
ಬೆಳಗಾವಿ(ಮಾ.25): ಮಹದಾಯಿ ನದಿ ನೀರು ಯೋಜನೆ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಬರುತ್ತಿರುವ ಗೋವಾ, ಕರ್ನಾಟಕಕ್ಕೆ ಒಂದಿಲ್ಲೊಂದು ಅಡೆತಡೆಯನ್ನುಂಟು ಮಾಡುತ್ತಲೇ ಬಂದಿದೆ. ಹೀಗಾಗಿಯೇ ಮಾ.19ರಂದು ಭೇಟಿ ನೀಡಿದ್ದ ಮೂರು ರಾಜ್ಯಗಳ ಜಂಟಿ ಪರಿಶೀಲನಾ ಸಮಿತಿಯು ಮಾ.26ರಂದು ಮತ್ತೊಮ್ಮೆ ಭೇಟಿ ನೀಡುತ್ತಿದೆ.
ಕರ್ನಾಟಕ ಸರ್ಕಾರವು ಮಹದಾಯಿ ನದಿ ನೀರನ್ನು ಅಕ್ರಮವಾಗಿ ತಿರುಗಿಸಿಕೊಂಡು ಬಳಕೆ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ 3 ರಾಜ್ಯಗಳ ನೀರಾವರಿ ಅಧಿಕಾರಿಗಳ ತಂಡದ ಪರಿಶೀಲನಾ ಸಮಿತಿ ಮಾ.19ರಂದು ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿತು.
'ನಮ್ಮ ರಾಜಕಾರಣಿಗಳ ಬೆಂಬಲದಿಂದ ಗೋವಾ ಸಿಎಂ ಮಹದಾಯಿ ಬಗ್ಗೆ ಕ್ಯಾತೆ'
ಈ ವೇಳೆ ಗೋವಾದಿಂದ ಸಮಿತಿ ಸದಸ್ಯರ ಜೊತೆ ಅಲ್ಲಿನ ಪರಿಸರವಾದಿಗಳು, ಮಹದಾಯಿ ಅನುಷ್ಠಾನ ವಿರೋಧಿ ಕಾರ್ಯಕರ್ತರು ಕೂಡ ಆಗಮಿಸಿದ್ದರು. ನಿಯಮದಂತೆ ಕರ್ನಾಟಕ ಪೊಲೀಸರು ಸಮಿತಿ ಸದಸ್ಯರನ್ನು ಬಿಟ್ಟು ಮತ್ಯಾರಿಗೂ ಪ್ರವೇಶಕ್ಕೆ ಅನುವು ಮಾಡಿರಲಿಲ್ಲ. ಇದನ್ನೇ ನೆಪವನ್ನಾಗಿಟ್ಟುಕೊಂಡು ಗೋವಾ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.