ಪಿಎಸ್‌ಐ ಅಕ್ರಮ: ಆರ್‌ಡಿಪಿ ಬಲಗೈ ಬಂಟರ ಕೊಡುಗೆಯೇ ಅಪಾರ..!

By Kannadaprabha News  |  First Published Jun 7, 2022, 4:17 PM IST

*  ಆರ್‌ಡಿಪಿ ಬಂಟರು ಹೆಲ್ಮೆಟ್‌ ಹಾಕ್ಕೊಂಡು ಹೊಂಟ್ರೆ ಸಾಕು, ಸಾಲು ಸಾಲು ಅಕ್ರಮಗಳು ಓಕೆ
*  ಅಫಜಲ್ಪುರ, ಬಂದರವಾಡ, ಕರ್ಜಗಿ, ಸೊನ್ನ, ಮಣ್ಣೂರ ಇಲ್ಲೆಲ್ಲಾ ಈತನ ಬಂಟರ ಪಡೆ
*  ಹೆಲ್ಮೆಟ್‌ ಹಾಕ್ಕೊಂಡು ಸಿಮ್‌ ಸರಬರಾಜು, ಹಣಕಾಸು ಡೀಲ್‌ ಎಲ್ಲ ಮಾಡೋದು ಇವ್ರೆ


ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.07):  ಪೊಲೀಸ್‌ ಇಲಾಖೆಯ 545 ಪಿಎಸ್‌ಐ ಪರೀಕ್ಷೆ ಕ್ರಮದಲ್ಲಿ ಸಿಐಡಿ ಬೋನಿಗೆ ಬಿದ್ದಿರುವ ಕಿಂಗ್‌ಪಿಎನ್‌ ಆರ್‌ಡಿ ಪಾಟೀಲ್‌ ಈತ ಅಫಜಲ್ಪುರ ತಾಲೂಕಿನಲ್ಲಿ ಎಂಟೆದೆಯ ಬಂಟರ ಪಡೆಯನ್ನೇ ಹೊಂದಿರೋದು ವಿಚಾರಣೆಯಿಂದ ಬಯಲಾಗಿದೆ.

Tap to resize

Latest Videos

ಇದೀಗ ಆರ್‌ಡಿ ಪಾಟೀಲ್‌ ಬಲಗೈ ಬಂಟರ ಹಿಂದೆ ಬಿದ್ದಿರುವ ಸಿಐಡಿ ಆ ಪೈಕಿ ಮಣ್ಣೂರಿನ ಅಸ್ಲಂಭಾಷಾ ಮುಜಾವರ್‌, ಕರಜಗಿಯ ಮುನಾಫ್‌ ಜಮಾದಾರ್‌, ಆರ್‌ಡಿಪಿ ಅಳಿಯ, ಸೊನ್ನದ ಪ್ರಕಾಶನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದೆ.

PSI Recruitment Scam: ಪಿಎಸ್ಐ ಆಗಲು ಅಕ್ರಮದ ಹಾದಿ ತುಳಿದ ದಂಪತಿಗಳ ಬಂಧನ!

ಮೂಲಗಳ ಪ್ರಕಾರ ಆರ್‌ಡಿ ಪಾಟೀಲನ ನಂಬಿಗಸ್ಥ ಬಂಟರ ಪಡೆಯಲ್ಲಿ ಇನ್ನೂ ಮೂವರು ಗಟ್ಟಿಗರಿದ್ದಾರೆ. ಸಿಐಡಿ ವಿಚಾರಣೆ ಹಾಗೂ ಬಂಧನಕ್ಕೆ ಅಂಜಿ ಪರಾರಿಯಾಗಿದ್ದಾರೆ, ಆರ್‌ಡಿ ಪಾಟೀಲ್‌ ಹೇಳಿದಂತೆ ಚಾಚೂ ತಪ್ಪದೆ ಕೇಳುವ ವಿಶ್ವಾಸಿಕ ಬಂಟರ ಪಡೆಯ ಸದಸ್ಯರೆಲ್ಲರ ಚಲನವಲನಗಳ ಮೇಲೆನಿಗಾ ಇಟ್ಟಿರುವ ಸಿಐಡಿ ಇವರು ಕಂಡಲ್ಲಿ ಬಂಧಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಹೆಲ್ಮೆಟ್‌ ಹಾಕ್ಕೊಂಡೇ ಅಕ್ರಮ ಮಾಡೋರು:

ಸಿಐಡಿ ಬಂಧನದಲ್ಲಿರುವ ಮಣ್ಣೂರಿನ ಅಸ್ಲಂ, ಕರಜಗಿಯ ಮುನಾಫ್‌ ಇವರಿಬ್ಬರ ವಿಚಾರಣೆ ನಡೆಸಿರುವ ಸಿಐಡಿ ಅಕ್ರಮಗಳಲ್ಲಿ ಇವರು ನಿಭಾಯಿಸಿರುವ ಗುರುತರ ಹೊಣೆಗಾರಿಕೆ, ಅದನ್ನು ನಿಭಾಯಿಸಲು ಹಿಡಿದ ದಾರಿ ಇತ್ಯಾದಿ ಸಂಗತಿಗಳನ್ನು ಕೇಳಿಯೇ ಬೆರಗಾಗಿದೆ!

ಮೊಬೈಲ್‌ ಸಿಮ್‌ ಕಾರ್ಡ್‌ ಹೊಂದಿಸ್ತಿದ್ವಿ, ಅವುಗಳನ್ನು ಸೊನ್ನ ಗೌಡರ ಸೂಚನೆಯಂತೆ ಕೊಟ್ಟು ಬರುತ್ತಿದ್ದೇವೆ. ಪ್ರತಿ ಪರೀಕ್ಷೆಯಲ್ಲೂ ಹೊಸ ಸಿಮ್‌ ಕಾರ್ಡ್‌ ಸರಬರಾಜು ನಮ್ಮ ಹೊಣೆ ಆಗಿರ್ತಿತ್ತು. ಇದಲ್ಲದೆ ಹಣಕಾಸಿನ ಡೀಲ್‌ ಯಶ ಕಂಡವರ ಬಳಿ ಹೆಲ್ಮೆಟ್‌ ಹಾಕ್ಕೊಂಡು ಹೋಗಿ ನಾವ್ಯಾರು ಎಂಬುದು ಗುರುತಾಗದಂತೆ ಅವರಿಂದ ಅನಾಮತ್ತಾಗಿ ಲಕ್ಷಗಟ್ಟಲೆ ಹಣ ತಂದು ಆರ್‌ಡಿಪಿಗೆ ಕೊಡುತ್ತಿದ್ದೇವು. ಇದಲ್ಲದೆ ಪರೀಕ್ಷೆಗಳು ನಡೆದಾಗ ಕೇಂದ್ರಗಳ ಸುತ್ತಮುತ್ತ ಬ್ಲೂಟೂತ್‌ ಸರಿ ಉತ್ತರ ರವಾನಿಸುವಾಗ ಹೊರಗಡೆ ಇದ್ದು ಪಹರೆ ಕಾಯೋ ಕೆಲಸವೂ ನಮ್ಮದೇ ಆಗಿರ್ತಿತ್ತು ಎಂದು ಸಿಐಡಿ ವಿಚಾರಣೆಯಲ್ಲಿರುವ ಅಸ್ಲಂ ಹಾಗೂ ಮುನಾಫ್‌ ಬಾಯಿ ಬಿಟ್ಟಿದ್ದಾರೆಂದು ಗೊತ್ತಾಗಿದೆ.

ಪರೀಕ್ಷೆ ಅಕ್ರಮಗಳಿಗೆ ಸೊನ್ನದ ಗೌಡ ಆರ್‌ಡಿಪಿ ಸೂಚಿಸಿದಂತೆ ಇವ್ರು ಕೆಲಸಕ್ಕಿಳಿಯೋವಾಗೆಲ್ಲಾ ಕಡ್ಡಾಯ ಹೆಲ್ಮೆಟ್‌ ಧರಿಸೋರು, ವಿಚಾರಣೆಯಲ್ಲಿ ಬಲಗೈ ಬಂಟರು ತಾವು ಅದೇನೆಲ್ಲಾ ಕಾರ್ಯಗಳನ್ನು ನಿಭಾಯಿಸುತ್ತ ಪರೀಕ್ಷೆ ಅಕ್ರಮ ಯಶಸ್ವಿಯಾಗುವಂತೆ ಮಾಡುತ್ತಿದ್ದೇವು ಎಂಬುದನ್ನೆಲ್ಲ ಸಿಐಡಿ ಅಧಿಕಾರಿಗಳಾದ ಡಿವೈಎಸ್ಪಿ ಪ್ರಕಾಶ ರಾಠೋಡ, ಡಿವೈಎಸ್ಪಿ ಶಂಕರಗೌಡ ಪಾಟೀಲ್‌ ಇವರನ್ನೊಳಗೊಂಡ ತಂಡ ಕಳೆದ 3 ದಿನದಿಂದ ನಡೆಸುತ್ತಿರುವ ತೀವ್ರ ವಿಚಾರಣೆಯಲ್ಲಿ ಎಳೆಎಳೆಯಾಗಿ ಬಾಯಿ ಬಿಟ್ಟಿದ್ದಾರೆ.

ಸಿಮ್‌ಕಾರ್ಡ್‌, ಬ್ಲೂಟೂತ್‌ ಉಪಕರಣ ಇವನ್ನೆಲ್ಲ ಇವರು ಹೆಲ್ಮೆಟ್‌ನಲ್ಲಿಟ್ಟುಕೊಂಡೋ ಹೊರಗೆ ಪೂರೈಸೋರು, ಇದರಿಂದ ಯಾರಿಗೂ ಅನುಮಾನ ಬಾರದಂತೆ ಕೆಲಸ ಮಾಡಿ ಮುಗಿಸುವ ಚಾಕಚಕ್ಯತೆಯೂ ಇವರು ಕರಗತ ಮಾಡಿಕೊಂಡಿದ್ದರು.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: 2ನೇ ಹಂತದ ತನಿಖೆ ಆರಂಭ

ಆರ್ಡಿಪಿ ಅಳಿಯನೂ ಅಂದರ್‌:

ಅಕ್ರಮಕ್ಕೆ ಸ್ಬಂಧಪಟ್ಟಂತೆ ಸಿಐಡಿ ಕಳೆದ ವಾರ ಬಂಧಿಸಿರುವವರಲ್ಲಿ ಆರ್‌ಡಿ ಪಾಟೀಲ್‌ ಅಳಿಯ ಪ್ರಕಾಶ ಸೊನ್ನ ಸೇರಿದ್ದಾನೆ. ಈತ ಅಭ್ಯರ್ಥಿಗಳಿಗೆ ಬ್ಲೂಟೂತ್‌ ಸರಬರಾಜು ಮಾಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ಖಚಿತವಾಗಿದೆ. ಎಂಎಸ್‌ಐ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪಿಎಸ್‌ಐ ಪರೀಕ್ಷೆ ಬರೆದಿದ್ದ, ಬಂಧಿತ ಅಭ್ಯರ್ಥಿ ಪ್ರಭುಗೆ ಈತನೇ ಬ್ಲೂಟೂತ್‌ ಉಪಕರಣ ನೀಡಿದ್ದ. ಅಲ್ಲದೆ ಆರ್‌.ಡಿ. ಪಾಟೀಲ್‌ ಸೂಚಿಸುವ ಅಭ್ಯರ್ಥಿಗಳಿಗೆ ಪ್ರಕಾಶ್‌ ಬ್ಲೂಟೂತ್‌ಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕಾನ್‌ಸ್ಟೇಬಲ್‌ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್‌ಡಿಪಿ ಅಳಿಯ

ಮಾವ ಪಿಎಸ್‌ಐ ಅಕ್ರಮದ ಕಿಂಗ್‌ಪಿನ್‌ ಆದ್ರೆ, ಅಳಿಯ ಪ್ರಕಾಶ ಕಾನ್‌ಸ್ಟೇಬಲ್‌ ಪರೀಕ್ಷೆ ಅಕ್ರಮದ ಕಿಂಗ್‌ಪಿಎನ್‌ ಎಂಬುದು ವಿಚಾರಣೆಯಲ್ಲಿ ಸಿಐಡಿ ಹೊರಗೆಳೆದಿದೆ. ಸದ್ಯ ಪಿಎಸ್‌ಐ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧಿಸಲಾದ ಆರೋಪಿ ಪ್ರಕಾಶ ಈ ಹಿಂದೆ ನಡೆದ ಕಾನ್ಸ್‌ಟೇಬಲ್‌ ಪರೀಕ್ಷೆಯಲ್ಲಿ ಬ್ಲೂಟೂತ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಬ್ಲೂಟೂತ್‌ ನೀಡಿದ ಆರೋಪದಡಿ ಕಲಬುರಗಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕಾಶ್‌ ಇದೀಗ ಪಿಎಸ್‌ಐ ಅಕ್ರಮದಲ್ಲೂ ಭಾಗಿಯಾಗಿದ್ದು, ಸಿಐಡಿ ಅಧಿಕಾರಿಗಳು ಈತನನ್ನೂ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

click me!