ಮಂಗಳೂರು: ಡಿಸಿ ಕಚೇರಿಯಲ್ಲಿ ಸರ್ಕಾರಿ ಕೆಲಸಕ್ಕೆ ಹಾಜರಾದ ದಿ. ಪ್ರವೀಣ್‌ ನೆಟ್ಟಾರು ಪತ್ನಿ

By Kannadaprabha NewsFirst Published Oct 14, 2022, 11:57 AM IST
Highlights

Praveen Nettaru Wife: ಬಿಜೆಪಿ ಮುಖಂಡ ದಿವಂಗತ ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರು ಮಂಗಳೂರಿನ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ

ಮಂಗಳೂರು (ಅ. 14):  ಬಿಜೆಪಿ ಮುಖಂಡ ದಿವಂಗತ ಪ್ರವೀಣ್‌ ನೆಟ್ಟಾರು (Praveen Nettaru) ಅವರ ಪತ್ನಿ ನೂತನ ಕುಮಾರಿ ಅವರು ಅನುಕಂಪದ ನೌಕರಿ ಬಗ್ಗೆ ಸಿಎಂ ಆದೇಶ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ದಕ್ಷಿಣ ಕನ್ನಡ (Dakshina Kannada) ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.  ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಸಹಾಯಕಿ ಹುದ್ದೆಗೆ ನೂತನ ಕುಮಾರಿ ಕರ್ತವ್ಯಕ್ಕೆ ಹಾಜರಾದರು. ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನೂತನ ಕುಮಾರಿ ಅವರು ನೇಮಕಾತಿ ಆದೇಶ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿಗೆ ಸಲ್ಲಿಸಿದರು. 

ಬಳಿಕ ಆದೇಶ ಪತ್ರ ಪಡೆದು ಕರ್ತವ್ಯಕ್ಕೆ ಹಾಜರಾದರು. ಜಿಲ್ಲಾಧಿಕಾರಿ ಕಚೇರಿಯ ಸಿಎಂ ಪರಿಹಾರ ನಿಧಿ ವಿಭಾಗದಲ್ಲಿ ಸಹಾಯಕಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದ್ದು, ಅದರಂತೆ ನೂತನ ಕುಮಾರಿ ಕರ್ತವ್ಯಕ್ಕೆ ಹಾಜರಾದರು. ಸಿಎಂ ಕಚೇರಿಯ ಆದೇಶ ಪ್ರಕಾರ ನೂತನ ಕುಮಾರಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯ ಸಿಎಂ ಪರಿಹಾರ ನಿಧಿ ವಿಭಾಗದಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಳಿಸಲಾಗಿದೆ. 

ಅವರು ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತುರ್ತು ಕೆಲಸದ ಹಿನ್ನೆಲೆಯಲ್ಲಿ ರಜೆಯಲ್ಲಿದ್ದು, ಅಕ್ಟೋಬರ್ 17ರಿಂದ ಕಾಯಂ ಆಗಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಅವರಿಗೆ ಪ್ರತ್ಯೇಕ ಕ್ಯಾಬಿನ್‌ನಲ್ಲಿ ಎಲ್ಲ ವಿಭಾಗದಂತೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪ್ರವೀಣ್ ನೆಟ್ಟಾರು ಪತ್ನಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿ: ಮುತಾಲಿಕ್ ಆಗ್ರಹ

ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ನೂತನ ಕುಮಾರಿ ಅವರಿಗೆ ಅನುಕಂಪ ನೆಲೆಯಲ್ಲಿ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿ ಗ್ರೂಪ್‌ ಸರ್ಕಾರಿ ಉದ್ಯೋಗ ಲಭಿಸಿತ್ತು. ಆದರೆ ಅವರು ಮಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ನಡೆಸಲು ಆದೇಶದಲ್ಲಿ ಗುತ್ತಿಗೆ ನಿಯೋಜನೆ ಮೇರೆಗೆ ಅವಕಾಶ ನೀಡಲಾಗಿದೆ

click me!