ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ, ತಾಪಂ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ, ಗಡಿ ನಿರ್ಣಯಿಸಿ ಕರಡು ಪ್ರಸ್ತಾವನೆ ಹೊರಡಿಸಿದೆ. ಈ ಕುರಿತು ಆಕ್ಷೇಪಣೆ, ಅಹವಾಲುಗಳ ಪರಿಶೀಲನೆಗಾಗಿ ಅದಾಲತ್ ನಡೆಸಲು ನಿರ್ಧರಿಸಿದೆ.
ಮಂಡ್ಯ (ಜ . 13): ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ, ತಾಪಂ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ, ಗಡಿ ನಿರ್ಣಯಿಸಿ ಕರಡು ಪ್ರಸ್ತಾವನೆ ಹೊರಡಿಸಿದೆ. ಈ ಕುರಿತು ಆಕ್ಷೇಪಣೆ, ಅಹವಾಲುಗಳ ಪರಿಶೀಲನೆಗಾಗಿ ಅದಾಲತ್ ನಡೆಸಲು ನಿರ್ಧರಿಸಿದೆ.
ಜ.17ರಿಂದ 25ರವರೆಗೆ ಬೆಂಗಳೂರಿನ ಪಂಚಾಯತ್‌ರಾಜ್ ಆಯುಕ್ತಾಲಯದಲ್ಲಿ ಆಯೋಗವು ಅದಾಲತ್ ನಡೆಸಲಿದೆ. ಜಿಲ್ಲೆಗೆ ಸಂಬಂಧಿಸಿದ ಅದಾಲತ್ ನಡೆಯುವ ದಿನ ಜಿಲ್ಲಾ ಕಚೇರಿಯ ತಹಸೀಲ್ದಾರ್ ಮತ್ತು ಆಯಾ ತಾಲೂಕಿನ ಚುನಾವಣಾ ತಹಸೀಲ್ದಾರ್, ಶಿರಸ್ತೇದಾರ್ ಸಂಪೂರ್ಣ ಮಾಹಿತಿಯ ದಾಖಲೆಗಳೊಂದಿಗೆ ಹಾಜರಿರುವಂತೆ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿರುವ ಜಿಲ್ಲಾ, ತಾಲೂಕು ಗಡಿ ನಿರ್ಣಯ ಮಾಹಿತಿಯನ್ನು ಚುನಾವಣಾ ತಹಸೀಲ್ದಾರ್, ಶಿರಸ್ತೇದಾರ್ ಅವರು ಈ ಹಿಂದೆ ನೀಡಿದ್ದ ಮಾಹಿತಿಗೆ ತಾಳೆ ಮಾಡಿ ನೋಡಿ ಕಣ್ತಪ್ಪಿನಿಂದ ಯಾವುದೇ ವ್ಯತ್ಯಾಸವಾಗಿದ್ದಲ್ಲಿ, ಬಿಟ್ಟುಹೋಗಿದ್ದಲ್ಲಿ ಅಥವಾ ವ್ಯತ್ಯಯವಾಗಿದ್ದರೆ ಕೂಡಲೇ ಆಯೋಗದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.
ಪ್ರಕಟಣೆಗೆ ಪ್ರತಿಯಾಗಿ ಸ್ವೀಕೃತವಾಗುವ ಆಕ್ಷೇಪಣೆ, ಅಹವಾಲುಗಳನ್ನು ಪ್ರತಿದಿನ ನಿಗದಿತ ನಮೂನೆಯಲ್ಲಿ ಕಚೇರಿಗೆ ಕಳುಹಿಸಿಕೊಡಲಾಗುವುದು. ಇದನ್ನು ಪರಿಶೀಲಿಸಿ ಆಕ್ಷೇಪಣೆಗಳಿಗೆ ತಮ್ಮ ನಿರ್ದಿಷ್ಟಪರಿಗಣನೆ ಅಥವಾ ತಿರಸ್ಕರಣೆಯನ್ನು ಶಿಫಾರಸ್ಸಿನೊಂದಿಗೆ ಅಂಶವಾರು ಸಂಕ್ಷಿಪ್ತ ಷರಾವನ್ನು ನಿಗದಿತ ನಮೂನೆಯಲ್ಲಿ ದಾಖಲಿಸಿ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಜ.16ರೊಳಗೆ ಸಲ್ಲಿಸಲ್ಪಟ್ಟಆಕ್ಷೇಪಣೆ ಅಹವಾಲುಗಳ ಪರಿಶೀಲನಾ ಅದಾಲತ್ ಜ.23ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಪಂಚಾಯತ್‌ರಾಜ್ ನಿರ್ದೇಶಕ ಕೆ.ಆರ್.ರುದ್ರಪ್ಪ ತಿಳಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಜ.16ರ ಸಂಜೆ 5 ಗಂಟೆಯೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಮಂಡ್ಯ ಜಿಲ್ಲೆ ಜಿಪಂ ಸದಸ್ಯರ ಸಂಖ್ಯೆ
ತಾಲೂಕು ಪಂಚಾಯ್ತಿ ಜಿಪಂ ಸದಸ್ಯರ ಸಂಖ್ಯೆ
ನಾಗಮಂಗಲ 04
ಶ್ರೀರಂಗಪಟ್ಟಣ 04
ಪಾಂಡವಪುರ 05
ಕೆ.ಆರ್.ಪೇಟೆ 06
ಮಳವಳ್ಳಿ 07
ಮದ್ದೂರು 07
ಮಂಡ್ಯ 07
ಒಟ್ಟು 40
ಜಿಪಂ ಕ್ಷೇತ್ರಗಳು 40ಕ್ಕೆ ಕುಸಿತ
ಹಾಲಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆಯನ್ನು 40ಕ್ಕೆ ಇಳಿಸಲಾಗಿದೆ. ಈ ಹಿಂದೆ ಕ್ಷೇತ್ರಗಳ ಸಂಖ್ಯೆ 41 ಇತ್ತು. ಪ್ರಸ್ತುತ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ನೀಡಿದ್ದ ಕ್ಷೇತ್ರಗಳನ್ನು ಕೈಬಿಟ್ಟಿದ್ದಲ್ಲದೆ ಹಿಂದೆ ಇದ್ದ 41 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಕಡಿತಗೊಳಿಸಲಾಗಿದೆ. 2021ರ ಫೆಬ್ರವರಿ ತಿಂಗಳಿನಲ್ಲಿ ಮಂಡ್ಯ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದ್ದ ವೇಳೆ ಜಿಪಂ ಕ್ಷೇತ್ರಗಳನ್ನು 41ರಿಂದ 46ಕ್ಕೆ ಏರಿಸಲಾಗಿತ್ತು. ಮಂಡ್ಯ-8, ಮದ್ದೂರು-8, ಮಳವಳ್ಳಿ-8, ಪಾಂಡವಪುರ-5, ಶ್ರೀರಂಗಪಟ್ಟಣ-5 ಹಾಗೂ ನಾಗಮಂಗಲ ತಾಲೂಕಿಗೆ 5 ಕ್ಷೇತ್ರಗಳನ್ನು ನಿಗದಿಪಡಿಸಲಾಗಿತ್ತು. ಎಲ್ಲಾ ತಾಲೂಕಿಗೂ ತಲಾ 1 ಕ್ಷೇತ್ರವನ್ನು ಹೆಚ್ಚುವರಿಯಾಗಿ ನೀಡಿತ್ತು. ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ 29 ಕ್ಷೇತ್ರಗಳನ್ನು ಕಡಿತಗೊಳಿಸಿ 155 ರಿಂದ 126ಕ್ಕೆ ಇಳಿಸಿತ್ತು. ಮಂಡ್ಯ ತಾಲೂಕಿನಲ್ಲಿ 28 ಕ್ಷೇತ್ರಗಳಿಂದ 23ಕ್ಕೆ ಇಳಿಸಲಾಗಿತ್ತು. ಅದರಂತೆ ಮದ್ದೂರಿನಲ್ಲಿ 27 ರಿಂದ 22ಕ್ಕೆ, ಮಳವಳ್ಳಿಯಲ್ಲಿ 25 ರಿಂದ 20ಕ್ಕೆ, ಪಾಂಡವಪುರ 17 ರಿಂದ 14ಕ್ಕೆ, ಶ್ರೀರಂಗಪಟ್ಟಣದಲ್ಲಿ 16 ರಿಂದ 13ಕ್ಕೆ, ಕೆ.ಆರ್.ಪೇಟೆಯಲ್ಲಿ 24 ರಿಂದ 19ಕ್ಕೆ ಹಾಗೂ ನಾಗಮಂಗಲ ತಾಲೂಕಿನಲ್ಲಿ 18 ರಿಂದ 13ಕ್ಕೆ ಇಳಿಸಲಾಗಿದೆ.