ಹುಲಿಗೆಮ್ಮ ದೇವಸ್ಥಾನದಲ್ಲಿ ನಾಳೆಯಿಂದ ಭಕ್ತರಿಗೆ ದರ್ಶನ| ಏಳು ತಿಂಗಳು ಮುಚ್ಚಿದ್ದ ದೇವಸ್ಥಾನ| ಲಾಕ್‌ಡೌನ್ ಅವಧಿಯಲ್ಲೂ ಆಗಮಿಸುತ್ತಿದ್ದ ಭಕ್ತರು| ಕೊಪ್ಪಳ ಜಿಲ್ಲೆಯಲ್ಲಿರುವ ಹುಲಿಗೆಮ್ಮ ದೇವಸ್ಥಾನ|
ಎಸ್. ನಾರಾಯಣ
ಮುನಿರಾಬಾದ್(ನ.04): ಕೊರೋನಾ ಸೋಂಕಿನ ಭೀತಿಯಿಂದಾಗಿ ಕಳೆದ ಏಳು ತಿಂಗಳುಗಳ ಕಾಲ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ನ.5 ರಿಂದ ಅವಕಾಶ ಲಭಿಸಲಿದೆ. ಈ ವಿಷಯವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಮಪ್ಪ ಅವರು ‘ಕನ್ನಡಪ್ರಭ’, ಸುವರ್ಣ. ಕಾಂ ಗೆ ಖಚಿತಪಡಿಸಿದ್ದಾರೆ.
ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಮಾ. 21ರಿಂದ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಯಿತು. ಅಂದಿನಿಂದ ಇಂದಿನ ವರೆಗೆ ಅಂದರೆ ಸುಮಾರು 7 ತಿಂಗಳ ಸುದೀರ್ಘ ಅವಧಿಯ ವರೆಗೆ ದೇವಸ್ಥಾನದಲ್ಲಿ ಧಾರ್ಮಿಕ ಪ್ರಕ್ರಿಯೆ ಮಾತ್ರ ನಡೆಯಿತು. ಜು. 7ರ ಆನಂತರ ದೇವಸ್ಥಾನ ತೆರೆಯಲು ಅವಕಾಶ ನೀಡಲಾಯಿತಾದರೂ ಹುಲಿಗೆಮ್ಮ ದೇವಸ್ಥಾನ ಮಾತ್ರ ತೆರೆದಿರಲಿಲ್ಲ.
ತೆರೆಯದಿರಲು ಕಾರಣವೇನು?
ಪ್ರತಿ ಹುಣ್ಣಿಮೆಗೆ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಲಾಕ್‌ಡೌನ್ ಪೂರ್ಣಪ್ರಮಾಣದಲ್ಲಿ ತೆರವಾಗದಿದ್ದರೂ ಜು. 4ರಂದು ಹುಣ್ಣಿಮೆ ಇದ್ದ ಹಿನ್ನೆಲೆಯಲ್ಲಿ ಅದರ ಹಿಂದಿನ ದಿನ ಜು. 3ರಂದು ದೇವಸ್ಥಾನಕ್ಕೆ 30-35 ಸಾವಿರ ಭಕ್ತರು ಆಗಮಿಸಿದ್ದರು. ಅದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಹುಲಿಗಿ ಗ್ರಾಪಂ ಸದಸ್ಯರು ಚರ್ಚಿಸಿದರು. ಲಾಕ್‌ಡೌನ್ ನಡುವೆಯೂ ಅಮ್ಮನವರ ದರ್ಶನಕ್ಕೆ ಇಷ್ಟೊಂದು ಭಕ್ತರು ಬಂದಿದ್ದಾರೆ. ಜು. 7ರಂದು ದೇವಸ್ಥಾನದ ಬಾಗಿಲು ತೆರೆದರೆ ಇನ್ನೂ ಅಧಿಕ ಜನರು ಅಮ್ಮನವರ ದರ್ಶನಕ್ಕೆ ಆಗಮಿಸುತ್ತಾರೆ. ಇದರಿಂದ ಗ್ರಾಮದಲ್ಲಿ ಕರೋನಾ ಹಬ್ಬುವ ಸಾಧ್ಯತೆ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಜು. 31ರ ವರೆಗೆ ತೆರೆಯಬಾರದು ಎಂದು ಠರಾವು ಮಾಡಿ, ಅದರ ಪ್ರತಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ನೀಡಿದರು. ಜಿಲ್ಲಾಧಿಕಾರಿ ಜು. 31ರ ವರೆಗೆ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಿದರು. ಇದೇ ಪ್ರಕ್ರಿಯೆ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವರೆಗೆ ಮುಂದುವರಿದಿತ್ತು. ನವರಾತ್ರಿಯಲ್ಲಿ ಭಕ್ತರಿಗಾಗಿ ದೇವಸ್ಥಾನ ಬಾಗಿಲನ್ನು ತೆರೆಯಲಾಗುವುದು ಎಂಬ ನಂಬಿಕೆ ಇತ್ತು. ಆದರೆ ಅದು ನಿಜವಾಗಲಿಲ್ಲ.
ಕೊಪ್ಪಳ: ಅನ್‌ಲಾಕ್ ಆದ್ರೂ ಭಕ್ತರಿಗೆ ದರ್ಶನ ನೀಡಿದ ಹುಲಿಗೆಮ್ಮ..!
ದೇವಸ್ಥಾನದ ಬಾಗಿಲು ಮುಚ್ಚಿದ್ದರೂ ಭಕ್ತರು ನಿರಂತರ ದೇವಸ್ಥಾನಕ್ಕೆ ಆಗಮಿಸುತ್ತಲೇ ಇದ್ದರು. ಗ್ರಾಮಸ್ಥರು ಹಾಗೂ ಗ್ರಾಪಂನವರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದೇವಿ ದರ್ಶನ ಪಡೆಯಲು ಬಂದ ಸಾವಿರಾರು ಭಕ್ತರು ಮುಚ್ಚಿದ ಬಾಗಿಲಿಗೆ ಕೈ ಮುಗಿದು, ಹೊಳೆ ದಂಡೆಯಲ್ಲಿರುವ ಅಮ್ಮನವರ ಪಾದಕಟ್ಟೆಗೆ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ನಮಗೆ ಅಮ್ಮ ಮುಖ್ಯ, ನಮಗೆ ಯಾವ ಲಾಕ್‌ಡೌನ್ ಲೆಕ್ಕಕ್ಕಿಲ್ಲ ಎಂದು ಭಕ್ತರು ಹೇಳುತ್ತಿದ್ದರು.
ಶ್ರೀ ಹುಲಿಗೆಮ್ಮ ದೇವಸ್ಥಾನ ನ. 5ರಂದು ಪ್ರಾರಂಭವಾಗುತ್ತಿರುವುದು ಸಂತೋಷದ ವಿಷಯ ಎಂದು ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ದೈವದವರಾದ ವಿಜಯಕುಮಾರ ಶೆಟ್ಟಿ ‘ಕನ್ನಡಪ್ರಭ’ಸುವರ್ಣ. ಕಾಂ ಗೆ ತಿಳಿಸಿದ್ದಾರೆ.