ಹೊಂದಾಣಿಕೆ ರಾಜಕೀಯ ಇಲ್ಲ- ಡಿಕೆಶಿ ನನ್ನದು ರಕ್ತ ಸಂಬಂಧ : LRS

By Kannadaprabha NewsFirst Published Jan 23, 2023, 6:09 AM IST
Highlights

ನಾಗಮಂಗಲ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ. ಹೊಂದಾಣಿಕೆ ರಾಜಕೀಯ ಇಲ್ಲ. ಕಾಂಗ್ರೆಸ್‌ನವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಸ್ಪಷ್ಟಪಡಿಸಿದರು.

  ಮದ್ದೂರು :  ನಾಗಮಂಗಲ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ. ಹೊಂದಾಣಿಕೆ ರಾಜಕೀಯ ಇಲ್ಲ. ಕಾಂಗ್ರೆಸ್‌ನವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಸ್ಪಷ್ಟಪಡಿಸಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ತಾಲೂಕಿನ ಕೊಪ್ಪದಲ್ಲಿ ಬೃಹತ್‌ ಎಲ್‌ಆರ್‌ಎಸ್‌ ಸ್ವಾಭಿಮಾನಿ ಪರ್ವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾಗಮಂಗಲದಲ್ಲಿ ಕಾಂಗ್ರೆಸ್‌ ಪಕ್ಷ ಕಟ್ಟಿದ್ದು ನಾನು. ನಾನು ಮಾಡಿದ ಅಡುಗೆ ಉಂಡಿದ್ದು ಸುರೇಶ್‌ಗೌಡ. ಆಗ ನನ್ನ ಬಿಟ್ಟು ಸುರೇಶ್‌ಗೌಡರಿಗೆ ಟಿಕೆಟ್‌ ಕೊಟ್ಟರು. ಆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಬಂತು. ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಸೇರಿದಂತೆ ಹಿರಿಯರ ಸಲಹೆಯಂತೆ ತಟಸ್ಥನಾದೆ ಎಂದರು.

2008ರಿಂದ ಚುನಾವಣೆಗೆ ಬರಲಿಲ್ಲ. 2008ರಲ್ಲಿ ಕಾಂಗ್ರೆಸ್‌ನಿಂದ ನಿಲ್ಲಲು ಪ್ರಯತ್ನ ಮಾಡಿದ್ದೆ. ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದರೆ ಈ ಡೋಂಗಿ ಶಾಸಕ ಗೆಲ್ಲುತ್ತಿರಲಿಲ್ಲ ಎಂದು ಶಾಸಕ ಸುರೇಶ್‌ಗೌಡ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಂತರ ನಡೆದ ಬೆಳವಣಿಗೆಗಳಲ್ಲಿ ಜೆಡಿಎಸ್‌ ಬಿಟ್ಟು ಎನ್‌.ಚಲುವರಾಯಸ್ವಾಮಿ ಕಾಂಗ್ರೆಸ್‌ ಸೇರಿದರು. ಆಗ ದೇವೇಗೌಡರು ನನ್ನ ಪಕ್ಷಕ್ಕೆ ಕರೆದು ಸುರೇಶ್‌ಗೌಡರಿಗೆ ಅವಕಾಶ ಕೊಟ್ಟರು. ಎಂಎಲ್‌ಸಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದರಿಂದ 2018ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ ಎಂದರು.

ಲೋಕಸಭೆ ಉಪ ಚುನಾವಣೆಯಲ್ಲಿ ನಿಂತು ಗೆದ್ದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನನಗೆ ಟಿಕೆಟ್‌ ಕೊಡಲಿಲ್ಲ. ಆ ಬಳಿಕ ನನ್ನನ್ನ ಜೆಡಿಎಸ್‌ ಪಕ್ಷದಿಂದ ಹೊರ ಹಾಕಿದರು. ನನಗೆ ನಿರಂತರ ಮೋಸ ಮಾಡಿದ್ರು ನಾನು ಸುಮ್ಮನೇ ಕೂರಲಿಲ್ಲ. ಹೀಗಾಗಿ ಕಳೆದ 6 ತಿಂಗಳಿಂದ ಕ್ಷೇತ್ರದ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದೇನೆ ಎಂದರು.

25 ವರ್ಷದಿಂದ ಚುನಾವಣೆಯಿಂದ ಹೊರಗಿದ್ದೆ. ಕೊಪ್ಪ ಹೋಬಳಿ ಮತದಾರರು ಅತಂತ್ರರಾಗಿದ್ದಾರೆ. ನಾಗಮಂಗಲ ಶಾಸಕರೂ ಈ ಭಾಗಕ್ಕೆ ಬರುತ್ತಿಲ್ಲ. ಮದ್ದೂರು ಶಾಸಕರೂ ಬರ್ತಿಲ್ಲ. ಸರ್ಕಾರಿ ಕೆಲಸ ಯಾವುದೂ ಸರಿಯಾಗಿ ಆಗುತ್ತಿಲ್ಲ. ಈ ಭಾಗದಲ್ಲಿ ಸಾಕಷ್ಟುಸಮಸ್ಯೆ ಎದುರಾಗಿವೆ ಎಂದರು.

ಕ್ಷೇತ್ರದ ಜನರು ಚಲುವರಾಯಸ್ವಾಮಿ, ಸುರೇಶ್‌ಗೌಡ ಇಬ್ಬರನ್ನೂ ನೋಡಿದ್ದೀರಿ. ಅವರಿಂದ ನಿಮಗೆ ಏನು ಉಪಯೋಗವಾಗಿಲ್ಲ. ನಾನು ಸ್ವಾಭಿಮಾನದ ಹೆಸರಲ್ಲಿ ನಿಮ್ಮ ಮುಂದೆ ಬಂದಿದ್ದೇನೆ. ಸ್ಥಳೀಯ ಮುಖಂಡರು ನನ್ನ ಜೊತೆಯಲ್ಲಿ ನಿಂತಿದ್ದಾರೆ. ದಯವಿಟ್ಟು ನನ್ನನ್ನ ಗೆಲ್ಲಿಸಿ ಎಂದು ಕೋರಿದರು.

ನಾಗಮಂಗಲದಲ್ಲಿ ನನ್ನದೇ ಆದ 40 ಸಾವಿರ ಮತ ಇದೆ ಅಂತಾರೆ. ಕೊಪ್ಪ ಹೋಬಳಿಯಿಂದ 12 ಸಾವಿರ ಮತ ಕೊಟ್ರೆ ಸಾಕು ಗೆದ್ದೇ ಗೆಲ್ತೀನಿ. ನಾನು ಗೆದ್ದು ನಿಮ್ಮೆಲ್ಲರ ಸಮಸ್ಯೆಗೆ ಹೋರಾಡಿ ಸ್ಪಂದಿಸುತ್ತೇನೆ. ನನಗೆ 48ರಿಂದ 50 ಸಾವಿರ ಓಚ್‌ ಬಂದರೂ ಸಾಕು ಗೆದ್ದೇ ಗೆಲ್ಲುತ್ತೇನೆ. ದಯವಿಟ್ಟು ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಸಮಾರಂಭಕ್ಕೂ ಮುನ್ನ ಎಲ್‌.ಆರ್‌.ಶಿವರಾಮೇಗೌಡರನ್ನು ಹಳೇಹಳ್ಳಿ ಗೇಟ್‌ನಿಂದ ಕೊಪ್ಪ ಗ್ರಾಮದ ವರೆಗೆ ತೆರದ ವಾಹನದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದಾಗ ಬಸ್‌ ನಿಲ್ದಾಣದ ಬಳಿ ಸಾವಿರಾರು ಕಾರ್ಯಕರ್ತರು ಬೃಹತ್‌ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತ ಕೋರಿ ಅಭಿನಂದಿಸಿದರು.

ಸಮಾರಂಭದಲ್ಲಿ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ವಕೀಲ ರಾಮೇಗೌಡ, ಶಿವರಾಮೇಗೌಡರ ಪುತ್ರ ಚೇತನ್‌ಗೌಡ, ಕೊಪ್ಪ ಪುಟ್ಟಸ್ವಾಮಿ, ಹೊಸಗಾವಿ ಮಧು, ಸತೀಶ ಮರಳಿಗ, ಹುರಗಲವಾಡಿ ಉಮೇಶ, ಕೃಷ್ಣೇಗೌಡ, ಕೇಬಲ್‌ ರಮೇಶ್‌, ಕೋಣಸಾಲೆ ಪಾಪಣ್ಣ, ಹಳೇಹಳ್ಳಿ ಶಶಿ, ನಾಗರಾಜು ಉಪಸ್ಥಿತರಿದ್ದರು.

ಡಿಕೆಶಿ ನನ್ನದು ರಕ್ತ ಸಂಬಂಧ - ಎಲ್‌ಆರ್‌ಎಸ್‌

ಮದ್ದೂರು:  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ನನ್ನದು ರಕ್ತ ಸಂಬಂಧ. ಇದಕ್ಕೆ ಬೇರೆ ಅರ್ಥ ಕಲ್ಪಸುವುದು ಬೇಡ ಎಂದು ಮಾಜಿ ಸಂಸದ ಎಲ . ಶಿವರಾಮೇಗೌಡ ತಿಳಿಸಿದರು.

ಎಲ್‌ಆರ್‌ಎಸ್‌ ಪರ್ವ ಸಮಾರಂಭದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ನನ್ನ ಬಂಧು. ಸಾಕಷ್ಟುಬಾರಿ ಇಬ್ಬರು ಭೇಟಿಯಾಗಿದ್ದೇವೆ. ಈ ತಿಂಗಳಲ್ಲೇ ನಮ್ಮ ಮನೆಗೆ ಅವರು ಬಂದಿದ್ದರು. ಅವರದ್ದು ನನ್ನದು ರಕ್ತ ಸಂಬಂಧ ಆಗಾಗ್ಗೆ ನಾನು ಕೂಡ ಅವರ ಮನೆಗೆ ಹೋಗುತ್ತಿರುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ರಾಜಕೀಯವಾಗಿ ನಾನು ಅವರ ಮನೆಗೆ ಹೋಗಿಲ್ಲ. ಯಾವ ಹೊಂದಾಣಿಕೆ ರಾಜಕೀಯ ಇಲ್ಲ. ಹೊಂದಾಣಿಕೆ ಮಾಡಿಕೊಳ್ಳುವುದಾಗಿದ್ರೆ ನಾನು ಇಷ್ಟುಹೋರಾಟ ಮಾಡಬೇಕಿರಲಿಲ್ಲ. ಇನ್ನು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ನನಗೇನು ಗೊತ್ತಿಲ್ಲ. ಇದರ ಬಗ್ಗೆ ಕಾಂಗ್ರೆಸ್‌ನೊಂದಿಗೆ ಯಾವುದೇ ಮಾತುಕತೆ ನಡೆದಿÇ್ಲ. ನಾಗಮಂಗಲ ಕ್ಷೇತ್ರದಿಂದ ಈ ಬಾರಿ ಪಕ್ಷೇತರನಾಗಿ ನನ್ನ ಸ್ಪರ್ಧೆ ಖಚಿತ ಎಂದರು.

-----------

ಕೋಟ್‌....

ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಅನ್ನೋದು ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಚ್ಚಿ ಹೋಗಿದೆ. ಮಾಜಿ ಸಿಎಂ ಮಗನನ್ನೂ ಮಂಡ್ಯ ಜನ ಬಿಟ್ಟಿಲ್ಲ. ಸುಮಲತಾರ ಸ್ವಾಭಿಮಾನಕ್ಕೆ ಮತ ಹಾಕಿದ್ದೀರಿ. ನಾನು ಈ ಹಿಂದೆಯೂ ಎರಡು ಭಾರಿ ಪಕ್ಷೇತರನಾಗಿ ಗೆದ್ದಿರೋ ಅನುಭವವಿದೆ. ಈಗಲೂ ಯಾರ ಹಂಗಿಲ್ಲದೇ ಸ್ವತಂತ್ರವಾಗಿ ನಿಲುತ್ತೇನೆ.

ಎಲ್‌.ಆರ್‌.ಶಿವರಾಮೇಗೌಡ, ಮಾಜಿ ಸಂಸದ

22ಕೆಎಂಎನ್‌ ಡಿ21,22

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ತಾಲೂಕಿನ ಕೊಪ್ಪದಲ್ಲಿ ಬೃಹತ್‌ ಎಲ್‌ಆರ್‌ಎಸ್‌ ಸ್ವಾಭಿಮಾನಿ ಪರ್ವ ಸಮಾರಂಭವನ್ನು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಉದ್ಘಾಟಿಸಿದರು.

ಕೊಪ್ಪದಲ್ಲಿ ಆಯೋಜಿಸಿದ್ದ ಬೃಹತ್‌ ಎಲ್‌ಆರ್‌ಎಸ್‌ ಸ್ವಾಭಿಮಾನಿ ಪರ್ವದಲ್ಲಿ ಸಾವಿರಾರು ಕಾರ್ಯಕರ್ತರು ಎಲ್‌ .ಆರ್‌.ಶಿವರಾಮೇಗೌಡರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದರು.

click me!