಎಂಬ ಕುತೂಹಲ ಮೂಡಿದೆ. ಪಿಎಸ್‌ಐ ಜೊತೆಗೇ ಅನೇಕ ಪರೀಕ್ಷೆಗಳಲ್ಲಿಯೂ ಅಕ್ರಮ ಎಸಗಿರುವ ಆರೋಪಗಳು ಕೇಳಿ ಬರುತ್ತಿದ್ದು ಸಿಐಡಿ ಎಲ್ಲಾ ಮಗ್ಗುಲದಿಂದಲೂ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಇನ್ನು ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ(Diya Hagaragi) ಜೊತೆಗೂ ಅಕ್ರಮದ ಅನೇಕ ಕಟು ಸತ್ಯಗಳು ಇರೋದರಿಂದ ಇವರ ಬಂಧನಕ್ಕೂ ಸಿಐಡಿ ಜಾಲ ಬೀಸಿದೆ.