ಹರಪನಹಳ್ಳಿಯಲ್ಲಿ 4 ತಿಂಗಳಿಂದ ಸರ್ಕಾರಿ ನೌಕರರಿಗೆ ವೇತನವಿಲ್ಲ!

By Web Desk  |  First Published Jul 4, 2019, 8:22 AM IST

ಇಲ್ಲಿನ ಸರ್ಕಾರಿ ನೌಕರರಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಕೂಡ ವೆತನ ದೊರಕಿಲ್ಲ. ಸಾವಿರಾರು ನೌಕರರು ವೇತನವಿಲ್ಲದೇ ಪರಿತಪಿಸುವಂತಾಗಿದೆ. 


ಹರಪನಹಳ್ಳಿ [ಜು.03] :  ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಹೈದ್ರಾಬಾದ್‌ ಕರ್ನಾಟಕ ಜಿಲ್ಲೆಯಾದ ಬಳ್ಳಾರಿಗೆ ಸೇರಿದ್ದ ಹರಪನಹಳ್ಳಿ ತಾಲೂಕಿನ ಸರ್ಕಾರಿ ನೌಕರರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಭಾಗ್ಯ ಸಿಕ್ಕಿಲ್ಲ. ಜಿಲ್ಲೆ ಬದಲಾದರೂ ಡ್ರಾಯಿಂಗ್‌ ಕೋಡ್‌ ಬದಲಾಗದಿರುವ ಸಣ್ಣ ಕಾರಣಕ್ಕೆ ಇದೀಗ ಸಾವಿರಕ್ಕೂ ಹೆಚ್ಚು ನೌಕರರು ವೇತನವಿಲ್ಲದೇ ಪರಿತಪಿಸುವಂತಾಗಿದೆ.

ಈ ಮೊದಲು ದಾವಣಗೆರೆ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದ್ದ ಹರಪನಹಳ್ಳಿ ತಾಲೂಕು ಏಳು ತಿಂಗಳ ಹಿಂದೇ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದೆ. ಪ್ರತಿ ಜಿಲ್ಲೆಯ ಡ್ರಾಯಿಂಗ್‌ ಕೋಡ್‌ ಬದಲಿರುವ ಕಾರಣ ತೋಟಗಾರಿಕೆ, ಮೀನುಗಾರಿಕೆ, ಆರೋಗ್ಯ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನೂ ಅನೇಕ ಇಲಾಖೆಗಳ ಸಾವಿರಕ್ಕೂ ಹೆಚ್ಚಿನ ಸರ್ಕಾರಿ ನೌಕರರಿಗೆ ಮಾಚ್‌ರ್‍ನಿಂದ ಜೂನ್‌ವರೆಗೆ ವೇತನವಾಗಿಲ್ಲ.

Tap to resize

Latest Videos

ಪ್ರತಿಭಟಿಸಿದವರಿಗಷ್ಟೇ ವೇತನ:

ಸರ್ಕಾರ ಫೆಬ್ರವರಿ ವರೆಗಿನ ವೇತನ ಪಾವತಿಸಿತ್ತು. ಮಾಚ್‌ರ್‍ ಬಳಿಕ ವೇತನ ಪಾವತಿಸಿಲ್ಲ. ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ ಅವರಿಗೆ ವೇತನ ಪಾವತಿಸಲಾಗಿದೆ. ಶಿಕ್ಷಣ ಮತ್ತು ಅರಣ್ಯ ಇಲಾಖೆಯ ನೌಕರರ ಸಂಘಟನೆಯವರು ತಮ್ಮ ಸಂಘದ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿ ಕೇಂದ್ರ ಸಂಘದ ಸಹಾಯದಿಂದ ಡ್ರಾಯಿಂಗ್‌ ಕೋಡ್‌ನ್ನು ಬದಲಾಯಿಸಿಕೊಂಡು ಬಂದಿದ್ದಾರೆ. ಆದರೆ, ಉಳಿದ ಇಲಾಖೆಯವರು ಹೋಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ನೌಕರರೊಬ್ಬರು ಹೇಳುತ್ತಾರೆ. ಈ ರೀತಿ ಡ್ರಾಯಿಂಗ್‌ ಕೋಡ್‌ ಬದಲಾಯಿಸಿಕೊಡಬೇಕಾದ್ದು ಸರ್ಕಾರ, ಇಲಾಖೆಯ ಜವಾಬ್ದಾರಿ. ಅದನ್ನು ಬೆಂಗಳೂರಿಗೆ ಹೋಗಿ ಒತ್ತಡ ಹೇರಿ ಮಾಡಿಕೊಳ್ಳಿಸಬೇಕಾದ ಪರಿಸ್ಥಿತಿ ಬಂದಿದ್ದು ಶೋಚನೀಯ ಎಂದು ಅವರು ಹೇಳುತ್ತಾರೆ.

ಆಗದ ಅನುದಾನ ವರ್ಗಾವಣೆ:

ಡ್ರಾಯಿಂಗ್‌ ಕೋಡ್‌ ಬದಲಾದ ಪರಿಣಾಮ ಹರಪನಹಳ್ಳಿ ತಾಲೂಕಿನ ನೌಕರರ ವೇತನ ಅನುದಾನ ಬಳ್ಳಾರಿಯ ಹೆಡ್‌ಗೆ ವರ್ಗಾವಣೆ ಆಗಬೇಕಿತ್ತು. ಆದರೆ ಈವರೆಗೂ ಆಗಿಲ್ಲ. ಹೀಗಾಗಿ ನೌಕಕರಿಗೆ ವೇತನ ನೀಡಿಲ್ಲ ಎಂಬುವುದು ಹಿರಿಯ ಅಧಿಕಾರಿಗಳ ವಾದ. ಇತ್ತ ನೌಕರರು, ಶಿಕ್ಷಣ ಹಾಗೂ ಅರಣ್ಯ ಇಲಾಖೆಗೆ ಹೇಗೆ ಅನುದಾನ ವರ್ಗಾವಣೆ ಆಗಿದೆ. ಅವರಂತೆ ನಮಗೂ ವೇತನ ಪಾವತಿಸಬೇಕು. ನಾಲ್ಕು ತಿಂಗಳಿಂದ ವೇತನವಿಲ್ಲದೆ ಮಕ್ಕಳ ಶಿಕ್ಷಣಕ್ಕೆ, ಮನೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುವುದು ನೌಕರರ ಅಳಲು.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ನೀಡುವ ಸಾದಿಲ್ವಾರ್‌ ಖರ್ಚಿನ ಹಣ ಸಹ ಬಂದಿಲ್ಲ. ಮುಖ್ಯ ಶಿಕ್ಷಕರು ತಮ್ಮ ಹಣದಿಂದ ತರಕಾರಿ ತರಿಸಿ ಮಕ್ಕಳ ಹಸಿವು ನೀಗಿಸುತ್ತಿದ್ದಾರೆ. ವೇತನ ಬಿಡುಗಡೆಗಾಗಿ ವಿವಿಧ ರೀತಿಯ ಹೋರಾಟ ನಡೆಸಲು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗನಗೌಡ, ಕಾರ್ಯದರ್ಶಿ ವೆಂಕಟೇಶ ಬಾಗಲಾರ ಖಜಾಂಚಿ ಬಿ.ಎಚ್‌.ಚಂದ್ರಪ್ಪ ಸಿದ್ಧತೆ ನಡೆಸಿದ್ದಾರೆ.

ಶೈಕ್ಷಣಿಕ ವರ್ಷ ಆರಂಭವಾಗಿದ್ದು ಮಕ್ಕಳಿಗೆ ಫೀ ಕಟ್ಟಲು ಹಣವಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಹಳ್ಳಿಗಳಿಗೆ ಓಡಾಡಲು ಬಸ್‌ ಚಾಜ್‌ರ್‍ ಹೊಂದಿಸುವುದು ಕಷ್ಟವಾಗಿದ್ದು ತಕ್ಷಣ ಸರ್ಕಾರ ನಾಲ್ಕು ತಿಂಗಳ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಂಘಟನೆ ನೇತೃತ್ವದಲ್ಲಿ ವಿವಿಧ ರೀತಿಯ ಹೋರಾಟ ನಡೆಸಲಾಗುವುದು.

- ಬಸವರಾಜ ಸಂಗಪ್ಪನವರ, ರಾಜ್ಯ ಪರಿಷತ್ತು ಸದಸ್ಯ, ಸರ್ಕಾರಿ ನೌಕರರ ಸಂಘ ಹರಪನಹಳ್ಳಿ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅಲ್ಪ ಸಂಬಳದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದು ಸಹ ಬಾರದ ಪರಿಣಾಮ ಸಂಕಷ್ಟಎದುರಿಸುತ್ತಿದ್ದಾರೆ. ತಕ್ಷಣ ಸಂಬಂಧ ಪಟ್ಟಅಧಿಕಾರಿಗಳು ಇತ್ತ ಗಮನಹರಿಸಿ ವೇತನ ಬಿಡುಗಡೆ ಕ್ರಮ ಕೈಗೊಳ್ಳಬೇಕು.

- ಸುಮಾ ನೀಲಗುಂದ, ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕರ ಫೆಡರೇಷನ್‌ ತಾಲೂಕು ಘಟಕ ಹರಪನಹಳ್ಳಿ

ನಾಲ್ಕು ತಿಂಗಳ ವೇತನವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಡ್ರಾಯಿಂಗ್‌ ಕೋಡ್‌ ಬದಲಾದ ಪರಿಣಾಮ ಈ ಸಮಸ್ಯೆಯಾಗಿದ್ದು ಮೇಲಾಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದೇವೆ. ಆದರೆ, ಸರ್ಕಾರದಿಂದ ಬಳ್ಳಾರಿಯ ಹೆಡ್‌( ಕೋಡ್‌)ಗೆ ಅನುದಾನ ವರ್ಗಾವಣೆಯಾಗಿಲ್ಲ. ಹೀಗಾಗಿ ನೌಕರರು ಸಮಸ್ಯೆಗೆ ಸಿಲುಕಿದ್ದಾರೆ.

- ಹೆಸರು ಹೇಳಲಿಚ್ಛಿಸದ ಅಧಿಕಾರಿ

ವರದಿ : ಬಿ.ರಾಮಪ್ರಸಾದ್‌ ಗಾಂಧಿ 

click me!