Tumkuru: ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ; ಬಿಜೆಪಿ ಶಾಸಕನ ಪುತ್ರಿಗೆ ಎದುರಾಯ್ತು ಕಾನೂನು ಸಂಕಷ್ಟ!

Published : Sep 03, 2026, 04:26 PM IST
BJP MLA Daughter

ಸಾರಾಂಶ

ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕನ ಪುತ್ರಿ ಐಶ್ವರ್ಯಗೆ ಕಾನೂನು ಸಂಕಷ್ಟ ಎದುರಾಗಿದೆ. ಹಾಗಾದರೆ ಆಗಿದ್ದೇನು ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಅವರಿಗೆ ಕಾನೂನು ಹಾದಿಯಲ್ಲಿ ಭಾರಿ ಹಿನ್ನಡೆಯಾಗಿದೆ. ಮುಂಜಾಗ್ರತಾ/ಮುಂಗಡ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಶ್ರೀರಂಗಪಟ್ಟಣದ 3ನೇ ಅಪರ ಸತ್ರ ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿದೆ.

ದೇವಸ್ಥಾನದಲ್ಲಿ ನಡೆದ ಘಟನೆ ಮತ್ತು ಹಲ್ಲೆಯ ಹಿನ್ನೆಲೆ!

ಆಗಸ್ಟ್ 2ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದಲ್ಲಿರುವ ಶ್ರೀ ಮಾರಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಭದ್ರತಾ ಕರ್ತವ್ಯಕ್ಕಾಗಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಅವರನ್ನು ನಿಯೋಜಿಸಲಾಗಿತ್ತು. ಸಾಲಿನಲ್ಲಿ ನಿಂತಿದ್ದ ಸಾವಿರಾರು ಭಕ್ತರ ನಡುವೆ ಐಶ್ವರ್ಯ ಅವರು ನೇರವಾಗಿ ಗರ್ಭಗುಡಿಗೆ ತೆರಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಪಿಎಸ್‌ಐ ಸವಿತಾ, "ಸಾಲಿನಲ್ಲಿ ನಿಂತಿರುವ ಭಕ್ತರಿಗೆ ತೊಂದರೆಯಾಗುತ್ತದೆ, ಸ್ವಲ್ಪ ಸಮಯ ಕಾಯಿರಿ" ಎಂದು ವಿನಂತಿಸಿದ್ದಾರೆ.

ಹೆಚ್ಚಿದ್ದ ಮಾತಿನ ಚಕಮಕಿ!

ಇದರಿಂದ ಕೋಪಗೊಂಡ ಐಶ್ವರ್ಯ ತಮ್ಮ ರಾಜಕೀಯ ಪ್ರಭಾವದ ಮಾತುಗಳನ್ನಾಡಿ, ಪಿಎಸ್‌ಐ ಜೊತೆ ತೀವ್ರ ಬಿಸಿಬಿಸಿ ವಾಗ್ವಾದಕ್ಕಿಳಿದಿದ್ದಾರೆ. ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿದಾಗ, ಸಾರ್ವಜನಿಕರ ಎದುರಲ್ಲೇ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಅವರ ಮುಖಕ್ಕೆ ಐಶ್ವರ್ಯ ಕಪಾಳಮೋಕ್ಷ ಮಾಡಿದ್ದಾರೆ.

ಕ್ಯಾತನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲು!

ಘಟನೆ ನಡೆದ ತಕ್ಷಣವೇ ಸಂತ್ರಸ್ತ ಪಿಎಸ್‌ಐ ಸವಿತಾ ಅವರು ಕ್ಯಾತನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ, ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಕಠಿಣ ಕಾಯ್ದೆಗಳಡಿ (BNS ಕಾಯ್ದೆಯಡಿ) ಐಶ್ವರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಪ್ರಕರಣ ದಾಖಲಾದ ನಂತರವೂ ಜನಪ್ರತಿನಿಧಿಯ ಪುತ್ರಿಯಾದ ಐಶ್ವರ್ಯ ಅವರನ್ನು ಪೊಲೀಸರು ಬಂಧಿಸಿರಲಿಲ್ಲ. ಬದಲಿಗೆ ಅವರನ್ನು ಠಾಣೆಗೆ ಕರೆಸಿ ಕೇವಲ ಪ್ರಾಥಮಿಕ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು.

ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ!

ಬಂಧನದಿಂದ ತಪ್ಪಿಸಿಕೊಳ್ಳಲು ಮತ್ತು ಪ್ರಕರಣದಿಂದ ಕಾನೂನಾತ್ಮಕ ರಕ್ಷಣೆ ಪಡೆಯಲು ಐಶ್ವರ್ಯ ಅವರು ಶ್ರೀರಂಗಪಟ್ಟಣದ 3ನೇ ಅಪರ ಸತ್ರ ನ್ಯಾಯಾಲಯದಲ್ಲಿ ಮುಂಗಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ಅಧಿಕಾರ ದುರ್ಬಳಕೆಯ ಆರೋಪದ ಗಂಭೀರತೆಯನ್ನು ಪರಿಗಣಿಸಿ, ಜಾಮೀನು ನೀಡಲು ನಿರಾಕರಿಸಿದೆ ಹಾಗೂ ಅರ್ಜಿಯನ್ನು ವಜಾಗೊಳಿಸಿದೆ.

ಜಾಮೀನು ಅರ್ಜಿ ತಿರಸ್ಕಾರ!

ಕೋರ್ಟ್ ಜಾಮೀನು ಅರ್ಜಿಯನ್ನು ತಳ್ಳಿಹಾಕಿರುವುದರಿಂದ, ಶಾಸಕರ ಪುತ್ರಿ ಐಶ್ವರ್ಯ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಮುಂಬರುವ ದಿನಗಳಲ್ಲಿ ಪೊಲೀಸರು ಅವರನ್ನು ಬಂಧಿಸುತ್ತಾರೋ ಅಥವಾ ಅವರು ಉನ್ನತ ನ್ಯಾಯಾಲಯದ ಬಾಗಿಲು ತಟ್ಟುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.

PREV
Read more Articles on
click me!

Recommended Stories

ಆದಾಯದಲ್ಲಿ ನೈಋತ್ಯ ರೈಲ್ವೆಗೆ ಗೋಲ್ಡನ್ ಆಗಸ್ಟ್: ₹805.70 ಕೋಟಿ ಮಾಸಿಕ ಆದಾಯ ಗಳಿಸಿ ಹೊಸ ದಾಖಲೆ!
ಕಲಬುರಗಿ: ರೌಡಿಶೀಟರ್‌ನಿಂದ ಲಂಚ ಪಡೆಯುವಾಗ ಪೊಲೀಸ್ ಕಾನ್ಸ್‌ಟೇಬಲ್‌ಗಳೇ ಲೋಕಾಯುಕ್ತ ಬಲೆಗೆ!