ಬೆಂಗಳೂರು: ಮೆಟ್ರೋದ ಮತ್ತೊಂದು ಭಾರೀ ಅವಾಂತರ..!

By Kannadaprabha NewsFirst Published Jan 13, 2023, 6:45 AM IST
Highlights

ಮೆಟ್ರೋ ಸುರಂಗ ಹಾದು ಹೋದ ಬ್ರಿಗೇಡ್‌ ರಸ್ತೆಯಲ್ಲಿ 3-4 ಮೀ. ಅಗಲ, 5-8 ಅಡಿ ಆಳಕ್ಕೆ ಕುಸಿದ ಮಣ್ಣು, ಗುಂಡಿ ಸುತ್ತಲೂ ಬಿರುಕು, ಗುಂಡಿ ತಪ್ಪಿಸಲು ಹೋಗಿ ಬಿದ್ದ ಬೈಕ್‌ ಸವಾರಗೆ ಗಾಯ, ತಕ್ಷಣ ಪೊಲೀಸರಿಂದ ಬ್ಯಾರಿಕೇಡ್‌, ರಸ್ತೆ ಸಂಚಾರ ಬಂದ್‌, ಸಿಮೆಂಟ್‌ ಹಾಕಿ ದುರಸ್ತಿ

ಬೆಂಗಳೂರು(ಜ.13):  ಮೆಟ್ರೋ ಸುರಂಗ ಕಾಮಗಾರಿ ಕಾರಣದಿಂದ ಪ್ರತಿಷ್ಠಿತ ಬ್ರಿಗೇಡ್‌ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಏಕಾಏಕಿ ದೊಡ್ಡ ಗುಂಡಿ ಬಿದ್ದು ಆತಂಕಕ್ಕೆ ಕಾರಣವಾಯಿತು. ಇದೇ ವೇಳೆ ಬೈಕ್‌ ಸವಾರರೊಬ್ಬರು ಸಮೀಪವೇ ಬಿದ್ದು ಅದೃಷ್ಟವಶಾತ್‌ ಸಣ್ಣಪುಟ್ಟ ಗಾಯದೊಂದಿಗೆ ಬಚಾವಾದರು. ಎರಡು ದಿನಗಳ ಹಿಂದಷ್ಟೇ ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್‌ ಕುಸಿದು ತಾಯಿ ಮಗ ಮೃತಪಟ್ಟ ದುರ್ಘಟನೆ ಇನ್ನೂ ಹಸಿರಾಗಿರುವಾಗಲೇ ಈ ಘಟನೆ ನಡೆದಿರುವುದು ಜನತೆಯ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಆಡುಗೋಡಿ- ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ವೆಲ್ಲಾರ್‌ ಜಂಕ್ಷನ್‌ನ ಬ್ರಿಗೇಡ್‌ ಟವರ್‌ ಬಳಿಯಲ್ಲಿ ಮಧ್ಯಾಹ್ನ 2ರ ಸುಮಾರಿಗೆ ರಸ್ತೆಯ ಕೆಳಮಣ್ಣು ಸಡಿಲಗೊಂಡು ಕುಸಿಯಿತು. ನೋಡ ನೋಡುತ್ತಲೆ 3-4 ಮೀಟರ್‌ ಅಗಲ 5-8 ಅಡಿ ಆಳದಷ್ಟುಗುಂಡಿ ಉಂಟಾಯಿತು. ರಸ್ತೆ ಸುತ್ತಲು ಸಣ್ಣಪ್ರಮಾಣದ ಬಿರುಕು ಕೂಡ ಕಾಣಿಸಿತು.

ಮೆಟ್ರೋ ಪಿಲ್ಲರ್‌, ರಸ್ತೆ ಗುಂಡಿಯಿಂದ ಜನರ ಸಾವಿಗೆ ಸರ್ಕಾರ ಹೊಣೆ: ರಾಮಲಿಂಗಾರೆಡ್ಡಿ

ಈ ವೇಳೆ ಸಂಚರಿಸುತ್ತಿದ್ದ ಬೈಕ್‌ ಸವಾರ ಪುನೀತ್‌ ಎಂಬುವವರು ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡರು. ಕೂದಲೆಳೆ ಅಂತರದಲ್ಲಿ ಇವರು ಹೆಚ್ಚಿನ ಅಪಾಯದಿಂದ ಪಾರಾಗಿದ್ದು, ಬಳಿಕ ಆಸ್ಪತ್ರೆಗೆ ತೆರಳಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು. ದಿನನಿತ್ಯ ಜನಸಂಚಾರ, ಟ್ರಾಫಿಕ್‌ ಜಾಮ್‌ ಇರುವ ಸ್ಥಳದಲ್ಲೇ ಏಕಾಏಕಿ ಭೂಮಿ ಬಾಯ್ದೆರೆದಿದ್ದು ತೀರಾ ಆತಂಕಕ್ಕೆ ಕಾರಣವಾಯಿತು.

ಇಲ್ಲಿ ಕೊಟ್ಟಿಗೆರೆಯಿಂದ ನಾಗವಾರ ಸಂಪರ್ಕಿಸುವ ಮಾರ್ಗದ ಮೆಟ್ರೋ ಸುರಂಗ ಮಾರ್ಗ ಇದಾಗಿದ್ದು, ಕಾಮಗಾರಿ ನಡೆಯುತ್ತಿದೆ. ಟಿಬಿಎಂ ಕೂಡ ಕೆಲ ದಿನಗಳ ಹಿಂದಷ್ಟೇ ಹಾದು ಹೋಗಿದೆ. ಗುಂಡಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸನಿಹದಲ್ಲಿದ್ದ ಅಶೋಕ ನಗರ ಸಂಚಾರಿ ಠಾಣೆ ಪೊಲೀಸರು ರಸ್ತೆಯ ಎರಡೂ ಕಡೆಯಲ್ಲಿ ಸಂಚಾರ ನಿರ್ಬಂಧಿಸಿದರು. ಬಿಎಂಆರ್‌ಸಿಎಲ್‌ ಅಧಿಕಾರಿಗಳು ಆಗಮಿಸಿ ಸುತ್ತಲೂ ಬ್ಯಾರಿಕೇಡ್‌ ಹಾಕಿ ನೆಟ್‌ ಅಳವಡಿಸಿದರು. ಬಳಿಕ ಕಾಂಕ್ರೀಟ್‌ ಸುರಿದು ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

ಸ್ಥಳಕ್ಕೆ ಬಿಎಂಆರ್‌ಸಿಎಲ್‌ ಎಂಡಿ ಅಂಜುಮ್‌ ಪರ್ವೇಜ್‌, ಹಿರಿಯ ಎಂಜಿನಿಯರ್‌ಗಳು, ಪೂರ್ವ ಸಂಚಾರ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಆಗಮಿಸಿ ಪರಿಶೀಲನೆ ನಡೆಸಿದರು.

ಟಿಬಿಎಂ ಹಾದು ಹೋಗಿತ್ತು

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌, ‘ನಾಲ್ಕು ದಿನಗಳ ಹಿಂದೆ ಸುರಂಗ ಕೊರೆಯುವ ಟಿಬಿಎಂ ಆ ಜಾಗದಿಂದ ಹಾದು ಹೋಗಿದೆ. ಟಿಬಿಎಂ ಹೋದ ಸ್ಥಳದಲ್ಲಿ ಕಾಂಕ್ರಿಟ್‌ ಪಿಲ್ಲರ್‌ ಕೂಡ ಅಳವಡಿಕೆ ಮಾಡಲಾಗಿದೆ. ಆದರೂ ಯಾಕಾಗಿ ಕುಸಿತ ಉಂಟಾಯಿತು ಎಂಬುದರ ಬಗ್ಗೆ ಹಿರಿಯ ಎಂಜಿನಿಯರ್‌ಗಳಿಂದ ತಪಾಸಣೆ ಮಾಡಿಸಲಾಗುವುದು. ಜನತೆ ಆತಂಕ ಪಡುವ ಅಗತ್ಯವಿಲ್ಲ. ಗುಂಡಿ ಬಿದ್ದ ಸ್ಥಳವನ್ನು ಕಾಂಕ್ರಿಟ್‌ ಹಾಕಿ ಮುಚ್ಚಲಾಗಿದೆ’ ಎಂದು ತಿಳಿಸಿದರು.

ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ ಸಮಸ್ಯೆ!

ದ್ವಿಚಕ್ರ ವಾಹನದಲ್ಲಿ ಇಲ್ಲಿ ಹಾದು ಹೋದಾಗ ಜಂಪ್‌ ಆಗುತ್ತಿತ್ತು. ಬೆಳಗ್ಗೆ ಸಾಕಷ್ಟುವಾಹನಗಳು ಜಂಪ್‌ ಆಗಿಯೇ ಹೋಗಿವೆ. ಮಧ್ಯಾಹ್ನ ಇಲ್ಲಿ ಬಳಿಕ ಮಹಿಳೆಯ ಹೆಲ್ಮೆಟ್‌ ಕೂಡ ಕೆಳಗೆ ಬಿತ್ತು. ಬಳಿಕ ಕೆಲ ಕ್ಷಣದಲ್ಲೇ ನಿಧಾನವಾಗಿ ರಸ್ತೆ ಕುಸಿಯಿತು ಅಂತ ಪ್ರತ್ಯಕ್ಷದರ್ಶಿ ಪವನ್‌ ತಿಳಿಸಿದ್ದಾರೆ. 

ಇಂದು ಬೆಳಗ್ಗೆ 10ರ ಬಳಿಕ ರಸ್ತೆ ಮುಕ್ತ

ರಸ್ತೆಯಲ್ಲಿ ಉಂಟಾಗಿರುವ ಗುಂಡಿಯನ್ನು ಮುಚ್ಚಿರುವ ಬಿಎಂಆರ್‌ಸಿಲ್‌, ರಸ್ತೆಯನ್ನು ಶುಕ್ರವಾರ ಬೆಳಗ್ಗೆ 10ರ ಬಳಿಕ ಜನಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಿದೆ. ರಾತ್ರಿಯಿಡಿ ರಸ್ತೆಯ ಗುಣಮಟ್ಟಪರಿಶೀಲನೆ ಮಾಡಲಾಗುವುದು. ಕೆಳಭಾಗದಲ್ಲಿ ಎರಡು ಸುರಂಗ ಕೊರೆವ ಯಂತ್ರಗಳು ಹಾದು ಹೋಗಿದ್ದು, ಸುರಂಗದಿಂದಲೇ ಸಮಸ್ಯೆ ಉಂಟಾಗಿದೆಯೆ? ಜತೆಗೆ ಇನ್ನೆಲ್ಲಾದರೂ ಇಂತಹ ಗುಂಡಿ ಉಂಟಾಗುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುವುದು. ಜತೆಗೆ ಜಲಮಂಡಳಿಯ ಪೈಪ್‌ಲೈನ್‌ ಏನಾದರೂ ಇದೆಯೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

click me!