ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಯೇ ಅನುಮಾನಕ್ಕೆ ಕಾರಣ| ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‌ಡೌನ್ ವೇಳೆ ಜನತೆಯ ಹಸಿವು ನೀಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಅಕ್ಕಿ ವಿತರಣೆ|
ಶಿವಕುಮಾರ ಕುಷ್ಟಗಿ
ಗದಗ(ನ.04): ಲಾಕ್‌ಡೌನ್ ವೇಳೆಯಲ್ಲಿಯೇ ವ್ಯಾಪಕವಾಗಿ ಅಕ್ರಮ ಅಕ್ಕಿಯ ದಾಸ್ತಾನು ಗದಗ ನಗರದಲ್ಲಿ ಪತ್ತೆಯಾಗಿ, ಪ್ರಮುಖ ವಾಣಿಜ್ಯ ಕೇಂದ್ರಗಳಾದ ಹುಬ್ಬಳ್ಳಿ, ಗಂಗಾವತಿಗೂ ವ್ಯಾಪಿಸಿಕೊಂಡು ನಂತರ ರಾಜ್ಯದ ಗಮನವನ್ನೇ ಸೆಳೆದಿತ್ತು. ಈ ದಂಧೆಗೆ ನಾವು ಕಡಿವಾಣ ಹಾಕಿದ್ದೇವೆ ಎಂದು ಸರ್ಕಾರದ ಆಹಾರ ಇಲಾಖೆ ಬೀಗುತ್ತಿರುವ ಮಧ್ಯೆಯೇ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
undefined
ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‌ಡೌನ್ ವೇಳೆ ಜನತೆಯ ಹಸಿವು ನೀಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಅಕ್ಕಿಯನ್ನು ವಿತರಣೆ ಮಾಡಲಾಗಿತ್ತು. ಈ ಅಕ್ಕಿಯನ್ನು ಅತ್ಯಂತ ಕಡಿಮೆ ದರಕ್ಕೆ ಖರೀದಿಸಿ ಅಕ್ರಮ ಅಕ್ಕಿ ದಂಧೆಕೋರರು ಗದಗ ನಗರದಲ್ಲಿಯೇ 200 ಕ್ಕೂ ಹೆಚ್ಚು ಕ್ವಿಂಟಾಲ್ ಅಧಿಕ ಅಕ್ಕಿ ಸಂಗ್ರಹಿಸಿದ್ದು ಆಹಾರ ಹಾಗೂ ಪೊಲೀಸ್ ಇಲಾಖೆ ನಡೆಸಿದ ದಾಳಿಯಲ್ಲಿ ಪತ್ತೆಯಾಗಿತ್ತು. ಬಡವರಿಗೆ ಸರ್ಕಾರ ಕೊಟ್ಟಅಕ್ಕಿ ಅಕ್ರಮ ದಂಧೆ ಮಾಡುವವರ ಪಾಲಾಗಿ ಹೋಗಿತ್ತು.
ಹುಬ್ಬಳ್ಳಿ ಮೂಲಕ ರವಾನೆ:
ಮೊದ ಮೊದಲು ಜಿಲ್ಲೆಯ ಅಕ್ರಮ ಪಡಿತರ ಅಕ್ಕಿ ಪಕ್ಕದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಕ್ಕಿ ಪಾಲಿಶಿಂಗ್ ಮಿಲ್‌ಗಳಿಗೆ ರವಾನೆಯಾಗುತಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಈ ಅಕ್ರಮ ದಂಧೆಯ ಕೇಂದ್ರ ಬಿಂದುವಾಗಿರುವುದು ವಾಣಿಜ್ಯ ನಗರಿ ಹುಬ್ಬಳ್ಳಿ. ಗದಗ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಂಗ್ರಹವಾಗುವ ಅಕ್ಕಿಯನ್ನು ಹುಬ್ಬಳ್ಳಿಯಲ್ಲಿರುವ ಖರೀದಿದಾರರೇ ಖರೀದಿಸುತ್ತಿದ್ದಾರೆ. ಅಲ್ಲಿಂದಲೇ ಪಡಿತರ ಅಕ್ಕಿ ಬೇರೆಡೆ ರವಾನೆಯುತ್ತಿದೆಯೇ ಅಥವಾ ಅದೇ ಅಕ್ಕಿಯನ್ನು ಮತ್ತೆ ಸರ್ಕಾರಕ್ಕೆ ಮಾರಲಾಗುತ್ತಿದೆಯೇ ಎನ್ನುವುದು ಮಾತ್ರ ಸದ್ಯ ನಡೆಯುತ್ತಿರುವ ತನಿಖೆಯಿಂದಲೇ ಆಚೆ ಬರಬೇಕಿದೆ.
ರೋಣ: ಈ ಊರವ್ರಿಗೆ ಎರಡೂವರೆ ಕಿಮೀ ನಡೆದ್ರಷ್ಟೇ ಅನ್ನಭಾಗ್ಯ!
ನಿಂತಿಲ್ಲ ಅಕ್ರಮ:
ಆಹಾರ ಇಲಾಖೆ, ಪೊಲೀಸ್ ಇಲಾಖೆ ಬಿಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಿವೆಯಾದರೂ, ಅಕ್ರಮ ಪಡಿತರ ಅಕ್ಕಿ ದಂಧೆ ಮಾತ್ರ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಗದಗ ಜಿಲ್ಲೆಯ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸ್ಥಾನದ ಕೋಣೆಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದು 40 ಕ್ವಿಂಟಲ್‌ಗೂ ಅಧಿಕ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿದ್ದು, ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಮೋದ ಪ್ರಕಾಶ್ ಮಾನೇದ (28) ಎನ್ನುವ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಉತ್ತಮ ಉದಾಹರಣೆಯಾಗಿದೆ.
ಅಸಹಾಯಕರಂತೆ ವರ್ತನೆ
ಸರ್ಕಾರ ನೀಡಿರುವ ಪಡಿತರ ಅಕ್ಕಿ ಜತೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್ ವೇಳೆ ನೀಡಿದ ಹೆಚ್ಚುವರಿ ಅಕ್ಕಿ ಸಾರ್ವಜನಿಕರ ಬಳಿ ಸಾಕಷ್ಟುಸಂಗ್ರಹವಿದ್ದು, ಅದು ಹಾಳಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ಅಕ್ಕಿ ಮಾರಾಟ ಮಾಡುತ್ತಿದ್ದಾರೆ. ಇದು ಅಕ್ರಮ ವ್ಯವಹಾರ ನಡೆಸುವವರಿಗೆ ಇನ್ನಷ್ಟುಅನುಕೂಲವಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಅಕ್ಕಿ ಲಭ್ಯವಾಗುತ್ತಿದೆ. ಇನ್ನು ಸಾರ್ವಜನಿಕರೇ ಅದನ್ನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳಿಗೆ ಇದು ನೆಪಕ್ಕೆ ಕಾರಣವಾಗಿದ್ದು ಅವರು ಕೂಡಾ ಅಸಹಾಯಕರಂತೆ ವರ್ತಿಸುತ್ತಿದ್ದಾರೆ.
ಅಕ್ರಮ ಪಡಿತರ ಅಕ್ಕಿ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಈಗಾಗಲೇ ಗದಗ ಜಿಲ್ಲೆಯ ಎಲ್ಲಾ ಆಹಾರ ನಿರೀಕ್ಷಕರಿಗೆ ಪರಿಶೀಲನೆ ನಡೆಸುವಂತೆ ಸ್ಪಷ್ಟಸೂಚನೆ ನೀಡಲಾಗಿದೆ ಎಂದು ಗದಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ವಿನೋದಕುಮಾರ ಎಚ್ ತಿಳಿಸಿದ್ದಾರೆ.