ಬೇಡ್ತಿ ವರದಾ ನದಿ ಜೋಡಣೆಯ ಸಾಧಕ ಬಾಧಕ ಸಮಾಲೋಚನಾ ಸಭೆ| ಬಯಲು ಸೀಮೆ ಜನತೆಗೆ ಕುಡಿಯುವ ನೀರು ನೀಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ಆದರೆ, ಬೇಡ್ತಿ ನದಿಯಲ್ಲಿ ಈಗಲೇ ನೀರಿಲ್ಲದ ಸ್ಥಿತಿ ಇದೆ. ನದಿ ನೀರಿನ ಜೋಡಣೆಯ ಕಾರ್ಯ ಸಾಧುವಲ್ಲ: ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ|
ಶಿರಸಿ(ಮಾ.25): ಬೇಡ್ತಿ ನದಿ ನೀರನ್ನು ವರದಾ ನದಿಗೆ ಜೋಡಿಸುವುದು ಅವೈಜ್ಞಾನಿಕ. ಸರ್ಕಾರ ಮತ್ತೊಮ್ಮೆ ಇದನ್ನು ವೈಜ್ಞಾನಿಕವಾಗಿ ಪುನರ್ ವಿಮರ್ಶೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದ ಟಿಆರ್‌ಸಿ ಸಭಾ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಬೇಡ್ತಿ ವರದಾ ನದಿ ಜೋಡಣೆಯ ಸಾಧಕ ಬಾಧಕ ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು. ಬಯಲು ಸೀಮೆ ಜನತೆಗೆ ಕುಡಿಯುವ ನೀರು ನೀಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ಆದರೆ, ಬೇಡ್ತಿ ನದಿಯಲ್ಲಿ ಈಗಲೇ ನೀರಿಲ್ಲದ ಸ್ಥಿತಿ ಇದೆ. ನದಿ ನೀರಿನ ಜೋಡಣೆಯ ಕಾರ್ಯ ಸಾಧುವಲ್ಲ ಎಂದರು.
ಪ್ರಾಚೀನ ಕಾಲದಲ್ಲಿ ಋುಷಿಗಳು ನಿರ್ವಹಿಸುತ್ತಿದ್ದ ಪಾತ್ರವನ್ನು ಇಂದು ವಿಜ್ಞಾನಿಗಳು ನಿರ್ವಹಿಸುತ್ತಿದ್ದಾರೆ. ದೀರ್ಘ ಕಾಲದ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಮನವರಿಕೆ ಮಾಡಿಕೊಡಬೇಕು. ಪರಿಸರ ಹಾನಿಯಿಂದಾಗಿ ಮುಂದೆ ಎಂತಹ ನೈಸರ್ಗಿಕ ವಿಕೋಪ ಆಗುತ್ತದೆ ಎಂಬುದನ್ನು ವಿಜ್ಞಾನಿಗಳಿಗೂ ಹೇಳುವುದು ಕಷ್ಟದ ಸ್ಥಿತಿ ಉಂಟಾಗಿದೆ.
ಬಯಲು ಸೀಮೆಗೆ ನೀರು ಕೊಡಲು ನಮ್ಮ ವಿರೋಧ ಇಲ್ಲ. ಆದರೆ, ಯೋಜನೆ ಅನುಷ್ಠಾನಕ್ಕೆ ವೈಜ್ಞಾನಿಕವಾಗಿ ಚಿಂತಿಸಿ ಮುಂದಡಿ ಇಡಬೇಕು. ಅಲ್ಲಿಯೂ, ಇಲ್ಲಿಯೂ ಸಮೃದ್ಧಿ ಆಗುವ ಯೋಜನೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಹಸಿರೀಕರಣ, ಮಳೆ ಕೊಯ್ಲಿಗೆ ಬಯಲು ಸೀಮೆಯಲ್ಲಿ ಒತ್ತು ನೀಡಿದರೆ ಅಲ್ಲಿಯ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಅಲ್ಲಿ ಹಸಿರೇ ಇಲ್ಲದಿದ್ದರೆ ಇಲ್ಲಿಯ ನೀರನ್ನು ಒಯ್ದರೂ ಅದನ್ನು ಉಳಿಸಿಕೊಳ್ಳಲು ಕಷ್ಟ. ಪರಿಸರವಾದಿಗಳು ಎಂದಿಗೂ ಪ್ರಗತಿ ವಿರೋಧಿಗಳಲ್ಲ. ಪರಿಸರಕ್ಕೆ ಪೂರಕವಾದ ಪ್ರಗತಿ ಅಗತ್ಯ ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ನಮ್ಮ ಅಸ್ತ್ರವಾಗಿ ಬಳಸಿಕೊಂಡರೆ ಈ ಯೋಜನೆ ತಪ್ಪಿಸಲು ಸಾಧ್ಯವಿದೆ. ಗ್ರಾಪಂ ಸಭೆಗಳಲ್ಲಿ ಯೋಜನೆಯ ವಿರೋಧಿ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇಂತಹ ಯೋಜನೆಗಳಿಂದ ಭೂ ಕುಸಿತದ ಪ್ರಮಾಣ ಜಾಸ್ತಿ ಆಗಲಿದೆ. ಕಳೆದ 35 ವರ್ಷಗಳಿಂದ ಪರಿಸರ ಹೋರಾಟ ಅಹಿಂಸಾತ್ಮಕವಾಗಿ ನಡೆದಿದೆ, ಮುಂದೆಯೂ ಅದೇ ದಾರಿಯಲ್ಲಿ ಸಾಗಲಿದೆ ಎಂದರು.
ಶಿರಸಿ: ಬೇಡ್ತಿ-ವರದಾ ಜೋಡಣೆಗೆ ಇನ್ನಷ್ಟು ಚಿಂತನೆ ಅಗತ್ಯ, ಸ್ವರ್ಣವಲ್ಲೀ ಸ್ವಾಮೀಜಿ
ಬೇಡ್ತಿ, ಅಘನಾಶಿನಿಯ ಪರಿಸರ ಸ್ಥಿತಿಯ ಬಗ್ಗೆ ವರದಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಭಾಧ್ಯಕ್ಷರೊಂದಿಗೆ ಮುಖ್ಯಮಂತ್ರಿ ಭೇಟಿ ಅಗಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದರು.
ಪರಿಸರ ಬರಹಗಾರ ನಾಗೇಶ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಬೇಡ್ತಿಗೆ ತೊಂದರೆ ಬಂದಾಗ ಸ್ವರ್ಣವಲ್ಲೀ ಶ್ರೀಗಳು ನಮಗೆ ಶಕ್ತಿಯಗಿ ನಿಂತಿದ್ದಾರೆ. ಈಗ ಮತ್ತೆ ಬೇಡ್ತಿಗೆ ತೊಂದರೆ ಬಂದಿದ್ದು, ಶ್ರೀಗಳ ನೇತೃತ್ವದ ಹೋರಾಟದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ನಮ್ಮ ಪಶ್ಚಿಮ ಘಟ್ಟದ ರಕ್ಷಣೆಗೆ ಹೊರಗಿನವರು ಯಾರೂ ಬರುವುದಿಲ್ಲ. ನದಿಗೆ ಅಣೆಕಟ್ಟು ಹಾಕುವ ನೆಪದಲ್ಲಿ ದಲ್ಲಾಳಿಗಳು, ಲಾಭಕೋರರ ದಾಹಕ್ಕೆ ಆಹಾರವಾಗುತ್ತಿದೆ. ಮಹಾದಾಯಿ ತಿರುಗಿಸಿ ಹುಬ್ಬಳ್ಳಿ- ಧಾರವಾಡಕ್ಕೆ ನೀರು ನೀಡುವ ಯೋಜನೆ ಪ್ರಸ್ತಾಪವಾಗಿದೆ.
ಗೋವಾದವರು ಸಮೀಕ್ಷೆ ಮಾಡಿ 16 ಸಾವಿರ ಕುಟುಂಬಗಳಿಗೆ ಬೇಕಾಗುವಷ್ಟುನೀರನ್ನು ತಂಪು ಪಾನೀಯ ತಯಾರಕರು ಬಳಕೆ ಮಾಡುತ್ತಿದ್ದಾರೆ ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮಲಪ್ರಭಾದ ನೀರನ್ನು ಅಗತ್ಯಕ್ಕಿಂತ ಜಾಸ್ತಿ ಬಳಸಿ ಕಬ್ಬು ಬೆಳೆಯಲಾಗುತ್ತಿದೆ. ಇಂತಹ ಯೋಜನೆಗಳಿಂದ ರೈತರು ಹಾನಿಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರತಿ ನದಿ ಹಕ್ಕಿನ ಬಗ್ಗೆ ಹೋರಾಟ ನಡೆದಾಗ ಜನ ಸಾಮಾನ್ಯರ ಬದಲು ಮಾಫಿಯಾಗಳು ಪ್ರಬಲವಾಗುತ್ತಿದೆ. ನರ್ಮದಾ, ಸಿಂಧು ಮತ್ತು ಕಾವೇರಿ ನದಿ ಇಂದು ಸಮುದ್ರವನ್ನು ಸೇರುತ್ತಿಲ್ಲ. ಅಲ್ಲಿಯ ಜೀವರಾಶಿಗಳು ಬೇಸಿಗೆಯಲ್ಲಿ ಸಾವಿಗೀಡಾಗುತ್ತಿದೆ. ಬೇಡ್ತಿ ನದಿಯನ್ನು ತಿರುಗಿಸುವ ಮೂಲಕ ಇನ್ನೊಂದು ಮಹಾಪಾಪವನ್ನು ನಾವು ಮಾಡಲು ಹೊರಟಿದ್ದೇವೆ. ಅಘನಾಶಿನಿ ಮತ್ತು ಬೇಡ್ತಿ ನದಿಗಳು ಇನ್ನೂ ಪವಿತ್ರ, ಕನ್ಯತ್ವ ಉಳಿಸಿಕೊಂಡಿರುವ ನದಿ. ಈ ನದಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮಾತನಾಡಿದರು. ಮಠದ ಪ್ರಮುಖ ವಿ.ಎನ್. ಹೆಗಡೆ ಬೊಮ್ನಳ್ಳಿ ಇದ್ದರು.
ಬಾರದ ಜನಪ್ರತಿನಿಧಿಗಳು
ಉದ್ಘಾಟನೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬಾರ್, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಸಂಸದ ಅನಂತಕುಮಾರ ಹೆಗಡೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪ್ರಮೋದ ಹೆಗಡೆ ಪಾಲ್ಗೊಳ್ಳಬೇಕಿತ್ತಾದರೂ ಪಾಲ್ಗೊಳ್ಳದೇ ಸಂದೇಶ ಕಳಿಸಿದ್ದರು!.
ಬೇಡ್ತಿ ವರದಾ ನದಿ ಜೋಡಣೆಯ ಯೋಜನೆಯನ್ನು ಸರ್ಕಾರ ವೈಜ್ಞಾನಿಕ ಚಿಂತನೆಯಿಂದ ಪುನರ್ ಪರಿಶೀಲಿಸಬೇಕು. ಈ ಚಿಂತನೆ ಮಾಡದೇ ಅನುಷ್ಠಾನಗೊಳಿಸಲು ಮುಂದಾದರೆ ವಿರೋಧ ವ್ಯಕ್ತಪಡಿಸಲೇಬೇಕಾಗುತ್ತದೆ ಎಂದು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.