ಆ್ಯಪ್‌ ಬಳಸಿ ಕಾರು ಕಳ್ಳತನ!

By Web DeskFirst Published Jul 4, 2019, 8:54 AM IST
Highlights

ಆ್ಯಪ್ ಬಳಸಿಕೊಂಡು ತಂತ್ರಜ್ಞಾನದ ಸಹಾಯದಿಂದ ಕಳ್ಳರು ಕಾರು ಕಳವು ಮಾಡಿದ್ದಾರೆ.  ಇಬ್ಬರು ಚಾಲಾಕಿ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಬೆಂಗಳೂರು [ಜು.03] :  ಸರ್ವೀಸ್ ಸೆಂಟರ್‌ಗಳಲ್ಲಿ ಬಳಸುವ ಆ್ಯಪ್‌ ಅನ್ನು ತಮ್ಮ ಟ್ಯಾಬ್‌ಗೆ ಅಳವಡಿಸಿಕೊಂಡು, ಅದರ ಮೂಲಕ ಕಾರುಗಳನ್ನು ಕದ್ದು ಹಣ ಸಂಪಾದಿಸುತ್ತಿದ್ದ ಇಬ್ಬರು ಚಾಲಾಕಿ ಖದೀಮರು ಬೊಮ್ಮನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚೆನ್ನೈನ ಶಂಕರ ನಗರದ ನಿವಾಸಿ ಸದ್ದಾಂ ಹುಸೇನ್‌ ಅಲಿಯಾಸ್‌ ಬಾಯ್‌ ಹಾಗೂ ವೆಲ್ಲೂರಿನ ಬಾಬು ಬಂಧಿತರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸಲ್ಮಾನ್‌ ಪತ್ತೆಗೆ ತನಿಖೆ ನಡೆದಿದೆ.

ಗುರು ಕಲಿಸಿದ ಪಾಠ:

ಸದ್ದಾಂ ಹುಸೇನ್‌ ಹಾಗೂ ಬಾಬು, ಕಳ್ಳತನ ಸಲುವಾಗಿ ಚೆನ್ನೈನಿಂದ ನಗರಕ್ಕೆ ಬರುತ್ತಿದ್ದರು. ಮುಂಜಾನೆ ಹೊತ್ತಿನಲ್ಲಿ ನಗರ ಪ್ರವೇಶಿಸುತ್ತಿದ್ದ ಅವರು, ಕೆಲವೇ ಗಂಟೆಗಳಲ್ಲಿ ದುಬಾರಿ ಮೌಲ್ಯದ ಕಾರುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಈ ಆರೋಪಿಗಳದ್ದು ಎರಡು ಮಾದರಿಯಲ್ಲಿ ಕಳ್ಳತನ ಕೃತ್ಯಗಳಾಗಿವೆ. ಒಂದು ಟ್ಯಾಬ್‌ನ ಆ್ಯಪ್‌ ಬಳಸಿ ಕಾರುಗಳ ಲಾಕ್‌ ತೆರೆಯುವುದು, ಇಲ್ಲವೆ ಚಾಲಕನ ಆಸನದ ಪಕ್ಕದ ಬಾಗಿಲಿನ ಸಣ್ಣ ಕಿಟಕಿ ಒಡೆದು ಅದರ ಮೂಲಕ ಕಾರುಗಳ ಲಾಕ್‌ ತೆರೆಯುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮನೆ ಮುಂದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಕಾರುಗಳನ್ನೇ ಗುರಿಯಾಗಿಸಿ ಸದ್ದಾಂ ತಂಡ ಕೃತ್ಯ ಎಸಗುತ್ತಿತ್ತು. ಈ ದುಷ್ಕೃತ್ಯಕ್ಕೆ ಸಲ್ಮಾನ್‌ ಮಾಸ್ಟರ್‌ ಮೈಂಡ್‌ ಆಗಿದ್ದು, ಆತನ ಮೂಲಕವೇ ಟ್ಯಾಬ್‌ ಬಳಸಿ ಕಳ್ಳತನ ಮಾಡುವುದನ್ನು ಸದ್ದಾಂ ಕಲಿತುಕೊಂಡಿದ್ದ. ಹೀಗಾಗಿ ತಲೆಮರೆಸಿಕೊಂಡಿರುವ ಆತನ ಗುರುವಿನ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ವಿಸ್‌ ಸೆಂಟರ್‌ಗಳಲ್ಲಿ ವಾಹನಗಳ ರಿಪೇರಿ ಸಲುವಾಗಿ ಕೆಲವರು ಆ್ಯಪ್‌ ಬಳಸುತ್ತಾರೆ. ಆ್ಯಪ್‌ ಮೂಲಕ ವಾಹನದ ಯಾವ ಭಾಗದಲ್ಲಿ ತೊಂದರೆ ಉಂಟಾಗಿದೆ ಎಂಬುದು ಪತ್ತೆ ಹಚ್ಚಿ, ಅಲ್ಲಿ ರಿಪೇರಿ ಮಾಡುತ್ತಾರೆ. ಈ ರೀತಿಯ ಆ್ಯಪ್‌ ಅನ್ನು ತಮ್ಮ ಟ್ಯಾಬ್‌ಗೆ ಅಳವಡಿಸಿಕೊಂಡಿದ್ದ ಆರೋಪಿಗಳು, ಅದನ್ನು ಉಪಯೋಗಿಸಿ ಕಾರುಗಳನ್ನು ಕದಿಯುತ್ತಿದ್ದ. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುತ್ತಿದ್ದ ಕಾರುಗಳನ್ನು ಗುರುತಿಸುತ್ತಿದ್ದ ಆರೋಪಿಗಳು, ಅವುಗಳ ಪಕ್ಕದಲ್ಲಿ ಬಂದು ನಿಲ್ಲುತ್ತಿದ್ದರು. ಬಳಿಕ ಟ್ಯಾಬ್‌ನಲ್ಲಿದ್ದ ಆ್ಯಪ್‌ಅನ್ನು ಕಾರಿನ ಕೀಗೆ ಸಂಪರ್ಕಿಸಿ ಲಾಕ್‌ ತೆರೆಯುತ್ತಿದ್ದರು.

ಹೀಗೆ ಕದ್ದ ಕಾರುಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಇದೇ ರೀತಿ ಎರಡೂವರೆ ತಿಂಗಳ ಹಿಂದೆ ಬೊಮ್ಮನಹಳ್ಳಿ ಸಮೀಪ ಜ್ಞಾನಭಾರತಿ ಶಾಲೆ ಮುಂದೆ ವಂದನ್‌ ಎಂಬುವವರ ಸ್ವಿಫ್ಟ್‌ ಕಾರನ್ನು ಆರೋಪಿಗಳು ಕದ್ದಿದ್ದರು. ಈ ಪ್ರಕರಣ ಸಂಬಂಧ ಕೆಲವರನ್ನು ವಿಚಾರಣೆ ನಡೆಸಿದಾಗ ತಮಿಳುನಾಡಿನ ಗ್ಯಾಂಗ್‌ವೊಂದು ನಗರದಲ್ಲಿ ಸಕಿಯವಾಗಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ಮುಂದುವರಿಸಿದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ವಿವರಿಸಿದ್ದಾರೆ.

ಈ ತಂಡದಿಂದ 1 ಕೋಟಿ ರು. ಮೌಲ್ಯದ 15 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಸೂರ್ಯಸಿಟಿ, ಬೊಮ್ಮನಹಳ್ಳಿ, ಕೋರಮಂಗಲ, ಪರಪ್ಪನ ಅಗ್ರಹಾರ ಹಾಗೂ ತಮಿಳುನಾಡಿನ ನೀಲಗಿರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 15 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಸರ್ವಿಸ್‌ ಸೆಂಟರ್‌ನಲ್ಲಿ ಕೆಲಸಗಾರರು

ವಾಹನ ಕಳ್ಳತನ ಆರಂಭಿಸುವ ಮುನ್ನ ಆರೋಪಿ ಸಲ್ಮಾನ್‌, ಸರ್ವಿಸ್‌ ಸೆಂಟರ್‌ನಲ್ಲಿ ಮೆಕ್ಯಾನಿಕ್‌ ಆಗಿದ್ದ. ಆ ವೇಳೆ ಆತನಿಗೆ ಆ್ಯಪ್‌ ಬಳಸಿ ಕಾರುಗಳ ಕೀ ತೆರೆಯುವುದನ್ನು ಕಲಿತುಕೊಂಡಿದ್ದ. ಈ ವಿದ್ಯೆಯನ್ನೇ ತನ್ನ ಸಹಚರರಿಗೂ ಆತ ಬೋಧಿಸಿದ್ದ ಎಂದು ಮೂಲಗಳು ಹೇಳಿವೆ.

click me!