ತಮಿಳುನಾಡಿಗೆ ಕಾವೇರಿ ನೀರು: ಸುಮತಲಾ- ಸಚಿವರ ವಾಕ್ಸಮರ

By Kannadaprabha News  |  First Published Sep 14, 2023, 10:36 AM IST

ಕಾವೇರಿ ನದಿಯಲ್ಲಿ ನೀರಿಲ್ಲ ಎನ್ನುವುದನ್ನು ಕಾವೇರಿ ನೀರು ನಿರ್ವಹಣಾ ಸಮಿತಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಾವು ಬುಧವಾರ ನೀರು ಬಿಟ್ಟಿಲ್ಲ ಎಂದ ಸಚಿವ ಚೆಲುವರಾಯಸ್ವಾಮಿ 


ಬೆಂಗಳೂರು(ಸೆ.14):  ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶದ ಬಗ್ಗೆ ಸರ್ವ ಪಕ್ಷ ಸಭೆ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ ಸಚಿವರು ಮತ್ತು ಸಂಸದೆ ಸುಮಲತಾ ಅಂಬರೀಶ್‌ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.

ಸಭೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಕಾವೇರಿ ಕೊಳ್ಳದ ಜಲಾಶಯಗಳ ಸದ್ಯದ ಪರಿಸ್ಥಿತಿ ಅರಿಯಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿಲ್ಲ. ಈವರೆಗೆ ಕೆಆರ್‌ಎಸ್‌ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿಲ್ಲ ಎಂದು ದೂರಿದರು. ಇದಕ್ಕೆ ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, "ಸುಮ್ಮನೇ ರಾಜಕೀಯ ಹೇಳಿಕೆ ನೀಡಬೇಡಿ" ಎಂದು ಕಿಡಿಕಾರಿದ್ದಾರೆ.

Tap to resize

Latest Videos

ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಹೆಚ್ಚಿದ ಕಾವೇರಿ ಕಿಚ್ಚು

ಸುಮಲತಾ ಹೇಳಿದ್ದೇನು?:

ಸಂಸದೆ ಸುಮಲತಾ ಮಾತನಾಡಿ, "ರೈತರಿಗೆ ಅನ್ಯಾಯ ಆಗಬಾರದು ಎಂಬ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಚರ್ಚೆಯಾಗಿದೆ. ಮಳೆ ಬಂದಾಗ ನಾವು ಸುಮ್ಮನೆ ನೀರು ಬಿಡುತ್ತೇವೆ. ಮಳೆ ಬಾರದಿದ್ದಾಗ ಬರ ಪರಿಹಾರ ಕೇಳುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ 5 ಸಾವಿರ ಕ್ಯೂಸೆಕ್ಸ್‌ ನೀರು ಬಿಡುವುದು ಸುಲಭವಲ್ಲ. ನೀರಿನ ವಿಚಾರವಾಗಿ ಯಾರು ರಾಜಕೀಯ ಮಾಡಬಾರದು. ತಮಿಳುನಾಡಿಗೆ ನೀರು ಬಿಡಬಾರದು ಎಂಬುದು ನಮ್ಮ ವಾದ" ಎಂದು ತಿಳಿಸಿದರು.

ಕಾವೇರಿ ವಿಚಾರವಾಗಿ ಕರ್ನಾಟಕ-ತಮಿಳುನಾಡು ನಡುವೆ ಯಾವಾಗಲೂ ಸಮಸ್ಯೆ ಇರುತ್ತದೆ. ತಮಿಳುನಾಡಿನವರು ಪ್ರತಿಯೊಂದು ವಿಚಾರಕ್ಕೂ ಆಕ್ರಮಣಕಾರಿಯಾಗುತ್ತದೆ. ಆ ಬಗ್ಗೆ ಎಚ್ಚರವಹಿಸಬೇಕು. ಪ್ರಧಾನಮಂತ್ರಿ ಅವರು ಮಧ್ಯಸ್ಥಿಕೆವಹಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದಿದ್ದರೆ, ಅಂಬರೀಶ್ ಅವರು ಈ ಹಿಂದೆ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಈಗ ಸಕ್ಷಮ ಪ್ರಾಧಿಕಾರಗಳಿಗೆ ವಾಸ್ತವಾಂಶ ಅರ್ಥ ಮಾಡಿಸುವಲ್ಲಿ ಸರ್ಕಾರ ವಿಫಲವಾಗಿದ್ದರಿಂದ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದರು.

ಸಚಿವರ ತಿರುಗೇಟು:

ಸುಮಲತಾ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾವೇರಿ ನದಿ ನೀರು ವಿಚಾರದಲ್ಲಿ ಹಾಗೂ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ರಾಜಕಾರಣ ಮಾಡಬಾರದು. ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಇನ್ನು, ಕೆಆರ್‌ಎಸ್‌ಗೆ ಭೇಟಿ ನೀಡಿಲ್ಲ ಎನ್ನುತ್ತಾರೆ. ನಾನು ಅಲ್ಲಿಯೇ ಬಂದು ಮಲಗಲು ಅವಕಾಶವಿದೆ. ಆದರೆ, ಸಮಸ್ಯೆ ಬಗೆಹರಿಸುವುದಕ್ಕಷ್ಟೇ ನನ್ನ ಮೊದಲ ಆದ್ಯತೆ ಎಂದು ತಿರುಗೇಟು ನೀಡಿದರು.
ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾವೇರಿ ನದಿಯಲ್ಲಿ ನೀರಿಲ್ಲ ಎನ್ನುವುದನ್ನು ಕಾವೇರಿ ನೀರು ನಿರ್ವಹಣಾ ಸಮಿತಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಾವು ಬುಧವಾರ ನೀರು ಬಿಟ್ಟಿಲ್ಲ ಎಂದರು.

ಕಾವೇರಿ ನೀರಿನ ಸಮಸ್ಯೆಗೆ ಅದೊಂದು ಯೋಜನೆ ಪರಿಹಾರವೆಂದ ಸಿದ್ದರಾಮಯ್ಯ!

ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿಲ್ಲ ಎಂಬ ಸುಮಲತಾ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಜಿಲ್ಲೆಯ ಸಂಸದರು. ಅವರು ಕೆಆರ್‌ಎಸ್‌ ಪರಿಸ್ಥಿತಿ ನೋಡುತ್ತಿದ್ದಾರೆ ಅಲ್ವಾ. ಹೀಗಾಗಿ ಅವರೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ, ರಾಜ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿ ಎಂದರು.

ನಾವು ಸರ್ಕಾರದ ಪರ: ಪ್ರತಾಪ್‌ ಸಿಂಹ

ಸರ್ವ ಪಕ್ಷ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್‌ ಸಿಂಹ, ಸರ್ವ ಪಕ್ಷ ಸಭೆಯಲ್ಲಿ ನಮ್ಮ ಪಕ್ಷದ ಅಭಿಪ್ರಾಯ ತಿಳಿಸಿದ್ದೇನೆ. ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡಬೇಕು ಎಂಬ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬೆಂಬಲವಾಗಿ ಇರುತ್ತೇವೆ. ಆದರೆ, ಕಾವೇರಿ ನೀರು ನಿರ್ವಹಣಾ ಸಮಿತಿಗೆ ಗೌರವ ಕೊಡಬೇಡಿ ಎಂದು ಹೇಳಿದ್ದೇವೆ. ಸಮಿತಿ ನೀಡಿರುವ ಸೂಚನೆಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.

click me!