
ಅಮೀನಗಡ (ಸೆ.07): ಬಾಗಲಕೋಟೆ ಜಿಲ್ಲೆಯ ಐಹೊಳೆಯ ದುರ್ಗಾ ದೇವಾಲಯ ಗರ್ಭಗುಡಿಯಲ್ಲಿ ಸೂರ್ಯತಿಲಕ ಸ್ಪರ್ಶವಾಗಿದ್ದು, ಇದು ಸೂರ್ಯ ದೇವಸ್ಥಾನವೇ ಎಂಬ ಸಂಶಯ ಮೂಡಿದೆ. ಹೀಗಾಗಿ ಇದನ್ನು ಸರಿಯಾಗಿ ವೈಜ್ಞಾನಿಕವಾಗಿ ಸಂಶೋಧನೆ ಮಾಡುವ ಅಗತ್ಯವಿದೆ ಎಂಬ ಆಗ್ರಹ ಕೇಳಿಬಂದಿದೆ.
ಈ ಕುರಿತು ಮಾತನಾಡಿದ ಐಹೊಳೆಯ ಇತಿಹಾಸ ಸಂಶೋಧಕ, ಶಿಕ್ಷಕ, ಪ್ರವಾಸಿ ಮಾರ್ಗದರ್ಶಿ ಪರಶುರಾಮ ಗೋಡಿ, ಪ್ರತಿದಿನ ಬೆಳಗ್ಗೆ 7 ಗಂಟೆ 10 ನಿಮಿಷದಿಂದ ಪ್ರಾರಂಭವಾಗಿ 50 ನಿಮಿಷದವರೆಗೆ ಸೂರ್ಯನ ರೇಷ್ಮೆಕಿರಣಗಳು ನೇರವಾಗಿ ಗರ್ಭಗುಡಿಯ ಮೇಲೆ ಸ್ಪರ್ಶ ಮಾಡುತ್ತವೆ. ಒಂದು ವೇಳೆ ಈ ದೇವಾಲಯದಲ್ಲಿ ಸೂರ್ಯವಿಗ್ರಹವಿದ್ದರೆ ಸೂರ್ಯನ ಹಣೆಯ ಮೇಲೆ ಬಿದ್ದು, ನಿಧಾನವಾಗಿ ಮುಖ, ವಕ್ಷಸ್ಥಳ, ನಾಭಿ ನಂತರ ಪಾದದವರೆಗೂ ಸ್ಪರ್ಶಿಸುತ್ತೆ.
ಇದನ್ನು ಸೂರ್ಯಾಭಿಷೇಕ, ಸೂರ್ಯತಿಲಕ ಎಂದೂ ಕರೆಯುತ್ತಾರೆ ಎಂದಿದ್ದಾರೆ. ಈ ಸೂರ್ಯತಿಲಕ ಕಿರಣವು ಪ್ರತಿ ಕೃಷ್ಣ ಜನ್ಮಾಷ್ಠಮಿಯಂದು ಮತ್ತು ಸೂರ್ಯದೇವ ದಕ್ಷಿಣಾಯಣ ಮತ್ತು ಉತ್ತರಾಯಣ ಮಧ್ಯಕಾಲದಲ್ಲಿ ದೇವಾಲಯ ಗರ್ಭಗುಡಿಯೊಳಗೆ ಬೀಳುತ್ತವೆ. ವಿಗ್ರಹದ ತಲೆಯ ಮೇಲೆ ಮೊದಲು ಕಾಣಿಸಿಕೊಳ್ಳುವ ಸೂರ್ಯತಿಲಕ ವೈಜ್ಞಾನಿಕ ಯುಗಕ್ಕೆ ಸವಾಲಾಗಿದೆ.
1500 ವರ್ಷಗಳ ಹಿಂದೆ ಚಾಲುಕ್ಯರು ಕಟ್ಟಿದ ಈ ದೇವಾಲಯದ ಈ ಅದ್ಭುತ ಸನ್ನಿವೇಶವನ್ನು ಇಂದು ಅಯೋಧ್ಯೆಯ ರಾಮಮಂದಿರದಲ್ಲೂ, ಅಪ್ಟೋ ಮೆಕ್ಯಾನಿಕಲ್ ವ್ಯವಸ್ಥೆಯ ಮೂಲಕ ಶ್ರೀರಾಮದೇವರಿಗೆ ಸೂರ್ಯತಿಲಕದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಐಹೊಳೆ ಈ ದೇವಾಲಯವೇ ಸ್ಫೂರ್ತಿ ಎನ್ನಲಾಗುತ್ತಿದೆ. ಪ್ರಾಚ್ಯವಸ್ತು ಇಲಾಖೆ ಐಹೊಳೆಯ ದುರ್ಗಾ ದೇವಾಲಯವನ್ನು ತಜ್ಞರಿಂದ ಸರಿಯಾಗಿ ಸಂಶೋಧನೆಗೊಳಪಡಿಸಿ, ಸೂರ್ಯದೇವಾಲಯವಿತ್ತೆ ಎಂಬುದನ್ನು ಶೋಧಿಸಬೇಕಿದೆ ಎಂದರು.