ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಆನೆ ಸಾವು: ಬೆಳೆ ತಿನ್ನಲು ಬಂದ ಕಾಡಾನೆ ಕೊಂದು ಹೊಲದಲ್ಲೇ ಹೂಳಿದ ಜಮೀನ್ದಾರ!

By Sathish Kumar KH  |  First Published Dec 6, 2023, 6:25 PM IST

ಕನಕಪುರದ ಕಾಡಂಚಿನ ಜಮೀನ್ದಾರನೊಬ್ಬ ತಮ್ಮ ಹೊಲದಲ್ಲಿನ ಬೆಳೆಯನ್ನು ತಿನ್ನಲು ಬಂದಿದ್ದ ಆನೆಯನ್ನು ಸಾಯಿಸಿ ಜಮೀನಿನಲ್ಲಿಯೇ ಹೂತು ಹಾಕಿದ ದುರ್ಘಟನೆ ನಡೆದಿದೆ.


ರಾಮನಗರ (ಡಿ.06): ಇಡೀ ರಾಜ್ಯವೇ ಕಳೆದೆರಡು ದಿನಗಳಿಂದ 8 ಬಾರಿ ಮೈಸೂರು ದಸರಾ ಅಂಬಾರಿಯನ್ನು ಹೊತ್ತು ಜನಮನ್ನಣೆ ಗಳಿಸಿದ್ದ ಅರ್ಜುನ ಆನೆಯ ಸಾವಿನಿಂದ ಕಂಗೆಟ್ಟಿದೆ. ಆದರೆ, ಇಲ್ಲೊಬ್ಬ ಜಮೀನ್ದಾರ ತನ್ನ ಹೊಲದಲ್ಲಿನ ಬೆಳೆ ರಕ್ಷಣೆಗೆ ಅಳವಡಿಕೆ ಮಾಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಆನೆಯನ್ನು ತನ್ನ ಜಮೀನಿನಲ್ಲಿಯೇ ಸದ್ದಿಲ್ಲದೇ ಹೂತು ಹಾಕಿ ಸುಮ್ಮನಾಗಿರುವ ದುರ್ಘಟನೆ ಸಂಭವಿಸಿದೆ.

ಹೌದು, ಕಾಡಂಚಿನ ಪ್ರದೇಶಗಳಲ್ಲಿರುವ ರೈತರು ತಮ್ಮ ಬೆಳೆಗಳ ರಕ್ಷಣೆಗಾಗಿ ವಿವಿಧ ಮಾರ್ಗಗಳನ್ನು ಅನುಕರಣೆ ಮಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಪ್ರಾಣಕ್ಕೆ ಹಾನಿಯಾಗುವಂತೆ ಯಾವುದೇ ಕಾರ್ಯಗಳನ್ನು ಮಾಡಬಾರದು ಎಂದು ಅರಣ್ಯ ಇಲಾಖೆಯ ನಿಯಮವಿದೆ. ಇಲ್ಲೊಬ್ಬ ರೈತ ತನ್ನ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಜಮೀನಿನ ಸುತ್ತಲೂ ತಂತಿ ಬೇಲಿಯನ್ನು ಅಳವಡಿಕೆ ಮಾಡಿದ್ದಾನೆ. ಆದರೆ, ಸುಲಭವಾಗಿ ತನಗೆ ಆಹಾರ ಸಿಕ್ಕಿದೆ ಎಂದು ತಂತಿ ಬೇಲಿಯನ್ನು ನೋಡದೇ ರೈತನ ಜಮೀನಿನತ್ತ ನುಗ್ಗಿಬಂದ ಒಂಟಿ ಸಲಗ ವಿದ್ಯುತ್ ಸ್ಪರ್ಷದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಆದರೆ, ರಾಜ್ಯದಲ್ಲಿ ಅರ್ಜುನ ಆನೆಯ ಸಾವಿನಿಂದ ಇಡೀ ರಾಜ್ಯದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ಮನಗಂಡು ತನಗೂ ದೊಡ್ಡ ಮಟ್ಟದ ಅಪಾಯ ಎದುರಾಗಬಹುದೆಂದು ತಿಳಿದ ಜಮೀನ್ದಾರ ಮೃತ ಆನೆಯನ್ನು ತಮ್ಮದೇ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದಾನೆ.

Tap to resize

Latest Videos

ಅರ್ಜುನನ ಕೊಂದ ಕಾಡಾನೆಯ ಸೆರೆ ಹಿಡಿದು ಜನರ ಮುಂದೆ ನಿಲ್ಲಿಸ್ತೇವೆ: ಶಪಥ ಮಾಡಿದ ಮಾವುತ

ಇನ್ನು ಘಟನೆ ನಡೆದು ಎರಡು ದಿನಗಳ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಆಗ ಬಂದು ಜಮೀನ್ದಾರನನ್ನು ವಿಚಾರಣೆ ಮಾಡಿದಾಗ ವಿದ್ಯುತ್ ತಂತಿ ಸ್ಪರ್ಶಿಸಿ 14 ವರ್ಷದ ಗಂಡಾನೆ ಸಾವನ್ನಪ್ಪಿರುವ ಸತ್ಯ ಬಹಿರಂಗವಾಗಿದೆ. ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿಬೇಲಿ ಹಾಕಿದ್ದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಕನಕಪುರ ಅರಣ್ಯ ವಲಯದ ಕೋಡಿಹಳ್ಳಿಯಲ್ಲಿ ಘಟನೆ ನಡೆದಿದೆ. ನಂಜೇಗೌಡ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಾಡಾನೆ ಸಾವಾಗಿದ್ದು, ಅದನ್ನು ಯಾರಿಗೂ ತಿಳಿಸದೇ ಒಂದು ಜೆಸಿಬಿಯನ್ನು ತರಿಸಿ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದಾನೆ ಎಂಬುದು ತಿಳಿದುಬಂದಿದೆ.

ಒಬ್ಬ ವಕೀಲನಿಗೆ ಹೊಡೆದ್ರೆ, 100 ಪೊಲೀಸರ ಕೊಲೆ ಮಾಡ್ತೀವೆಂದ ಹಿರಿಯ ವಕೀಲರಿಂದ ಬೇಷರತ್ ಕ್ಷಮೆ!

ಸ್ಥಳೀಯರ ದೂರಿನ ಆಧಾರದಲ್ಲಿ ಜಮೀನ್ದಾರನ ಹೊಲದಲ್ಲಿ ಬಂದು ಆನೆಯನ್ನು ಹೂತು ಹಾಕಿದ್ದ ಸ್ಥಳ ಪರಿಶೀಲನೆ ಮಾಡಿದ ಡಿಎಫ್ಓ ರಾಮಕೃಷ್ಣಯ್ಯ, ಆರ್ ಎಫ್ಓ ದಾಳೇಶ್ ಅವರು ಮರಣೋತ್ತರ ಪರೀಕ್ಷೆ ಮಾಡುವ ಉದ್ದೇಶದಿಂದ ಆನೆಯ ಕಳೇಬರವನ್ನು ತೆಗೆದು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಆನೆ ದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಬಳಿಕ ಅದೇ ಜಾಗದಲ್ಲಿ ಪುನಃ ಕಾಡಾನೆಯ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ಜಮೀನ್ದಾರ ನಂಜೇಗೌಡ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

click me!