ಫ್ರೀ ಬಸ್‌ ಪಾಸ್‌ ಅರ್ಜಿ: ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಪರದಾಟ

Published : Jun 15, 2026, 06:08 AM IST
Free bus Pass

ಸಾರಾಂಶ

ಶಾಲಾ-ಕಾಲೇಜು ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸರ್ವರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದೆ. ಒಟಿಪಿ ಬಾರದಿರುವುದು ಮತ್ತು ಬೋರ್ಡಿಂಗ್/ಡ್ರಾಪಿಂಗ್ ಪಾಯಿಂಟ್ ದೋಷಗಳಿಂದಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ಪ್ರತಿದಿನ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ. ಈ ತಾಂತ್ರಿಕ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸುತ್ತಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕೊಪ್ಪಳ: ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಉಚಿತ ಬಸ್‌ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕಳೆದ ಮೂರು ದಿನಗಳಿಂದ ಉಂಟಾಗಿರುವ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಬಸ್‌ಪಾಸ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಸರ್ವರ್ ಸಮಸ್ಯೆ ಹಾಗೂ ನಿರ್ದಿಷ್ಟವಾಗಿ ಹತ್ತುವ (ಬೋರ್ಡಿಂಗ್ ಪಾಯಿಂಟ್), ಇಳಿಯುವ (ಡ್ರಾಪ್ ಪಾಯಿಂಟ್) ಸ್ಥಳವನ್ನು ತೋರಿಸಲುತ್ತಿಲ್ಲ. ಅಲ್ಲದೆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿಲ್ಲ. ಇದರಿಂದ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ.

2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ತಾಂತ್ರಿಕ ದೋಷಗಳಿಂದ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳು ಮತ್ತು ಪೋಷಕರು ದಿನನಿತ್ಯವಾಗಿ ಪರದಾಡುವಂತಾಗಿದೆ.

ಶಾಲಾ-ಕಾಲೇಜುಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿದಿನ ದೂರದ ಊರುಗಳಿಂದ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಬಸ್‌ಪಾಸ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ಪ್ರತಿದಿನ ಬಸ್ ದರ ಪಾವತಿಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಬಸ್‌ ಪಾಸ್‌ ನೀಡಲು 60 ಕಿ.ಮೀ. ಮಿತಿ ಇದೆ. ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ವಾಸದ ಸ್ಥಳ ಮತ್ತು ಶಾಲೆ- ಕಾಲೇಜು ಇರುವ ಸ್ಥಳದ ಮಾಹಿತಿ ಸರಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪಾಸ್‌ ಅರ್ಜಿ ಭರ್ತಿ ಮಾಡಲು ತೀವ್ರ ಸಮಸ್ಯೆ ಆಗಿದೆ.

ಸಮಸ್ಯೆ ಬಗೆಹರಿಸಿ

ಕಳೆದ ಮೂರು ದಿನಗಳಿಂದ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಕ್ಕೆ ಬಸ್ ಪಾಸ್ ಅರ್ಜಿ ಸಲ್ಲಿಸಲು ಅಲೆದಾಡುತ್ತಿದ್ದರೂ ಒಟಿಪಿ ಬರುತ್ತಿಲ್ಲ. ದಿನನಿತ್ಯವೂ ಪ್ರಯಾಣ ವೆಚ್ಚ ಕೊಟ್ಟು ಶಾಲಾ ಕಾಲೇಜಿಗೆ ಹೋಗಿ ಬರಬೇಕಿದೆ. ಸರ್ವರ್ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡಬೇಕಿದೆ ಎಂದು ವಿದ್ಯಾರ್ಥಿ ಸಮರ್ಥ ಹೇಳುತ್ತಾರೆ.

ಸರ್ವರ್‌ ಸಮಸ್ಯೆ

ಹೊಸ ಬಸ್ ಪಾಸ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಒಟಿಪಿ ಸಮಸ್ಯೆ ಎದುರಾಗುತ್ತಿದ್ದು, ಸರಿಯಾಗಿ ಸರ್ವರ್ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯಾರ್ಥಿ ಸ್ವಂತ ಸ್ಥಳ ಹಾಗೂ ಶಾಲಾ-ಕಾಲೇಜು ಇರುವ ಸ್ಥಳದ ಬೋರ್ಡಿಂಗ್ ಪಾಯಿಂಟ್ ಹಾಗೂ ಡ್ರಾಪಿಂಗ್ ಪಾಯಿಂಟ್ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಒನ್ ಸಿಬ್ಬಂದಿ ವೀರೇಶ್ ಕರಡಿ ಅವರು ಹೇಳುತ್ತಾರೆ.

ಸರ್ಕಾರದ ಗಮನಕ್ಕೆ:

ಜೂ.13ರ ವರೆಗೆ 469 ಬಸ್ ಪಾಸ್ ವಿತರಿಸಲಾಗಿದ್ದು, ಸದ್ಯ ಸರ್ವರ್ ಸಮಸ್ಯೆ ಎದುರಾಗಿದೆ. ಬೋರ್ಡಿಂಗ್ ಪಾಯಿಂಟ್ ಹಾಗೂ ಡ್ರಾಪಿಂಗ್ ಪಾಯಿಂಟ್ ಬಗ್ಗೆ ಇರುವ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

-ಶಿವಶಂಕರಗೌಡ ಪಾಟೀಲ, ಡಿಪೋ ಮ್ಯಾನೇಜರ್, ಕುಷ್ಟಗಿ ಬಸ್ ಡಿಪೋ.

ಶೈಕ್ಷಣಿಕ ಭವಿಷ್ಯಕ್ಕೆ ಹಿನ್ನಡೆ:

ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಸೌಲಭ್ಯ ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿದಿನ ಹತ್ತಾರು ಕಿಲೋಮೀಟರ್ ದೂರ ಪ್ರಯಾಣಿಸಿ ಶಾಲಾ, ಕಾಲೇಜುಗಳಿಗೆ ಹಾಜರಾಗುತ್ತಾರೆ. ಬಸ್‌ಪಾಸ್ ಇಲ್ಲದೆ ಪ್ರಯಾಣ ವೆಚ್ಚ ಹೆಚ್ಚಾಗುವುದರಿಂದ ಆರ್ಥಿಕ ಹೊರೆ ಜತೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುವ ಸಾಧ್ಯತೆಯೂ ಇರುತ್ತದೆ. ಸಂಬಂಧಿಸಿದ ಇಲಾಖೆಗಳು ಹಾಗೂ ತಾಂತ್ರಿಕ ತಜ್ಞರು ಕೂಡಲೇ ಸರ್ವರ್ ಸಮಸ್ಯೆ ಪರಿಹರಿಸಿ ಅರ್ಜಿ ಪ್ರಕ್ರಿಯೆ ಸುಗಮಗೊಳಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ವರುಣನ ಅಬ್ಬರಕ್ಕೆ ಸಿಲುಕಿದ ಬೆಂಗಳೂರು, ದಕ್ಷಿಣ ಕನ್ನಡ; ಎಲ್ಲಿ, ಎಷ್ಟು ಮಳೆ? ಇಲ್ಲಿದೆ ಮಾಹಿತಿ
ರಾಜಸ್ಥಾನದಲ್ಲಿ ಲಂಚ ಕೇಳಿ ಸಿಕ್ಕಿಬಿದ್ದ ಬೆಂಗ್ಳೂರು ಖಾಕಿ: ಲೇಡಿ SI, ಮುಖ್ಯಪೇದೆಗಳ ಬಂಧನ