ಕೋವಿಡ್‌ ವ್ಯಾಕ್ಸಿನ್‌ ಪಡೆಯಲು ವೃದ್ಧರ ಹಿಂದೇಟು

By Kannadaprabha NewsFirst Published Mar 25, 2021, 10:53 AM IST
Highlights

ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿರುವ ಸುಳ್ಳು ಸಂದೇಶಗಳಿಂದ ಲಸಿಕೆ ಪಡೆಯಲು ಹಿಂದೇಟು| ಲಸಿಕೆ ಕುರಿತು ಜಿಲ್ಲಾಡಳಿತ ಹಲವು ಬಾರಿ ಜಾಗೃತಿ ಮೂಡಿಸಿದರು ಲಸಿಕೆ ಪಡೆಯಲು ಕಾಳಜಿ ತೋರದ ಜನತೆ| ಕೇವಲ ಒಂದೇ ಡೋಸ್‌ ತೆಗೆದುಕೊಂಡರೆ ಪ್ರಯೋಜನವಿಲ್ಲ. 2ನೇ ಡೋಸ್‌ ಕೂಡಾ ತೆಗೆದುಕೊಳ್ಳಬೇಕು| 

ಜಿ.ಡಿ. ಹೆಗಡೆ

ಕಾರವಾರ(ಮಾ.25): ಕೋವಿಡ್‌-19 ಸೋಂಕಿನ ಸಂಬಂಧ 60 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ವ್ಯಾಕ್ಸಿನ್‌ ಪಡೆಯಲು ಜಿಲ್ಲೆಯಲ್ಲಿ ವೃದ್ಧರು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೆ ಶೇ. 28.83 ರಷ್ಟು ಮಾತ್ರ ಸಾಧನೆಯಾಗಿದೆ.

60 ವರ್ಷ ಮೇಲ್ಪಟ್ಟವರು 1,35,017 ಜನರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈವರೆಗೆ 38,921 ಜನರು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಅಂಕೋಲಾ ಶೇ. 14.34, ಭಟ್ಕಳ ಶೇ. 17.86, ಹಳಿಯಾಳ 34.27, ಹೊನ್ನಾವರ 25.22, ಜೊಯಿಡಾ 45.17, ಕಾರವಾರ 34.21, ಕುಮಟಾ 26.74, ಮುಂಡಗೋಡ 37.29, ಸಿದ್ದಾಪುರ 28.76, ಶಿರಸಿ 31.68, ಯಲ್ಲಾಪುರ 37.90 ರಷ್ಟುಜನರು ಲಸಿಕೆ ಪಡೆದುಕೊಂಡಿದ್ದಾರೆ.

45-59 ವರ್ಷದವರಿಗೆ ನೀಡಲಾಗುವ ಲಸಿಕೆಯನ್ನು ಅಂಕೋಲಾದಲ್ಲಿ 273, ಭಟ್ಕಳದಲ್ಲಿ 284, ಹಳಿಯಾಳದಲ್ಲಿ 949, ಹೊನ್ನಾವರದಲ್ಲಿ 660, ಜೊಯಿಡಾ 391, ಕಾರವಾರ 841, ಕುಮಟಾ 573, ಮುಂಡಗೋಡ 1207, ಸಿದ್ದಾಪುರ 288, ಶಿರಸಿ 1013, ಯಲ್ಲಾಪುರ 507 ಜನರು ಮಾತ್ರ ಪಡೆದುಕೊಂಡಿದ್ದಾರೆ. ಈ ಎರಡೂ ವಿಭಾಗ ಸೇರಿದರೆ 45,907 ಜನರು ಲಸಿಕೆ ಇದುವರೆಗೂ ಪಡೆದುಕೊಂಡಂತಾಗಿದೆ.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಲಸಿಕೆಯಿಂದ ಯಾವುದೇ ರೀತಿ ಅಡ್ಡಪರಿಣಾಮವಿಲ್ಲ ಎನ್ನುವುದನ್ನು ಹಲವಾರು ಬಾರಿ ಸ್ಪಷ್ಟಪಡಿಸಿದೆ. ಆದರೂ ಪ್ರಜ್ಞಾವಂತರ ಜಿಲ್ಲೆ ಎನ್ನಿಸಿಕೊಂಡಿರುವ ಉತ್ತರ ಕನ್ನಡದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಆಯ್ದ ಲಸಿಕಾ ಕೇಂದ್ರಗಳಲ್ಲಿ ಬೆರಳೆಣಿಕೆಯಷ್ಟು ಜನರು ಕಾಣಸಿಗುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುತ್ತಿರುವ ಸುಳ್ಳು ಸಂದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸುತ್ತಿಲ್ಲ. ಇದರ ಜತೆಗೆ ಲಸಿಕೆ ಪಡೆದ 45 ದಿನ ಮದ್ಯ ಸೇವಿಸಬಾರದು, ಜ್ವರ ಬರುತ್ತದೆ ಇತ್ಯಾದಿ ಅಸತ್ಯ ಮಾಹಿತಿಗಳು, ಅಪಪ್ರಚಾರ ಕೂಡಾ ಜನರು ಹಿಂಜರಿಯುವಂತೆ ಮಾಡಿದೆ. ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಆದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಲಸಿಕೆ ಇದಾಗಿದ್ದು, ವೃದ್ಧರು, ಅನಾರೋಗ್ಯ ಪೀಡಿತರು ಲಸಿಕೆ ಪಡೆಯಲು ಮುಂದಾಗಬೇಕಿದೆ.

ಕೊರೋನಾ 2ನೇ ಅಲೆ: ಬೆಂಗ್ಳೂರಲ್ಲಿ 11520ಕ್ಕೇರಿದ ಸಕ್ರಿಯ ಕೇಸ್‌

45 ರಿಂದ 59 ಹಾಗೂ 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೇರವಾಗಿ ನಿಗದಿತ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಂಡು ಲಸಿಕೆ ಪಡೆದುಕೊಳ್ಳಬಹುದು. ಭಾವಚಿತ್ರ ಇರುವ ಗುರುತಿನ ಚೀಟಿ (ಫೋಟೊ ಐಡಿ ಕಾರ್ಡ್‌) ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಕೇವಲ ಒಂದೇ ಡೊಸ್‌ ತೆಗೆದುಕೊಂಡರೆ ಪ್ರಯೋಜನವಿಲ್ಲ. 2ನೇ ಡೋಸ್‌ ಕೂಡಾ ತೆಗೆದುಕೊಳ್ಳಬೇಕು.

ಎಲ್ಲಲ್ಲಿ ಲಸಿಕೆ ಹಾಕಲಾಗುತ್ತಿದೆ:

ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಿರಸಿಯ ಟಿಎಸ್‌ಎಸ್‌ ಆಸ್ಪತ್ರೆ, ಹೊನ್ನಾವರದ ಸೆಂಟ್‌ ಇಗ್ನಿಶಿಯಸ್‌, ಕುಮಟಾದ ಕೆನರಾ ಹೆಲ್ತ್‌ ಸೆಂಟರ್‌, ಹೈಟೆಕ್‌ ಲೈಫ್‌ಲೈನ್‌, ಕಾರವಾರದ ಅರ್ಥ ಮೆಡಿಕಲ್‌ ಆಸ್ಪತ್ರೆಯಲ್ಲಿ ಲಸಿಕೆ ಹಾಕಲಾಗುತ್ತದೆ.

ಕೋವಿಡ್‌ ಸೋಂಕಿನ ಸಂಬಂಧ ಲಸಿಕೆ ಪಡೆದು 22 ದಿನ ಕಳೆದಿದೆ. ಇದುವರೆಗೂ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಆರೋಗ್ಯವಾಗಿದ್ದೇನೆ. ಲಸಿಕೆ ಪಡೆಯಲು ಜನರು ಭಯಪಡುವ ಅವಶ್ಯಕತೆಯಿಲ್ಲ ಎಂದು ಲಸಿಕೆ ಪಡೆದ ನಿವೃತ್ತ ಬ್ಯಾಂಕ್‌ ಅಧಿಕಾರಿ ಎಂ.ಪಿ. ಕಾಮತ್‌ ತಿಳಿಸಿದ್ದಾರೆ.

ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಜ. 16 ರಿಂದ ಮಾ. 22ರ ವರೆಗೆ 4,270 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಯಾರಿಗೂ ಅಡ್ಡ ಪರಿಣಾಮವಾಗಿಲ್ಲ. ಲಸಿಕೆ ಕೂಡಾ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಆಗುತ್ತಿದೆ. ಜನರು ಭಯಪಡದೇ ಈ ಲಸಿಕೆ ಪಡೆದುಕೊಳ್ಳಬೇಕು ಎಂದು ಕಾರವಾರ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಗಜಾನನ ನಾಯಕ ಹೇಳಿದ್ದಾರೆ.

ಮಾರ್ಚ್‌ ಮೊದಲ ವಾರದವರೆಗೆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಶೇ. 84.98, ಕಂದಾಯ ಇಲಾಖೆಯ ಶೇ. 85.06, ಪಂಚಾಯತ್‌ ರಾಜ್‌ ಇಲಾಖೆಯ ಶೇ. 72.12 ಜನರು ವಾಕ್ಸಿನ್‌ ಪಡೆದುಕೊಂಡಿದ್ದಾರೆ. ಲಸಿಕೆ ತೆಗೆದುಕೊಂಡ ಅಧಿಕಾರಿಗಳ, ಸಿಬ್ಬಂದಿ ಆರೋಗ್ಯದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಡಿಎಚ್‌ಒ ಡಾ. ಶರದ್‌ ನಾಯಕ ತಿಳಿಸಿದ್ದಾರೆ.

click me!