ಚಿತ್ರದುರ್ಗ: ರೋಡೇ ಮಾಡಿಲ್ಲ, ಆಗ್ಲೆ ತಡೆಗೋಡೆ ಕೆಲ್ಸ ಶುರು..!

By Kannadaprabha NewsFirst Published Sep 17, 2022, 1:21 PM IST
Highlights

ಶಾಸಕ ತಿಪ್ಪಾರೆಡ್ಡಿ ಮನೆ ಸಮೀಪವೇ ಆತುರದ ಕಾಮಗಾರಿ, ಸರಣಿ ವರದಿಗೆ ಹೆದರಿ ಕಾಮಗಾರಿ ನಿಯಮಾವಳಿ ಬದಲು

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಸೆ.17):  ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಚರಂಡಿ, ರಸ್ತೆ, ನಂತರ ಡಿವೈಡರ್‌ ನಿರ್ಮಾಣ ಮಾಡಲಾಗುತ್ತದೆ. ರಾಜ್ಯದ ವಿವಿದೆಡೆ ಇಂತಹ ನೂರಾರು ದೃಶ್ಯಗಳು ಕಂಡು ಬಂದಿವೆ. ಆದರೆ ಚಿತ್ರದುರ್ಗದ ರಸ್ತೆ ಅಭಿವೃದ್ಧಿ ಭರಾಟೆ ಮಾತ್ರ ವಿಭಿನ್ನ. ರಸ್ತೆ ಅಭಿವೃದ್ಧಿ ಮಾಡುವ ಮೊದಲೇ ತಡೆಗೋಡೆ(ಡಿವೈಡರ್‌) ಅಳವಡಿಸುವ ಘನಂದಾರಿ ಕೆಲಸಕ್ಕೆ ಇಂಜಿನಿಯರ್‌ಗಳು ಮುಂದಾಗಿರುವುದು ನೋಡುಗರಿಗೆ ನಗೆ ತಂದಿದೆ.

ಎಪಿಎಂಸಿ ಕ್ರಾಸ್‌ನಿಂದ ರೈಲ್ವೆ ಗೇಟ್‌ ಹಾಗೂ ರೈಲ್ವೆ ಗೇಟ್‌ನಿಂದ ರಾಷ್ಟ್ರೀಯ ಹೆದ್ದಾರಿ ಅಂದರೆ ಜೆಎಂಐಟಿ ಸರ್ಕಲ್‌ವರಿಗೆ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಅರ್ಧದಷ್ಟುಮುಗಿದಿದೆ. ತಿಪ್ಪಾರೆಡ್ಡಿ ಮನೆ ಮೂಲೆಯಿಂದ ಜೆಎಂಐಟಿ ವರೆಗೆ ಕೆಲಸವಾಗಿದೆ. ಉಳಿದ ಕಡೆ ರಸ್ತೆ ಅಭಿವೃದ್ಧಿ ಮಾಡಬೇಕಾಗಿದೆ. ಸಿಸಿ ರಸ್ತೆ ಅಂದ್ರೆ ಮಧ್ಯೆ ತಡೆಗೋಡೆ ಇರಲೇಬೇಕೆಂಬ ಹೊಸ ನಿಬಂಧನೆ ಅಳವಡಿಸಿಕೊಂಡಿರುವ ಚಿತ್ರದುರ್ಗದ ಇಂಜಿನಿಯರ್‌ಗಳು ಇದಕ್ಕಾಗಿ ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದಾರೆ. ಆರಂಭಕ್ಕೆ ತಡೆಗೋಡೆ ಕಟ್ಟಿನಂತರ ರಸ್ತೆ ಅಭಿವೃದ್ಧಿ ಕಡೆ ಗಮನ ಹರಿಸುವ ಇರಾದೆ ಇಟ್ಟುಕೊಂಡಂತಿದೆ. ಶಾಸಕ ತಿಪ್ಪಾರೆಡ್ಡಿ ಮನೆ ಸಮೀಪದಲ್ಲಿಯೇ ಈ ರೀತಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಶುರುವಾಗಿದ್ದು, ಭರದಿಂದ ಸಾಗಿದೆ.

ಮುರುಘಾ ಶ್ರೀ ಪ್ರಕರಣದಲ್ಲಿ ಬಿಜೆಪಿ ಶಾಸಕ ಎಂಟ್ರಿ, ಹೈಕೋರ್ಟ್‌ ಜಡ್ಜ್‌ಗೆ ಪತ್ರ ಬರೆಯುವೆ ಎಂದ ಯತ್ನಾಳ್!

ತಡೆಗೋಡೆಗೆ ತಡೆ ಬಂದ್ರೆ ಕಷ್ಟ

ಸಿಸಿ ರಸ್ತೆಗಿಂತ ಮೊದಲೇ ತಡೆ ಗೋಡೆ ನಿರ್ಮಾಣ ಮಾಡುವುದರ ಹಿಂದೆ ಬೇರೆಯದ್ದೇ ಆತುರ ಇದೆ. ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭ ಸರಣಿ ವರದಿ ಆರಂಭಿಸಿದೆ. ಹಾಗೊಂದು ವೇಳೆ ತಡೆಗೋಡೆ ಅವೈಜ್ಞಾನಿಕ, ನಿರ್ಮಾಣ ಬೇಡವೆಂಬ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಲ್ಲಿ ಸಮಸ್ಯೆ ಆದೀತೆಂದು ಗ್ರಹಿಸಿರುವ ಗುತ್ತಿಗೆದಾರ ಕಾಮಗಾರಿಗೆ ವೇಗೆ ನೀಡಿದ್ದಾನೆæ ಎನ್ನಲಾಗಿದೆ. ಮೊದಲು ರಸ್ತೆ ಮಾಡಿ ನಂತರ ತಡೆಗೋಡೆ ಕಟ್ಟಿದರೆ ತಡವಾಗಬಹುದು. ಹಾಗಾಗಿ ಮೊದಲೇ ತಡೆಗೋಡೆ ಕಟ್ಟಿದರೆ ನಂತರ ಬೇಡವೆನ್ನಲು ಬರುವುದಿಲ್ಲ. ನಿಧಾನವಾಗಿ ರಸ್ತೆ ಮಾಡಿದರಾಯಿತು ಎಂಬ ಮನೋಭಾವ ಇಂಜಿನಿಯರ್‌, ಗುತ್ತಿಗೆದಾರರಲ್ಲಿ ಮೊಳಕೆಯೊಡೆದಿರುವುದು ಅವಸರದ ತಡೆಗೋಡೆ ಮೇಲೇಳಲು ಕಾರಣ ಎನ್ನಲಾಗುತ್ತಿದೆ. ತಡೆಗೋಡೆ ನಿರ್ಮಾಣದ ಭರಾಟೆ ಕೂಡ ಕಳಪೆತನ ಸಾರಿದೆ. ಮಣ್ಣಿನ ರಸ್ತೆ ಮೇಲೆ ಕಾಂಕ್ರೀಟ್‌ ಸುರಿದು, ಒಂದಿಷ್ಟುಕಬ್ಬಿಣ ಸರಳು ಜೋಡಿಸಿ ಗೋಡೆಗಳ ನಿರ್ಮಿಸಲಾಗುತ್ತಿದ್ದು, ಗುಣಮಟ್ಟವೆಂಬುವುದು ದೂರವೇ ಉಳಿದಿದೆ.

ಮಿನಿ ಒನ್‌ವೇ ಬಂದ್‌ ಮಾಡಿದ ಪೊಲೀಸರು

ಗಾಂಧಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೋಗುವ ಒನ್‌ ವೇ ಮಾರ್ಗದಲ್ಲಿ ತಡೆಗೋಡೆ ನಿರ್ಮಿಸಿದ್ದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ನಡೆಗೆ ಕೊನೆಗೂ ಪೊಲೀಸ್‌ ಇಲಾಖೆ ಬ್ರೇಕ್‌ ಹಾಕಿದೆ. ತಡೆ ಗೋಡೆ ನಿರ್ಮಿಸಿದ್ದರಿಂದ ಒಂದು ಮಾರ್ಗದಲ್ಲಿ ವಾಹನ ಸಂಚರಿಸಲು ಅವಕಾಶ ನೀಡಿರುವ ಪೊಲೀಸರು ಮತ್ತೊಂದನ್ನು ಪಾದಚಾರಿಗಳಿಗೆ ಮೀಸಲಿಟ್ಟಿದ್ದಾರೆ. ಬ್ಯಾರಿಕೇಡ್‌ಗಳ ಅಡ್ಡವಿಟ್ಟು ತಾತ್ಕಾಲಿಕ ಮಿನಿ ಒನ್‌ ವೇ ಮಾಡಲಾಗಿದೆ.
 

click me!