ಶಾಂತಕುಮಾರ್‌ ಜೆಡಿಎಸ್‌ಗೆ ಬರುವಂತೆ ಕಾರ‍್ಯಕರ್ತರ ಒತ್ತಾಯ

By Kannadaprabha News  |  First Published Jan 23, 2023, 6:15 AM IST

ಕಳೆದ ಏಳೆಂಟು ವರ್ಷಗಳಿಂದ ನಾನು ಜನಸೇವೆಗೆಂದು ರಾಜಕೀಯಕ್ಕೆ ಬಂದಿದ್ದು ಹಾಲಿ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಜನರ ಸೇವೆ ಮಾಡುತ್ತಿರುವ ನನಗೆ ಟಿಕೆಟ್‌ ನಿರಾಕರಿಸುತ್ತಿರುವ ಮಾಹಿತಿಗಳು ಬಂದಿರುವುದರಿಂದ, ಇಲ್ಲಿನ ಜೆಡಿಎಸ್‌ ಘಟಕದವರು ನಮ್ಮ ಪಕ್ಷಕ್ಕೆ ಸೇರಿ ನಮ್ಮ ಪಕ್ಷದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.


 ತಿಪಟೂರು :  ಕಳೆದ ಏಳೆಂಟು ವರ್ಷಗಳಿಂದ ನಾನು ಜನಸೇವೆಗೆಂದು ರಾಜಕೀಯಕ್ಕೆ ಬಂದಿದ್ದು ಹಾಲಿ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಜನರ ಸೇವೆ ಮಾಡುತ್ತಿರುವ ನನಗೆ ಟಿಕೆಟ್‌ ನಿರಾಕರಿಸುತ್ತಿರುವ ಮಾಹಿತಿಗಳು ಬಂದಿರುವುದರಿಂದ, ಇಲ್ಲಿನ ಜೆಡಿಎಸ್‌ ಘಟಕದವರು ನಮ್ಮ ಪಕ್ಷಕ್ಕೆ ಸೇರಿ ನಮ್ಮ ಪಕ್ಷದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆ ಪಕ್ಷಕ್ಕೆ ಹೋಗಬೇಕೆ ಬೇಡವೇ ಎಂದು ನನ್ನ ಅಭಿಮಾನಿ ಸಲಹೆ ಕೇಳಲು ಈ ಸಭೆ ಕರೆದಿರುವುದಾಗಿ ಸಮಾಜ ಸೇವಕ ಹಾಗೂ ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ಮನವಿ ಮಾಡಿದರು.

ನಗರದ ಒಕ್ಕಲಿಗರ ಭವನದಲ್ಲಿ ವಿಧಾನಸಭೆ ಸಂಬಂಧ ಕಾಂಗ್ರೆಸ್‌ನಿಂದ ಟಿಕೆಟ್‌ ಕೈತಪ್ಪುತ್ತಿರುವ ಹಾಗೂ ಜೆಡಿಎಸ್‌ ಸೇರಬೇಕೆ ಎಂಬ ಬಗ್ಗೆ ತಮ್ಮ ಕಾರ್ಯಕರ್ತರ, ಅಭಿಮಾನಿಗಳ ಅಭಿಪ್ರಾಯ ಪಡೆದುಕೊಳ್ಳಲು ಶನಿವಾರ ಶಾಂತಕುಮಾರ್‌ ನೇತೃತ್ವದಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Tap to resize

Latest Videos

ಮಹಿಳೆಯರು, ಮಕ್ಕಳು, ವಿಶೇಷಚೇತನರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಆದ್ದರಿಂದಲೇ ತಾಲೂಕಿನಲ್ಲಿ ಯಾವುದೇ ಹಳ್ಳಿಗಳಿಗೆ ಹೋದರೂ ನನ್ನನ್ನು ಪ್ರೀತಿಯಿಂದ ಮನೆ ಮಗನಂತೆ ನೋಡಿಕೊಳ್ಳುತ್ತಾರೆ. ಆದರೆ ಮತ್ತಷ್ಟುಸೇವೆ ಮಾಡಬೇಕೆಂದರೆ ರಾಜಕಾರಣದ ಅವಶ್ಯಕತೆ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ 15ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದೆ. ಕಾಂಗ್ರೆಸ್‌ನಿಂದ ಗುರ್ತಿಸಿಕೊಂಡಿದ್ದ ನಾನು ಪಕ್ಷದ ಹೈಕಮಾಂಡ್‌ ನನಗೆ ಟಿಕೆಟ್‌ ಕೊಡುತ್ತದೆ ಎಂದು ನಂಬಿದ್ದೆ. ಆದರೆ ಚುನಾವಣೆ ಸಮೀಸುತ್ತಿದ್ದ ಹಾಗೆ ಪಕ್ಷದ ವರಿಷ್ಠರು ನನಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಬಗ್ಗೆ ಹೇಳುತ್ತಿದ್ದಾರೆ. ಪಕ್ಷಕ್ಕಾಗಿ ನನ್ನನ್ನು ದುಡಿಸಿಕೊಂಡು ಈಗ ಕೈಬಿಡುತ್ತಿರುವುದು ತೀವ್ರ ನೋವುಂಟು ತಂದಿದೆ. ಆದ್ದರಿಂದ ಈ ಬಾರಿ ಜೆಡಿಎಸ್‌ ವರಿಷ್ಠರ ಆದೇಶದಂತೆ ತಾಲೂಕಿನ ಜೆಡಿಎಸ್‌ ಮುಖಂಡರು ನನ್ನನ್ನು ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಆಹ್ವಾನ ನೀಡುತ್ತಿದ್ದಾರೆ. ನಾನು ಜೆಡಿಎಸ್‌ಗೆ ಬರಲು ಎಲ್ಲರ ಒಮ್ಮತವಿದ್ದು ಅದನ್ನು ಸ್ವಾಗತಿಸುತ್ತೇನೆ. ಶೀಘ್ರದಲ್ಲೇ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಕೆಲವೇ ದಿನಗಳಲ್ಲಿ ನನ್ನ ಅಭಿಪ್ರಾಯವನ್ನೂ ತಿಳಿಸುತ್ತೇನೆಂದರು.

ಯೋಚಿಸಿ ನಿರ್ಧಾರ ಕೈಗೊಳ್ಳಿ: ಕಾರ‍್ಯಕರ್ತರು

ಕಾರ್ಯಕರ್ತರಾದ ದಸರೀಘಟ್ಟಕುಮಾರಸ್ವಾಮಿ, ಬಜಗೂರು ಶಿವಕುಮಾರ್‌, ಪರುವಗೊಂಡನಹಳ್ಳಿ ಮಂಜುನಾಥ್‌, ಮಲ್ಲಿಕಾರ್ಜುನ್‌ ಕಸವನಹಳ್ಳಿ, ರಾಮು ಬಜಗೂರು, ಹೊಗವನಘಟ್ಟಸಂತೋಷ್‌, ಇಂದ್ರೇಶ್‌ ದಸರೀಗಟ್ಟ, ಬಿಳಿಗೆರೆ ಕುಮಾರ್‌, ಮಾರುಗೊಂಡನಹಳ್ಳಿ ಮಂಜು, ಬಜಗೂರು ಮಂಜುನಾಥ್‌ ಸೇರಿದಂತೆ ನೂರಾರು ಕಾರ್ಯಕರ್ತರು ಒಮ್ಮತದಿಂದ ನೀವು ಜೆಡಿಎಸ್‌ಗೆ ಬರಬೇಕು. ಸ್ವತಂತ್ರ್ಯ ಅಭ್ಯರ್ಥಿಯಾದರೆ ಗೆಲುವು ಕಷ್ಟಕರವಾಗಿದೆ. ನಿಮ್ಮನ್ನು ಶಾಸಕನನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮದು. ಯೋಚಿಸಿ ನಿರ್ಧಾರ ಕೈಗೊಳ್ಳಬೇಕೆಂದು ನೂರಾರು ಕಾರ್ಯಕರ್ತರು ಶಾಂತಕುಮಾರ್‌ರನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.

ಕಾಂಗ್ರೆಸ್‌ನತ್ತ ಚಿತ್ತ

ಹುಬ್ಬಳ್ಳಿ :  ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಟಿಕೆಟ್‌ ಘೋಷಣೆಗೂ ಮುನ್ನವೇ ಪಕ್ಷಾಂತರ ಪರ್ವವೂ ಜೋರಾಗುವ ಲಕ್ಷಣ ದಟ್ಟವಾಗುತ್ತಿವೆ. ಬಿಜೆಪಿಯ ಮಾಜಿ ಶಾಸಕ ಸೇರಿದಂತೆ ಕಾಂಗ್ರೆಸ್‌ನ ಇಬ್ಬರು ಪ್ರಮುಖ ಮುಖಂಡರು ಜೆಡಿಎಸ್‌ನತ್ತ ಚಿತ್ತ ಹರಿಸಿದ್ದಾರೆ ಎಂಬ ಗುಲ್ಲು ಜಿಲ್ಲೆಯಲ್ಲಿ ಹಬ್ಬಿದೆ. ಇದು ಜಿಲ್ಲಾ ರಾಜಕೀಯದಲ್ಲಿ ಭಾರೀ ಸಂಚಲನ ಉಂಟುಮಾಡಿದೆ.

ಬಿಜೆಪಿ ನಾಯಕ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಕಾಂಗ್ರೆಸ್‌ನ ಇಸ್ಮಾಯಿಲ್‌ ತಮಟಗಾರ ಹಾಗೂ ದೀಪಕ ಚಿಂಚೋರೆ ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಎರಡ್ಮೂರು ದಶಕದಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಹಾಲಹರವಿ 2008ರಲ್ಲಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಕಂಡವರು. 2013ರಲ್ಲೂ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ ಆಗ ಬಿಜೆಪಿ-ಕೆಜೆಪಿ ಜಗಳದಲ್ಲಿ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಆರಿಸಿ ಬಂದರು. ಬಳಿಕ 2018ರಲ್ಲಿ ಬಿಜೆಪಿ ಇವರಿಗೆ ಟಿಕೆಟ್‌ ನೀಡಿರಲಿಲ್ಲ. ಇದು ಹಾಲಹರವಿಗೆ ಅಸಮಾಧಾನವನ್ನುಂಟು ಮಾಡಿತ್ತು. ಇದೀಗ 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ನನಗೆ ಮೋದಿ ಕಂಡರೆ ಭಯವಿಲ್ಲ, ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ: ಸಿದ್ದರಾಮಯ್ಯ

ಆದರೆ ಇಷ್ಟರ ನಡುವೆಯೇ ಎರಡು ದಿನದ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂಬುದು ಹಾಲಹರವಿ ಅವರಿಗೆ ಖಚಿತವಾಗಿದೆಯೇ? ಅದಕ್ಕಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರಾ? ಎಂಬಂತಹ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ. ಈ ಬಗ್ಗೆ ಪ್ರಶ್ನಿಸಿದರೆ, ‘ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಭೇಟಿಯಾಗಿದ್ದೇನೋ ಇಲ್ಲವೋ ಎಂಬುದನ್ನು ತಿಳಿಸುವುದಿಲ್ಲ’ ಎಂದಿರುವುದು ಇನ್ನಷ್ಟುಅನುಮಾನಕ್ಕೆ ಕಾರಣವಾಗಿದೆ.

click me!