ಎಲ್ಲ ಧರ್ಮದವರು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Sep 14, 2023, 11:32 AM IST

ಈ ಬಾರಿ ಒಂದೇ ದಿನ ಹಿಂದೂ-ಮುಸ್ಲಿಂ ಬಾಂಧವರು ಆಚರಿಸಲಿರುವ ಹಬ್ಬಗಳು ಬಂದಿದ್ದು, ಎರಡೂ ಸಮುದಾಯಗಳು ಯಾವುದೇ ಅಡಚಣೆ, ಅತಂಕಗಳಿಲ್ಲದೆ ಶಾಂತಿಯುತವಾಗಿ ಆಚರಿಸುವ ವಿಶ್ವಾಸ ತಮಗಿರುವುದಾಗಿ ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದರು.


ಶಿವಮೊಗ್ಗ (ಸೆ.14) :  ಈ ಬಾರಿ ಒಂದೇ ದಿನ ಹಿಂದೂ-ಮುಸ್ಲಿಂ ಬಾಂಧವರು ಆಚರಿಸಲಿರುವ ಹಬ್ಬಗಳು ಬಂದಿದ್ದು, ಎರಡೂ ಸಮುದಾಯಗಳು ಯಾವುದೇ ಅಡಚಣೆ, ಅತಂಕಗಳಿಲ್ಲದೆ ಶಾಂತಿಯುತವಾಗಿ ಆಚರಿಸುವ ವಿಶ್ವಾಸ ತಮಗಿರುವುದಾಗಿ ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದರು.

ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಭಯ ಧರ್ಮಗಳ ಬಾಂಧವರು ಆಚರಿಸುವ ಹಬ್ಬದಿಂದ ರಾಜ್ಯಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ ಎಂದರು.

Tap to resize

Latest Videos

 

ಶಿಕ್ಷಣ ಸಚಿವರೇ ಇತ್ತ ನೋಡಿ: ಕೊಡಗಿನ 24 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಬ್ಬ ಶಿಕ್ಷಕರೂ ಇಲ್ಲ!

ಎಲ್ಲ ಧರ್ಮದವರು ತಮ್ಮ ಹಬ್ಬಗಳನ್ನು ಸಂಭ್ರಮ ಸಡಗರಗಳಿಂದ ಆಚರಿಸಬೇಕು. ಅಂತೆಯೇ ಜಿಲ್ಲೆಯಲ್ಲಿ ಶಾಂತಿ- ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೈಗೊಳ್ಳುವ ತೀರ್ಮಾನಗಳಿಗೆ ಪೂರಕವಾಗಿ ಸಹಕರಿಸುವಂತೆ ಮನವಿ ಮಾಡಿದ ಅವರು, ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ತಮ್ಮ ನೆಮ್ಮದಿಯ ಬದುಕಿಗೆ ಸದಾ ಜೊತೆಗಿರಲಿದೆ ಎಂದರು.

ವೈಭವಕ್ಕೆ ಧಕ್ಕೆ ಬಾರದಂತೆ ಆಚರಣೆ- ಚನ್ನಬಸಪ್ಪ:

ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸದಾ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಈ ಸಂಬಂಧ ಉಭಯ ಧರ್ಮಗಳ ಮುಖಂಡರೊಂದಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ ಎಂದರು.

ಪ್ರಸ್ತುತ ಸಾಲಿನಲ್ಲಿ ಬಂದಿರುವ ಹಬ್ಬಗಳು ನಮ್ಮ ನಮ್ಮಲ್ಲಿನ ಸ್ನೇಹ-ಸೌಹಾರ್ದತೆ ಸಾಬೀತುಪಡಿಸಿಕೊಳ್ಳಲು ಇರುವ ಸದವಕಾಶ ಇದಾಗಿದೆ. ವೈಭವಕ್ಕೆ ಧಕ್ಕೆ ಬಾರದಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಆಶಯ ತಮಗಿರುವುದಾಗಿ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಸಭೆ-ಸಮಾರಂಭಗಳು ಶಾಂತಿಯುತವಾಗಿ ನಡೆಯುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಬ್ಯಾನರ್ ಬಂಟಿಂಗ್ ಗೆ ನಿರ್ಬಂಧ:

ಕ್ಷುಲ್ಲಕ ಕಾರಣಗಳಿಗಾಗಿ ಅಹಿತಕರ ಘಟನೆಗಳು ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್-ಬಂಟಿಂಟ್‌ಗಳ ಅಳವಡಿಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ಮುಂದಿನ ಎರಡು ವರ್ಷಗಳಿಗೂ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಸಭೆ-ಸಮಾರಂಭ-ಮೆರವಣಿಗೆಗಳ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಲು ವಿದ್ಯುತ್, ಪೊಲೀಸ್, ಕಂದಾಯ, ಸ್ಥಳೀಯ ಸಂಸ್ಥೆಗಳು ಹಾಗೂ ತಹಶೀಲ್ದಾರರನ್ನೊಳಗೊಂಡ ಏಕಗವಾಕ್ಷಿ ಪದ್ದತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆಸಕ್ತರು ತಮ್ಮ ಕಾರ್ಯಕ್ರಮಗಳಿಗಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.

ಜಿಲ್ಲೆಯ ಎಲ್ಲ ತಾಲೂಕು ಹೋಬಳಿ ಕೇಂದ್ರಗಳು ಸೇರಿದಂತೆ ಅಗತ್ಯವಿರುವಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನೂ ಕ್ಯಾಮರಾಗಳನ್ನು ಅಳವಡಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ವೀಡಿಯೋ, ಫೋಟೋಗ್ರಫಿ ಮತ್ತು ಡ್ರೋಣ್ ಮೂಲಕ ಕಾರ್ಯಕ್ರಮ ಹಾಗೂ ಮೆರವಣಿಗೆಗಳ ಚಿತ್ರೀಕರಣ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ಶಾಂತಿಭಂಗ ಮಾಡುವವರ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಸಮಾಜ ಕಂಟಕರಿಗೆ ಕ್ರಮ ಅನಿವಾರ್ಯವಾಗಲಿದೆ. ಅಂತೆಯೇ ಸಾರ್ವಜನಿಕರ ರಕ್ಷಣೆಯೂ ಪರಮಗುರಿಯಾಗಿದೆ ಎಂದ ಅವರು, ಉಭಯ ಧರ್ಮಗಳ ಪ್ರಮುಖರು ತಮ್ಮ ಕಾರ್ಯಕ್ರಮಗಳ ಯಶಸ್ಸಿಗೆ ಸ್ವಯಂಸೇವಕರನ್ನು ನಿಯೋಜಿಸುವುದು ಉತ್ತಮ. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಕೂಡ ಉತ್ತಮ ವಿಧಾನವಾಗಿದೆ ಎಂದರು. 

ಭಾರತ, ಇಂಡಿಯಾ ವಿಚಾರದಲ್ಲಿ ಬಿಜೆಪಿಗೆ ಜನರಿಂದಲೇ ಪಾಠ: ಸಚಿವ ಮಧು ಬಂಗಾರಪ್ಪ

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿಂದೂ ಮುಸ್ಲಿಂ ಮುಖಂಡರುಗಳು ಜಿಲ್ಲಾಡಳಿತಕ್ಕೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ, ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

click me!