ಕೊರೋನಾ ಚಿಕಿತ್ಸೆಗೆ 5 ಲಕ್ಷ ಬಿಲ್‌ ಕೊಟ್ಟ ಅಪೋಲೋ..!

By Kannadaprabha NewsFirst Published Jul 30, 2020, 7:29 AM IST
Highlights

ಕೊರೋನಾ ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡಿರುವ ಇಲ್ಲಿನ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ಬರೊಬ್ಬರಿ 5 ಲಕ್ಷ ರು.ಗಳ ಬಿಲ್‌ ನೀಡಿರುವುದು ರೋಗಿಯ ಕುಟುಂಬವನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಬೆಂಗಳೂರು(ಜು.30): ಕೊರೋನಾ ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡಿರುವ ಇಲ್ಲಿನ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ಬರೊಬ್ಬರಿ 5 ಲಕ್ಷ ರು.ಗಳ ಬಿಲ್‌ ನೀಡಿರುವುದು ರೋಗಿಯ ಕುಟುಂಬವನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಕೊರೋನಾ ಸೋಂಕು ತಗುಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ವ್ಯಕ್ತಿಯೊಬ್ಬರು ಜು.8ರಂದು ಚಿಕಿತ್ಸೆಗಾಗಿ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿ ಜು.28ರಂದು ಬಿಡುಗಡೆಯಾಗಿದ್ದರು.

ಕೊರೋನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ150 ಮಂದಿ ಭಾಗಿ..! ಕೊರೋನಾ ಆತಂಕ

‘ಸುಮಾರು 21 ದಿನಗಳ ಕಾಲ ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಬರೋಬ್ಬರಿ 5 ಲಕ್ಷ ರು.ಗಳ ಬಿಲ್‌ ಮಾಡಿದೆ. ಇಷ್ಟುದೊಡ್ಡ ಮೊತ್ತ ಪಾವತಿಸಲು ಪರದಾಡಿದೆವು. ರೋಗಿಯನ್ನು ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ 50 ಸಾವಿರ ಪಾವತಿ ಮಾಡಲಾಗಿತ್ತು.

ಚಿಕಿತ್ಸೆ ಬಳಿಕ 3.5 ಲಕ್ಷ ರು. ಪಾವತಿಸಿದ್ದೇವೆ. ಇನ್ನೂ 1 ಲಕ್ಷ ರು. ಪಾವತಿ ಮಾಡಬೇಕಾಗಿದೆ ಎಂದು ಆಸ್ಪತ್ರೆ ಸೂಚನೆ ನೀಡಿದೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು. ಈ ಸಂಬಂಧ ಕುಟುಂಬ ಸದಸ್ಯರ ಪ್ರತಿಕ್ರಿಯೆ ಪಡೆಯಲು ‘ಕನ್ನಡಪ್ರಭ’ ಸಂಪರ್ಕಿಸಿತಾದರೂ ‘ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದರು.

ನಿಯಮ ಉಲ್ಲಂಘಿಸಿಲ್ಲ: ಅಪೋಲೋ

ಈ ಕುರಿತು ಸ್ಪಷ್ಟನೆ ನೀಡಿರುವ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ, ಕೊರೋನಾ ಸೋಂಕಿತ ರೋಗಿ 9 ದಿನಗಳ ಕಾಲ ತುರ್ತು ಚಿಕಿತ್ಸಾ ಘಟಕ (ಐಸಿಯು) ಸೇರಿದಂತೆ ಕಳೆದ 21 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವಿಮಾ ಯೋಜನೆ ಪ್ರಕಾರ ಬಿಲ್‌ ನೀಡಲಾಗಿದೆ. ಅಲ್ಲದೆ, ಬಿಲ್‌ ನೀಡುವುದಕ್ಕೂ ಮುನ್ನ ರೋಗಿಯ ಸಂಬಂಧಿಕರೊಂದಿಗೆ ಚರ್ಚೆ ನಡೆಸಿದ್ದೇವೆ. ಆಸ್ಪತ್ರೆಗಳಲ್ಲಿ ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ. ಅತ್ಯಂತ ಪಾರದರ್ಶಕವಾಗಿ ವ್ಯವಹಾರ ನಡೆಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಪೋಲೋ ವಿರುದ್ಧ ಕ್ರಮ: ಡಾ ಸುಧಾಕರ್‌

‘ಕೊರೋನಾ ಸೋಂಕಿತರೊಬ್ಬರ ಚಿಕಿತ್ಸೆಗೆ .5 ಲಕ್ಷಕ್ಕೂ ಹೆಚ್ಚು ಬಿಲ್‌ ಮಾಡಿರುವ ಶೇಷಾದ್ರಿಪುರದ ಅಪೊಲೋ ಆಸ್ಪತ್ರೆ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಬಿಲ್‌ ನೋಡಿ ಬೆಚ್ಚಿ ಆಸ್ಪತ್ರೆಯಿಂದಲೇ ಎದ್ದು ಹೋದ ಕೊರೋನಾ ಸೋಂಕಿತರು..!

ಅಪೊಲೋ ಆಸ್ಪತ್ರೆಯು ಜನರಲ್‌ ವಾರ್ಡ್‌ನಲ್ಲಿ ಕೋವಿಡ್‌ ರೋಗಿಯೊಬ್ಬನಿಗೆ 18 ದಿನಗಳ ಚಿಕಿತ್ಸೆಗೆ ಒಟ್ಟು 5.15 ಲಕ್ಷ ರು. ಬಿಲ್‌ ಮಾಡಿರುವ ಬಿಲ್‌ ಪ್ರತಿಯನ್ನೂ ಟ್ವೀಟ್‌ ಮಾಡಿರುವ ಸಚಿವರು, ‘ಬೆಂಗಳೂರಿನ ಶೇಷಾದ್ರಿಪುರ ಅಪೊಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಅನೇಕ ಬಾರಿ ಈ ಆಸ್ಪತ್ರೆಗೆ ಎಚ್ಚರಿಕೆ ಕೊಟ್ಟಿದ್ದೇನೆ. ಆದರೂ ಇಂದು ಕೊರೋನಾ ರೋಗಿಗೆ 5 ಲಕ್ಷ ರು. ಬಿಲ್‌ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಗಿದೆ’ ಎಂದು ಹೇಳಿದ್ದಾರೆ.

ಒಂದೇ ದಿನದಲ್ಲಿ ಕೊರೋನಾ ಪಾಸಿಟಿವ್, ನೆಗೆಟಿವ್: 84 ಸಾವಿರ ಬಿಲ್

‘ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿಯು ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಇಂದು ಅಪೊಲೋ ಆಸ್ಪತ್ರೆ ವಿರುದ್ಧ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

click me!