ಯೋಧರೋರ್ವರು ಸೇನೆಯಿಂದ ನಿವೃತ್ತರಾದ ಕೇವಲ ಎರಡು ದಿನಕ್ಕೆ ಮೃತಪಟ್ಟ ದುರಂತ ಘಟನೆಯೊಂದು ನಡೆದಿದೆ. ಇದರಿಂದ ಕುಟುಂಬಕ್ಕೆ ಬರಸಿಡಿಲು ಎರಗಿದಂತಾಗಿದೆ.
ಬಂಗಾರಪೇಟೆ (ಫೆ.04): ನಿವೃತ್ತಿಯಾದ ಕೇವಲ 2 ದಿನಗಳ ಬಳಿಕ ಹೃದಯಾಘಾತಕ್ಕೀಡಾಗಿ ಸಾವನ್ನಪಿದ್ದ ತಾಲೂಕಿನ ಯೋಧ ಮಂಜುನಾಥ್ ಅವರ ಅಂತ್ಯ ಸಂಸ್ಕಾರ ಬುಧವಾರ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಅಪಾರ ಬಂಧುಗಳ ಸಮ್ಮುಖದಲ್ಲಿ ನಡೆಯಿತು.
17 ವರ್ಷ ಸೇನೆಯಲ್ಲಿ ಉತ್ತಮ ಸೇವೆ ಮಾಡಿ ಅಧಿಕಾರಿಗಳಿಂದ ಬ್ಯಾಡ್ಜ್ ಪಡೆದಿದ್ದ ಯೋಧ ಮಂಜುನಾಥ್ ಜ.31ರಂದು ನಿವೃತ್ತಿ ಪಡೆದಿದ್ದರು. ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಸಹ ಜೀವನ ಮಾಡಲು ನೂರಾರು ಕನಸುಗಳನ್ನ ಹೊತ್ತು ಯೋಧ ಗ್ರಾಮಕ್ಕೆ ಬಂದಿದ್ದರು. ಆದರೆ ವಿಧಿಯಾಟವೆ ಬೇರೆಯಾಗಿತ್ತು. ಮಂಗಳವಾರ ಬೆಳಗ್ಗೆ ವಾಯುವಿಹಾರ ಮುಗಿಸಿ ಮನೆಗೆ ಬಂದ ಅವರಿಗೆ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ. ಯೋಧನ ಸಾವಿಗೆ ಬೂದಿಕೋಟೆ ಇಡೀ ಗ್ರಾಮ ಕಂಬನಿ ಮಿಡಿದಿದೆ.
ಚುನಾವಣೆಯಲ್ಲಿ ಗೆಲ್ಲಲು 40 ಯೋಧರ ಬಲಿ: ಬಿಜೆಪಿ ವಿರುದ್ಧ ಶಿವಸೇನೆಯ ಗಂಭೀರ ಆರೋಪ! .
ಪತ್ನಿ ಅಶ್ವಿನಿ, ಮಕ್ಕಳು ಮಂಜುನಾಥ್ 6 ತಿಂಗಳಿಂದ ಕಾದಿದ್ದರು. ನಿವೃತ್ತಿ ಪಡೆದ ಬಳಿಕ ತನ್ನ ಪತ್ನಿಯ ಇಚ್ಛೆಯಂತೆ ಗ್ರಾಮದಲ್ಲಿ ಸ್ವಂತ ದೊಡ್ಡ ಮನೆ ಕಟ್ಟುವ ಆಲೋಚನೆ ಇತ್ತು. ಆದರೆ, ಪತಿ ನನ್ನ ಮಡಿಲಲ್ಲೆ ಬಂದು ಪ್ರಾಣ ಬಿಟ್ಟಿದ್ದು ನೋವಾಗುತ್ತಿದೆ. ಯಾವಾಗಲೂ ಕರೆ ಮಾಡಿದ್ರೂ ಕೆಲಸ ಕೆಲಸ ಎಂದು ದೇಶ ಸೇವೆ ಮಾಡಿ ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎಂದು ಪತ್ನಿ ಅಶ್ವಿನಿ ಕಣ್ಣೀರಾಕಿದರು.
ಸ್ವಗ್ರಾಮವಾದ ಕೋಡಗುರ್ಕಿ ಕಾಲೋನಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಜಿಲ್ಲಾ ಮಾಜಿ ಯೋಧರ ಟ್ರಸ್ಟ್‌ನ ಹತ್ತಾರು ಸದಸ್ಯರು ಮೃತ ಯೋಧನ ಅಂತಿಮ ದರ್ಶನ ಪಡೆದು ರೇತ್ ಪರೇಡ್ ಮೂಲಕ ಗೌರವ ಸಲ್ಲಿಸಿದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಸೀಲ್ದಾರ್ ದಯಾನಂದ, ಜಿಪಂ ಸದಸ್ಯ ಬಿ.ವಿ.ಮಹೇಶ್ ಸೇರಿ ನೂರಾರು ಮಂದಿ ಯೋಧನ ಅಂತಿಮ ದರ್ಶನ ಪಡೆದರು. ತೆರೆದ ವಾಹನದಲ್ಲಿ ಬೂದಿಕೋಟೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಲಾ ಕಾಲೇಜಿನ ಮಕ್ಕಳು ಹಾಗೂ ಸಾರ್ವಜನಿಕರು ಭಾರತ ಮಾತಾಕಿ ಜೈ ಎಂಬ ಘೋಷನೆಗಳನ್ನು ಕೂಗುತ್ತಾ ಹೂ ಚೆಲ್ಲಿ ಅಂತಿಮ ನಮನ ಸಲ್ಲಿಸಿದರು. ನಂತರ ಬೂದಿಕೋಟೆ ಬಳಿ ಇರುವ ಅವರ ಜಮೀನಿನಲ್ಲಿ ಯೋಧನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.