
ಕಲಬುರಗಿ: ಕಲಬುರಗಿ ಸರ್ಕಾರಿ ಪಪೂ ಕಾಲೇಜಿನ ಮೇಲ್ಛಾವಣಿ ಕಾಂಕ್ರೀಟ್ ಬಿದ್ದು 5 ವಿದ್ಯಾರ್ಥಿನಿಯರಿಗೆ ಗಾಯಗಳಾಗಿರುವ ಘಟನೆ ಮಾಸುವ ಮುನ್ನವೇ ಜಿಲ್ಲೆಯ ಆಳಂದ ತಾಲೂಕಿನ ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಚಿಂಚನಸೂರ ಕ್ಲಸ್ಟರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಗೋಳಗಿ (ಸಿ)ಯಲ್ಲಿ ಬಳಕೆಯಲ್ಲಿಲ್ಲದ ಹಳೆಯ ಶಾಲಾ ಕಟ್ಟಡದ ಛಾವಣಿಯ ಪದರು ಭಾನುವಾರ ಬೆಳಗಿನ ಜಾವ ಕುಸಿದು ಬಿದ್ದ ಘಟನೆ ನಡೆದಿದೆ.
ಶನಿವಾರ ಸಂಜೆ ವೇಳೆಯಲ್ಲಿ ಸುರಿದ ಕೊಂಚ ಮಳೆಯ ನಡುವೆ ಕಟ್ಟಡಕ್ಕೆ ಹೊಂದಿಕೊಂಡಿದ್ದ ಮರದ ಮೇಲೆ ಓಡಾಡುತ್ತಿದ್ದ ಮಂಗನ ಹಾರಾಟದಿಂದ ಛಾವಣಿಯ ಭಾಗ ಕುಸಿದು ಬಿದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಳೆಯ ಕಟ್ಟಡದ ವರಾಂಡಾದ ಮೇಲ್ಭಾಗದ ಛಾವಣಿಯ ಪದರು ಮತ್ತು ಅವಶೇಷಗಳು ನೆಲಕ್ಕುರುಳಿದ್ದು, ಕಟ್ಟಡದ ಶಿಥಿಲಾವಸ್ಥೆ ಮತ್ತೊಮ್ಮೆ ಬಯಲಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಣ್ಣಪ್ಪ ಹಾದಿಮನಿ, ಈ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಶಾಲೆಗೆ ಈಗಾಗಲೇ 8 ಕೊಠಡಿಗಳನ್ನು ಹೊಂದಿರುವ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಅದೇ ಕಟ್ಟಡದಲ್ಲಿ ಪಾಠ ಬೋಧನೆ ಮಾಡಲಾಗುತ್ತಿದೆ. ಮಕ್ಕಳು ಸಂಪೂರ್ಣ ಸುರಕ್ಷಿತ ವಾತಾವರಣದಲ್ಲಿದ್ದಾರೆ. ಹಳೆಯ ಕಟ್ಟಡವನ್ನು ನೆಲಸಮಗೊಳಿಸಬೇಕಾಗಿದ್ದರೂ ಅದು ಇನ್ನೂ ತೆರವುಗೊಳ್ಳದೇ ಉಳಿದಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಮಾಹಿತಿಯ ಪ್ರಕಾರ, ತಾಲೂಕಿನ ಶಾಲೆಗಳಲ್ಲಿ ಹಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅವು ಮಳೆಗಾಲದಲ್ಲಿ ಅಪಾಯದ ತಾಣಗಳಾಗಿ ಪರಿಣಮಿಸುತ್ತಿವೆ. ಬಳಕೆ ಕೈಬಿಟ್ಟಿರುವ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸದಿದ್ದರೆ ಶಾಲಾ ಆವರಣದಲ್ಲಿ ಓಡಾಡುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಅಪಾಯ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.
ತಾಲೂಕಿನ ಶಾಲೆಗಳಲ್ಲಿ ಕಳೆದ ಸಾಲಿನ ವರದಿಯಂತೆ ಒಟ್ಟು 218 ಕೊಠಡಿಗಳ ಪೈಕಿ 142 ಹೊಸ ಕೊಠಡಿಗಳು ನಿರ್ಮಾಣಗೊಂಡಿದ್ದು, ಇನ್ನೂ 76 ಶಿಥಿಲಾವಸ್ಥೆಯ ಕೊಠಡಿಗಳು ನೆಲಸಮಗೊಳಿಸುವುದಕ್ಕಾಗಿ ಕಾಯುತ್ತಿವೆ. ಕೆಲವು ಕಟ್ಟಡಗಳು ಸಾಮಾನ್ಯ ದುರಸ್ತಿಗಾಗಿ ಸಹ ನಿರೀಕ್ಷೆಯಲ್ಲಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗಾಗಲೇ ದೃಢೀಕರಣ ನೀಡಿದ್ದು, ಎಲ್ಲ ಶಾಲಾ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಅಣ್ಣಪ್ಪ ಹಾದಿಮನಿ ತಿಳಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸಂಗೋಳಗಿ ಘಟನೆಯು ಶಿಥಿಲ ಶಾಲಾ ಕಟ್ಟಡಗಳ ಸಮಸ್ಯೆಯ ಗಂಭೀರತೆಯನ್ನು ಮತ್ತೆ ನೆನಪಿಸಿದ್ದು, ಅನಾಹುತ ಸಂಭವಿಸುವ ಮುನ್ನವೇ ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಮೇಲ್ಛಾವಣಿ ಕುಸಿತ; ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!