Siddaramaiah; ಅಹಿಂದ ಮನೆಯಲ್ಲಿ ಮೂರು ಬಾಗಿಲು, ಸಾರಥ್ಯಕ್ಕೆ ಹಲವರ ಕಣ್ಣು! ಸಿದ್ದರಾಮಯ್ಯ ಬಳಿಕ ಇವರ ಪಾಲಾಗಲಿದೆಯಾ ಚುಕ್ಕಾಣಿ?

Published : Sep 07, 2026, 09:28 PM IST
Siddaramaih

ಸಾರಾಂಶ

ಸಿದ್ದರಾಮಯ್ಯ ಅವರ ನೇತೃತ್ವದ 'ಅಹಿಂದ' ಒಕ್ಕೂಟದಲ್ಲಿ ನಾಯಕತ್ವಕ್ಕಾಗಿ ಆಂತರಿಕ ಸಂಘರ್ಷ ತೀವ್ರಗೊಂಡಿದೆ. ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ, ಜಿ. ಪರಮೇಶ್ವರ್ ನಡುವಿನ ಪೈಪೋಟಿಯಿಂದಾಗಿ ಒಳಬೇಗುದಿ ಬಹಿರಂಗವಾಗಿದ್ದು, ಸಿದ್ದರಾಮಯ್ಯ ನಂತರದ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸುಗೊಂಡಿದೆ.

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ರಾಜಕೀಯ ಅಸ್ತ್ರ ಎಂದೇ ಗುರುತಿಸಲ್ಪಟ್ಟಿರುವ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮೈತ್ರಿಕೂಟದ ಕೋಟೆಯಲ್ಲಿ ಈಗ ಬಿರುಕು ಮೂಡಿದೆಯೇ? ಹೌದು, ಅಹಿಂದ ನಾಯಕರ ಒಳಬೇಗುದಿ ಮತ್ತು ಶೀತಲ ಸಮರ ದಿನೇ-ದಿನೇ ದೊಡ್ಡದಾಗುತ್ತಲೇ ಸಾಗುತ್ತಿದ್ದು, ಇದು ನೇರವಾಗಿ ಅಹಿಂದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ಅನಾವರಣಗೊಳಿಸುತ್ತಿದೆ. ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯ ಹೆಗ್ಗುರುತಾಗಿರುವ ಅಹಿಂದ ಮುಂಚೂಣಿಯಲ್ಲಿ ಸದ್ಯ ಮೂರು ಬಾಗಿಲು ಸೃಷ್ಟಿಯಾಗಿದ್ದು, ಇವರ ನಂತರ ಈ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.

ಪ್ರಮುಖರ ಗೈರು!

ಇದಕ್ಕೆ ಸ್ಪಷ್ಟ ಪುರಾವೆ ಎಂಬಂತೆ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಬೃಹತ್ ಕಾರ್ಯಕ್ರಮದಲ್ಲಿ ಹಿರಿಯ ಹಾಗೂ ಪ್ರಮುಖ ನಾಯಕರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಈ ಬೆಳವಣಿಗೆಯು ಪಕ್ಷದ ಒಳಗೆ ಎಲ್ಲವೂ ಸರಿಯಿಲ್ಲ ಮತ್ತು ಅಹಿಂದ ನಾಯಕರ ನಡುವಿನ ಬಿರುಕು ಮತ್ತಷ್ಟು ಆಳವಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಉತ್ತರಾಧಿಕಾರತ್ವದ ರೇಸ್ ಮತ್ತು ನಾಯಕರ ಗೈರುಹಾಜರಿ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೈಸರ್ಗಿಕ ಉತ್ತರಾಧಿಕಾರಿಯಂತೆ ಈ ಹಿಂದೆ ಬಿಂಬಿತವಾಗಿದ್ದ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಹಿರಿಯ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರಂತಹ ಪ್ರಮುಖರು ಈ ಹಿಂದುಳಿದ ವರ್ಗಗಳ ಸಮಾವೇಶದಿಂದ ದೂರ ಉಳಿದಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೇ ಸಾರಥ್ಯಕ್ಕಾಗಿ ಆಂತರಿಕ ಪೈಪೋಟಿ ನಡೆಯುತ್ತಿದೆಯೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಮುಂಚೂನಿಯಲ್ಲಿ ಲಾಡ್‌ ಆಂಡ್‌ ಪರಮೇಶ್ವರ!

ಹಿರಿಯ ದಲಿತ ನಾಯಕ ಜಿ. ಪರಮೇಶ್ವರ್ ಅವರ ಹೆಸರೂ ಮುಂಚೂಣಿಯಲ್ಲಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಸಂತೋಷ್ ಲಾಡ್, ಅಜಯ್ ಸಿಂಗ್ ಪ್ರಭಾವಿ ಯುವ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸೇರಿದಂತೆ ಹಲವು ನಾಯಕರು ಈ ರೇಸ್‌ನಲ್ಲಿ ವಿವಿಧ ಹಂತಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ, ಪ್ರಮುಖ ಸಮಾವೇಶಕ್ಕೆ ಪ್ರಮುಖ ಸಾರಥಿಗಳೇ ಗೈರಾಗುತ್ತಿರುವುದು ಅಹಿಂದ ಸಂಘಟನೆ ಒಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ಮನೆ ಮೂರು ಬಾಗಿಲಾದ ಅಹಿಂದ ಒಕ್ಕೂಟ!

ರಾಜಕೀಯ ವಿಶ್ಲೇಷಕರ ಪ್ರಕಾರ, ಸದ್ಯದ ಕಾಂಗ್ರೆಸ್ ಹಾಗೂ ಅಹಿಂದ ಮನೆಯಲ್ಲಿ ಮೂರು 'ಬಾಗಿಲುಗಳು' ಸೃಷ್ಟಿಯಾಗಿವೆ ಎನ್ನಲಾಗಿವೆ. ಇತ್ತೀಚೆಗೆ ಬಹಿರಂಗ ಹೇಳಿಕೆಗಳು ಮತ್ತು ಸರಣಿ ಸಭೆಗಳ ಮೂಲಕ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗಗಳ ಕಾರ್ಯಕ್ರಮಕ್ಕೆ ಪ್ರಮುಖರು ಗೈರಾಗುವ ಮೂಲಕ ಹೈಕಮಾಂಡ್‌ಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮದೇ ಆದ ಅಸಮಾಧಾನದ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಚುಕ್ಕಾಣಿ ಯಾರಿಗೆ?

ಸಿದ್ದರಾಮಯ್ಯ ಅವರ ಬಳಿಕ ಅಹಿಂದ ಮತಬ್ಯಾಂಕ್ ಮತ್ತು ನಾಯಕತ್ವದ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವುದು ಸದ್ಯದ ಯಕ್ಷಪ್ರಶ್ನೆ. ಡಾ. ಜಿ. ಪರಮೇಶ್ವರ್ ಅವರು ತಮ್ಮ ಹಿರಿತನ ಮತ್ತು ಅನುಭವದ ಆಧಾರದ ಮೇಲೆ ಹಕ್ಕು ಮಂಡಿಸುತ್ತಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಬಲವಾದ ಹಿಡಿತ ಹೊಂದಿರುವ ಸತೀಶ್ ಜಾರಕಿಹೊಳಿ ಅಹಿಂದ ನಾಯಕತ್ವದ ನೈಸರ್ಗಿಕ ವಾರಸುದಾರ ತಾವೇ ಎಂಬಂತೆ ಹೆಜ್ಜೆ ಇಡುತ್ತಿದ್ದಾರೆ. ಇನ್ನೊಂದೆಡೆ ಸಂತೋಷ್ ಲಾಡ್ ಅವರಂತಹ ಯುವ ನಾಯಕರು ಹೊಸ ತಲೆಮಾರಿನ ಧ್ವನಿಯಾಗಿ ಹೊರಹೊಮ್ಮಲು ಯತ್ನಿಸುತ್ತಿದ್ದಾರೆ.

ಕಾದು ನೋಡಬೇಕಾಗಿರುವುದು ಏನು?

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ‘ಅಹಿಂದ’ದಲ್ಲಿನ ಈ ಒಳಬೇಗುದಿ ಮುಂಬರುವ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಾರಥ್ಯದ ಈ ಹೋರಾಟ ತಣ್ಣಗಾಗದಿದ್ದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗುವ ಮುನ್ಸೂಚನೆ ದಟ್ಟವಾಗಿದೆ.

PREV
Read more Articles on
click me!

Recommended Stories

ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
ಗರ್ಭಗುಡಿಗೆ ಪ್ರತಿದಿನ ಬೀಳುತ್ತೆ ಸೂರ್ಯಕಿರಣ: ಐಹೊಳೆಯ ಈ ದೇಗುಲದ ನಿಗೂಢ ರಹಸ್ಯ ಗೊತ್ತಾ?