ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರರಣಕ್ಕೆ ಟ್ವಿಸ್ಟ್, ನನಗೆ ಭಾರತದ ಕಾನೂನು ಅನ್ವಯವಾಗಲ್ಲ ಆಪ್ತ ಗೆಳೆಯನ ವಾದ!

Published : Aug 13, 2026, 03:20 PM IST
Ranya Rao

ಸಾರಾಂಶ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರಿಗೆ ಆಪ್ತ ಗೆಳೆಯನೇ ಸಂಕಷ್ಟ ತಂದೊಡ್ಡಿದ್ದಾನೆ. ತಾನೇ ಚಿನ್ನ ನೀಡಿದ್ದಾಗಿ ಒಪ್ಪಿಕೊಂಡಿರುವ ಆತ, ಅದನ್ನು ದುಬೈನಲ್ಲಿ ನೀಡಿರುವುದರಿಂದ ಭಾರತದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂದು ವಾದಿಸಿ, ಪ್ರಕರಣದ ಸಂಪೂರ್ಣ ಹೊಣೆಯನ್ನು ನಟಿಯ ಮೇಲೆ ಹಾಕಲು ಯತ್ನಿಸಿದ್ದಾನೆ.

ಬೆಂಗಳೂರು: ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿ ಪ್ರಸ್ತುತ ವಿಚಾರಣೆಯಲ್ಲಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ಮತ್ತೊಂದು ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನೀಡಿದ ಶೋಕಾಸ್ ನೋಟಿಸ್‌ಗೆ ಬೆದರಿರುವ ಸ್ಮಗ್ಲರ್‌ಗಳು, ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ನೀಡುವ ನೆಪದಲ್ಲಿ ಹೊಸ ಅವಾಂತರ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ, ನಟಿ ರನ್ಯಾ ರಾವ್ ಅವರ ಆಪ್ತ ಗೆಳೆಯನೇ ಆಕೆಗೆ ಕೊಳ್ಳಿ ಇಡುವ ಕೆಲಸಕ್ಕೆ ಮುಂದಾಗಿದ್ದು ಬಿಗ್ ಶಾಕ್ ನೀಡಿದ್ದಾನೆ.

ಕೋರ್ಟ್ ಮೆಟ್ಟಿಲೇರಿದ ಗೆಳೆಯನ ವಿಚಿತ್ರ ವಾದ!

ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಅವರ ಆಪ್ತ ಗೆಳೆಯ ನ್ಯಾಯಾಲಯಕ್ಕೆ ಸುದೀರ್ಘ ಮನವಿಯೊಂದನ್ನು ಸಲ್ಲಿಸಿದ್ದು, ನಟಿಗೆ ಚಿನ್ನದ ಬಿಸ್ಕತ್ತುಗಳನ್ನು ತಾನೇ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಭಾರತದ ಕಾನೂನಿನಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಹೆಣೆದಿರುವ ಆತ, ಕೋರ್ಟ್ ಮುಂದೆ ವಿಚಿತ್ರ ವಾದ ಮಂಡಿಸಿದ್ದಾನೆ. ನಾನು ರನ್ಯಾ ರಾವ್ ಅವರಿಗೆ ಚಿನ್ನದ ಬಿಸ್ಕತ್ತುಗಳನ್ನು ನೀಡಿದ್ದು ನಿಜ. ಆದರೆ, ನಾನು ಆ ಚಿನ್ನವನ್ನು ನೀಡಿದ್ದು ದುಬೈನಲ್ಲಿ, ಭಾರತದಲ್ಲಲ್ಲ. ನಾನು ದುಬೈನಲ್ಲಿ ಚಿನ್ನ ನೀಡಿರುವುದರಿಂದ ನನಗೆ ಅಲ್ಲಿನ ಕಾನೂನು ಮಾತ್ರ ಅನ್ವಯವಾಗಬೇಕೇ ಹೊರತು, ಭಾರತದ ಕಾನೂನಲ್ಲ. ನಾನು ಭಾರತದ ಗಡಿಯೊಳಗೆ ಯಾವುದೇ ರೀತಿಯ ಅಕ್ರಮ ಅಥವಾ ಹಣಕಾಸಿನ ಅವ್ಯವಹಾರಗಳನ್ನು ಮಾಡಿಲ್ಲ, ಹಾಗೂ ಚಿನ್ನವನ್ನು ಮಾರಾಟ ಮಾಡುವ ಯತ್ನವನ್ನೂ ನಡೆಸಿಲ್ಲ. ನಾನು ದುಬೈನಲ್ಲಿ ಕೊಟ್ಟ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ (Smuggle) ಮಾಡಿದ್ದು ಸ್ವತಃ ರನ್ಯಾ ರಾವ್. ಹೀಗಾಗಿ ಈ ಅಪರಾಧಕ್ಕೆ ಭಾರತದ ಕಾನೂನಿನಡಿ ಆಕೆ ಮಾತ್ರ ಹೊಣೆಯಾಗಬೇಕೇ ಹೊರತು ನಾನು ಅಲ್ಲ ಎಂದಿದ್ದಾನೆ.

ಪ್ರಕರಣದಿಂದ ಮುಕ್ತಿ ಕೋರಿದ ಆಪ್ತ

ತಾನು ಕೇವಲ ದುಬೈನಲ್ಲಿ ಚಿನ್ನ ಹಸ್ತಾಂತರಿಸಿದ್ದೇನೆ ಮತ್ತು ಕಳ್ಳಸಾಗಾಣಿಕೆಯಲ್ಲಿ ನೇರ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿರುವ ಈತ, ತನ್ನನ್ನು ಈ ಪ್ರಕರಣದಿಂದ ತಕ್ಷಣವೇ ಮುಕ್ತಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಈ ಮೂಲಕ ತನಿಖೆಯಿಂದ ತಾನು ಪಾರಾಗಲು ಯತ್ನಿಸುತ್ತಲೇ, ತನ್ನ ಆಪ್ತ ಗೆಳತಿ ರನ್ಯಾ ರಾವ್ ಳನ್ನು ಸಂಪೂರ್ಣವಾಗಿ ಸಿಲುಕಿಸುವ ಕೆಲಸ ಮಾಡಿದ್ದಾನೆ.

ವಿದೇಶದಿಂದ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ತಂದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಸ್ತುತ ಜೈಲಿನಲ್ಲಿದ್ದಾಳೆ. ಈಗ ಆಕೆಯ ಸ್ವಂತ ಗೆಳೆಯನೇ ನೀಡಿರುವ ಈ ಸಾಕ್ಷ್ಯಾಧಾರಗಳು ಮತ್ತು ಹೇಳಿಕೆಗಳು ನಟಿಗೆ ತೀವ್ರ ಮುಜುಗರ ಹಾಗೂ ಕಾನೂನು ಸಂಕಷ್ಟವನ್ನು ತಂದೊಡ್ಡಿದ್ದು, ಪ್ರಕರಣ ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಕರಣದ ಹಿನ್ನೆಲೆ:

2025ರ ಮಾ.3ರಂದು ವಿದೇಶದಿಂದ ₹12.56 ಕೋಟಿ ಮೌಲ್ಯದ 14 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡುವಾಗ ನಟಿ ರನ್ಯಾ ರಾವ್‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದಾಗ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹2.67 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿತ್ತು. ಬಳಿಕ, ಈಕೆಯ ಸಹಚರರಾದ ಸಾಹಿಲ್‌ ಸಕಾರಿಯಾ ಜೈನ್‌, ಭರತ್‌ ಕುಮಾರ್‌ ಜೈನ್‌ ಮತ್ತು ತರುಣ್‌ ಕೊಂಡರಾಜು ಅವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಡಿಆರ್‌ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ.(ಜಾರಿ ನಿರ್ದೇಶನಾಲಯ) ಪ್ರಕರಣದ ತನಿಖೆ ಆರಂಭಿಸಿತ್ತು.

ಆರೋಪಿಗಳು ಒಂದು ವರ್ಷದ ಅವಧಿಯಲ್ಲಿ ಸುಮಾರು ₹102.55 ಕೋಟಿ ಮೌಲ್ಯದ ಬರೋಬ್ಬರಿ 127 ಕೆ.ಜಿ. ಕಳ್ಳಸಾಗಣೆ ಮಾಡಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯವು ವಿಚಾರಣೆ ಆರಂಭಿಸಿದೆ.

PREV
Read more Articles on
click me!

Recommended Stories

ಸೈಕಲ್‌ನಿಂದ ಶುರುವಾದ ಪಯಣ, ಈಗ ಸ್ವಂತ ಮನೆಯತ್ತ: ಕಠಿಣ ಪರಿಶ್ರಮದಿಂದಲೇ ಗೆದ್ದ ಬೆಂಗಳೂರಿನ ಡೆಲಿವರಿ ಪಾರ್ಟ್‌ನರ್‌ ಯಶೋಗಾಥೆ
ತಮಿಳುನಾಡಿಗೆ ನಮ್ಮ ಮೆಟ್ರೋ ವಿಸ್ತರಣೆ ಇಲ್ಲ, ಹೊಸ 9 ನಿಲ್ದಾಣದೊಂದಿದೆ ಹಳದಿ ಮಾರ್ಗ ಅತ್ತಿಬೆಲೆವರೆಗೆ ವಿಸ್ತರಣೆ