ವಿಚಾರಣೆ ವೇಳೆ ಮತ್ತೊಂದು ಸತ್ಯ ಬಾಯ್ಬಿಟ್ಟ ಅಮೂಲ್ಯ

By Kannadaprabha NewsFirst Published Mar 1, 2020, 7:33 AM IST
Highlights

ಬೆಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಮೂಲ್ಯ ಇದೀಗ ಪೊಲೀಸ್ ವಿಚಾರಣೆ ವೇಳೆ ಮತ್ತೊಂದು ಸತ್ಯವನ್ನು ಹೇಳಿದ್ದಾಳೆ. 

ಬೆಂಗಳೂರು [ಮಾ.01] : ‘ನಾನು ಫೆ.21ರಂದು ಫ್ರೀಡಂ ಪಾರ್ಕ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ಅಭಿಯಾನ ವಿರುದ್ಧ ಆಯೋಜಿಸಲಾಗಿದ್ದ ಸಭೆಗೆ ಆಹ್ವಾನಿತಳಾಗಿದ್ದೆ. ಹೀಗಾಗಿಯೇ ಪಾಲ್ಗೊಂಡಿದ್ದೆ. ನನಗೆ ಭಾಷಣಕ್ಕೂ ಅನುಮತಿ ಇತ್ತು’ ಎಂದು ಪಾಕಿಸ್ತಾನಕ್ಕೆ ಜೈಕಾರ ಕೂಗಿದ ವಿವಾದ ಎದುರಿಸುತ್ತಿರುವ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.

ಈ ಹೇಳಿಕೆ ಬೆನ್ನಲ್ಲೇ ಕಾರ್ಯಕ್ರಮ ಆಯೋಜಕ ಬಿಬಿಎಂಪಿ ಜೆಡಿಎಸ್‌ ಸದಸ್ಯ ಇಮ್ರಾನ್‌ ಪಾಷ ಸೇರಿದಂತೆ ಕೆಲವರಿಗೆ ಸಂಕಷ್ಟಉಂಟಾಗಿದ್ದು, ಅಮೂಲ್ಯ ಹೇಳಿರುವ ವ್ಯಕ್ತಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆಯನ್ನು ಬಿರುಸುಗೊಳಿಸುವ ಸಾಧ್ಯತೆಗಳಿವೆ.

ಪಾಕಿಸ್ತಾನಕ್ಕೆ ಜಿಂದಾಬಾದ್‌ ಕೂಗಿದ ಪ್ರಕರಣದ ಸಂಬಂಧ ಅಮೂಲ್ಯಳನ್ನು ನಾಲ್ಕು ದಿನಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು, ಕಸ್ಟಡಿ ಮುಗಿದ ಬಳಿಕ ಶನಿವಾರ ಆಕೆಯನ್ನು ಮತ್ತೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದರು. ವಿಚಾರಣೆ ವೇಳೆ ಹಲವು ಸಂಗತಿಯನ್ನು ಆಕೆ ಬಹಿರಂಗಪಡಿಸಿದ್ದಾಳೆ ಎಂದು ಮೂಲಗಳು ಹೇಳಿವೆ.

ಅಮೂಲ್ಯ, ಆರ್ದ್ರಾ 'ಡೇಟಿಂಗ್‌ ಆ್ಯಪ್‌' ಸೀಕ್ರೆಟ್ ಔಟ್

ನಾನು ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದೆ. ಈ ಬಗ್ಗೆ ರಾಜ್ಯದ ಹಲವು ಕಡೆ ನಡೆದ ಪ್ರತಿಭಟನೆಗಳಲ್ಲಿ ಕೂಡಾ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದೆ. ಡಿ.ಜೆ.ಹಳ್ಳಿಯ ಬಿಲಾಲ್‌ಬಾಗ್‌ನಲ್ಲಿ ನಡೆದ ಆಮರಣ ಪ್ರತಿಭಟನೆಯ ಸಂಘಟನೆಯಲ್ಲಿ ಸಹ ಪಾತ್ರ ವಹಿಸಿದ್ದೆ ಎಂದು ಆಕೆ ಹೇಳಿದ್ದಾಳೆ ಎನ್ನಲಾಗಿದೆ.

ಈ ಹೋರಾಟಗಳ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸುವವರ ಜೊತೆ ಒಡನಾಟ ಬೆಳೆಯಿತು. ಹೀಗಾಗಿ ಎಲ್ಲೇ ಸಭೆಗಳು ನಡೆದರೂ ನನಗೆ ಆಹ್ವಾನ ಬರುತ್ತಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತಪ್ಪದೆ ಮಾಹಿತಿ ಇರುತ್ತಿತ್ತು. ಅದೇ ರೀತಿ ಫೆ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನಾ ಸಭೆಗೂ ಸಹ ಸಂಘಟಕರರಿಂದ ನನಗೆ ಆಹ್ವಾನ ಬಂದಿತ್ತು. ಆ ಸಭೆಯಲ್ಲಿ ಸಂಸದ ಅಸಾದುದ್ದೀನ್‌ ಒವೈಸಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದರು. ಹಿರಿಯರ ಮುಂದೆ ಮಾತನಾಡಲು ಅವಕಾಶ ಕೂಡಾ ಸಿಕ್ಕಿತು ಎಂದು ಅಮೂಲ್ಯ ಹೇಳಿರುವುದಾಗಿ ಗೊತ್ತಾಗಿದೆ.

ಫ್ರೀಡಂ ಪಾರ್ಕ್ ಸಭೆಯಲ್ಲಿ ಭಾಷಣಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದೆ. ಆದರೆ ನಾನು ಪೂರ್ಣವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಗಲಿಲ್ಲ. ಮಾತಿನ ಆರಂಭದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್‌ ಕೂಗಿದ್ದು ದೊಡ್ಡ ವಿವಾದವಾಯಿತು. ಒವೈಸಿ ಸೇರಿದಂತೆ ಕಾರ್ಯಕ್ರಮ ಆಯೋಜಕರು ನನ್ನ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿ ಮೈಕ್‌ ಕಸಿದುಕೊಂಡರು. ಜಿಂದಾಬಾದ್‌ ಬಳಿಕ ಮುಂದೆ ಮಾತನಾಡಲು ಅನುವು ಮಾಡಿಕೊಟ್ಟಿದ್ದರೆ ನನ್ನ ಮಾತಿನ ಹಿಂದಿನ ಸತ್ಯ ಗೊತ್ತಾಗುತ್ತಿತ್ತು ಎಂದು ಆಕೆ ವಿಚಾರಣೆ ವೇಳೆ ಸಮರ್ಥಿಸಿಕೊಂಡಿರುವುದಾಗಿ ಮೂಲಗಳು ಹೇಳಿವೆ.

ಮಾ.5 ವರೆಗೆ ನ್ಯಾಯಾಂಗ ಬಂಧನ

ಪಾಕಿಸ್ತಾನಕ್ಕೆ ಜಿಂದಾಬಾದ್‌ ಕೂಗಿದ ಪ್ರಕರಣದ ಸಂಬಂಧ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಳನ್ನು ಮಾ.5ರ ವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ. ಕಸ್ಟಡಿ ಮುಗಿದ ಬಳಿಕ ತನಿಖಾ ತಂಡವು ಶನಿವಾರ ರಾತ್ರಿ 9 ಗಂಟೆಗೆ ಕೋರಮಂಗಲದಲ್ಲಿನ ನ್ಯಾಯಾಧೀಶರ ಮುಂದೆ ಅಮೂಲ್ಯಳನ್ನು ಹಾಜರುಪಡಿಸಿದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಆಕೆಯನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಿಟ್ಟು ಬಂದರು. ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದ ಸಂಬಂಧ ಫೆ.21ರಂದು ಅಮೂಲ್ಯಳನ್ನು ಪೊಲೀಸರು ಬಂಧಿಸಿದ್ದರು. ನಂತರ ವಿಚಾರಣೆ ಸಲುವಾಗಿ ನಾಲ್ಕು ದಿನ ಆರೋಪಿಯನ್ನು ವಶಕ್ಕೆ ಪಡೆದಿದ್ದರು.

ಸಭೆಗೆ ಆಹ್ವಾನಿಸಿದ್ದು ಯಾರು?

ಫೆ.21ರಂದು ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಸಭೆಗೆ ತನ್ನನ್ನು ಆಹ್ವಾನಿಸಿದ ವ್ಯಕ್ತಿಯ ಹೆಸರನ್ನು ಅಮೂಲ್ಯ ಹೇಳಿದ್ದಾಳೆ. ಕಾರ್ಯಕ್ರಮ ಆಯೋಜಕ ಬಿಬಿಎಂಪಿ ಸದಸ್ಯ ಇಮ್ರಾನ್‌ ಪಾಷಾಗೆ ಆಕೆಯ ಪರಿಚಯವಿಲ್ಲ. ಆದರೆ ಪಾಷಾ ತಂಡದ ಸದಸ್ಯನೊಬ್ಬ ಅಮೂಲ್ಯಳನ್ನು ಸಭೆಗೆ ಆಹ್ವಾನಿಸಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

click me!