
ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಕನಸುಗಳ ನಗರ. ಇಲ್ಲಿ ಕಷ್ಟಪಟ್ಟು ದುಡಿದವರು ಖಂಡಿತಾ ಮೇಲೆ ಬಂದೇ ಬರುತ್ತಾರೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದ ಸಂಜಯ್ ಮಂಡಲ್ ಅವರೇ ಜೀವಂತ ಸಾಕ್ಷಿ. ಬರಿಗೈಯಲ್ಲಿ ಬಂದು ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ, ಇಂದು ತನ್ನ ಕಠಿಣ ಪರಿಶ್ರಮದಿಂದಲೇ ಸ್ವಂತ ಕಾಲ ಮೇಲೆ ನಿಂತಿರುವ ಯಶೋಗಾಥೆ ಇದು.
ತನ್ನ ಕುಟುಂಬಕ್ಕೊಂದು ಭದ್ರವಾದ ಭವಿಷ್ಯ ಕಟ್ಟಿಕೊಡುವ ಕನಸು ಹೊತ್ತು ಸಂಜಯ್ ಮಂಡಲ್ 2014ರಲ್ಲಿ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಆರಂಭದಲ್ಲಿ ರೆಸ್ಟೋರೆಂಟ್‌ವೊಂದರಲ್ಲಿ ಅವರು ಕ್ಯಾಪ್ಟನ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ, ಅಲ್ಲಿ ಅವರಿಗೆ ಸಿಗುತ್ತಿದ್ದದ್ದು ತಿಂಗಳಿಗೆ ಕೇವಲ 10,000 ರೂ. ಸಂಬಳ. ದಿನೇ ದಿನೇ ಬೆಳೆಯುತ್ತಿರುವ ಮಹಾನಗರದಲ್ಲಿ ಆ ಸಣ್ಣ ಮೊತ್ತ ಅವರ ಭವಿಷ್ಯದ ಕನಸುಗಳನ್ನು ಈಡೇರಿಸಲು, ಕುಟುಂಬ ನಿರ್ವಹಣೆಗೆ ಏನೇನೂ ಸಾಲುತ್ತಿರಲಿಲ್ಲ.
ಹೀಗಾಗಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಜಯ್ ಹೊಸ ದಾರಿ ಹುಡುಕುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಒಂದು ಸ್ವಿಗ್ಗಿ ಜಾಹೀರಾತು. "ʼಸ್ವಿಗ್ಗಿಯಲ್ಲಿ ಡೆಲಿವರಿ ಪಾರ್ಟ್‌ನರ್ ಆಗಿ ಸೇರಿಕೊಳ್ಳಿʼ ಎಂಬ ಜಾಹೀರಾತು ನನ್ನ ಗಮನ ಸೆಳೆಯಿತು. ನನ್ನ ಬದುಕು ಬದಲಾಯಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ ಎಂದು ನನಗೆ ಅನಿಸಿತು,” ಅಂತ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸಂಜಯ್.
ಹೀಗೆ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದರು. ಆದರೆ, ಇದಕ್ಕೆ ಅಗತ್ಯವಾಗಿದ್ದ ಬೈಕೇ ಅವರ ಬಳಿ ಇರಲಿಲ್ಲ. ಅದಕ್ಕೂ ಎದೆಗುಂದದ ಸಂಜಯ್, ಸೈಕಲ್ ಮೂಲಕವೇ ಗ್ರಾಹಕರಿಗೆ ಆಹಾರ ತಲುಪಿಸಲು ಶುರು ಮಾಡಿದರು.
ಬೆಳಗಿನ ಜಾವದಿಂದ ತಡರಾತ್ರಿಯವರೆಗೂ ಸೈಕಲ್ ತುಳಿದು ಆರ್ಡರ್ ತಲುಪಿಸುತ್ತಿದ್ದರು. ಈ ರೀತಿಯೇ ಒಂದಿಷ್ಟು ಹಣ ಉಳಿತಾಯ ಮಾಡಿದರು. ಆ ಹಣದಿಂದ ಬರೀ ಎರಡೇ ತಿಂಗಳಿನಲ್ಲಿ ತಮ್ಮ ಮೊದಲ ಬೈಕ್ ಖರೀದಿಸಿದರು. "ನನ್ನ ಕಷ್ಟದ ದುಡಿಮೆಯಲ್ಲಿ ಮೊದಲ ಬೈಕ್ ಕೊಂಡುಕೊಂಡ ಆ ಕ್ಷಣ, ನನ್ನ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು,” ಎನ್ನುತ್ತಾರೆ ಸಂಜಯ್.
ಕಳೆದ ಹತ್ತು ವರ್ಷಗಳಿಂದ ಬಿಸಿಲು, ಮಳೆ ಎನ್ನದೆ ಫುಡ್ ಡೆಲಿವರಿ ಮಾಡುತ್ತಿರುವ ಸಂಜಯ್ ಅವರ ಶ್ರಮಕ್ಕೆ ಫಲ ಸಿಕ್ಕಿದೆ ಈ ನಿರಂತರ ದುಡಿಮೆ ಅವರ ಕುಟುಂಬದ ಜೀವನಮಟ್ಟವನ್ನು ಸುಧಾರಿಸಿದೆ. "ನನ್ನ ಮಗನಿಗೊಂದು ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬುದು ಅಪ್ಪನಾಗಿ ನನ್ನ ಅತಿದೊಡ್ಡ ಕನಸಾಗಿತ್ತು. ಈಗ ನನ್ನ ಶ್ರಮದಿಂದ ಆತನನ್ನು ಒಂದು ಒಳ್ಳೆಯ ಖಾಸಗಿ ಶಾಲೆಗೆ ಸೇರಿಸಿದ್ದೇನೆ,” ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮಗನಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರುವ ಸಂಜಯ್ ಈಗ ಮತ್ತೊಂದು ದೊಡ್ಡ ಕನಸಿನತ್ತ ಹೆಜ್ಜೆ ಹಾಕಿದ್ದಾರೆ. "ಕುಟುಂಬಕ್ಕಾಗಿ ಒಂದು ಸ್ವಂತ ಮನೆ ಮಾಡಬೇಕು ಎಂಬುದು ನನ್ನ ಮುಂದಿನ ಗುರಿ. ನಿರಂತರ ಶ್ರಮವೇ ನನ್ನನ್ನು ಆ ಗುರಿಗೂ ತಲುಪಿಸುತ್ತದೆ ಎಂಬ ನಂಬಿಕೆ ನನಗಿದೆ,” ಎಂದು ವಿಶ್ವಾಸದಿಂದ ನುಡಿಯುತ್ತಾರೆ ಸಂಜಯ್.
ಛಲ, ನಿರಂತರ ಪ್ರಯತ್ನವಿದ್ದರೆ ಯಾವುದೇ ಕನಸನ್ನಾದರೂ ನನಸು ಮಾಡಬಹುದು ಎಂಬ ಸಂಜಯ್ ಅವರ ಅನುಭವದ ಮಾತು, ಬದುಕು ಕಟ್ಟಿಕೊಳ್ಳಲು ದಿನನಿತ್ಯ ಹೋರಾಡುತ್ತಿರುವ ಪ್ರತಿಯೊಬ್ಬ ಶ್ರಮಿಕನಿಗೂ ದೊಡ್ಡ ಸ್ಫೂರ್ತಿಯಾಗಿದೆ.