ಗ್ರಾಮೀಣ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ಇನ್ನೂ ತಲುಪುತ್ತಿಲ್ಲ ಎಂಬುದಕ್ಕೆ ತಾಲೂಕಿನ ಬಸವನಹಳ್ಳಿ ಪ್ರಾಥಮಿಕ ಪಾಠಶಾಲೆಯ ಸ್ಥಿತಿ ಕಣ್ಣಿಗೆ ಕಟ್ಟುವಂತಹ ಸಾಕ್ಷಿಯಾಗಿದೆ. ಸುಸಜ್ಜಿತ ವ್ಯವಸ್ಥೆಯಿಲ್ಲದೇ ಹಳೇ ಕಾಲದ ಅತಂತ್ರ ಸ್ಥಿತಿಯ ಶಾಲಾ ಕೊಠಡಿಗಳಲ್ಲಿಯೇ ಗಡಿ ಗ್ರಾಮದ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸ್ಥಿತಿ ಇದೆ.
ನಾಗೇಂದ್ರ ಜೆ.
ಪಾವಗಡ : ಗ್ರಾಮೀಣ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ಇನ್ನೂ ತಲುಪುತ್ತಿಲ್ಲ ಎಂಬುದಕ್ಕೆ ತಾಲೂಕಿನ ಬಸವನಹಳ್ಳಿ ಪ್ರಾಥಮಿಕ ಪಾಠಶಾಲೆಯ ಸ್ಥಿತಿ ಕಣ್ಣಿಗೆ ಕಟ್ಟುವಂತಹ ಸಾಕ್ಷಿಯಾಗಿದೆ. ಸುಸಜ್ಜಿತ ವ್ಯವಸ್ಥೆಯಿಲ್ಲದೇ ಹಳೇ ಕಾಲದ ಅತಂತ್ರ ಸ್ಥಿತಿಯ ಶಾಲಾ ಕೊಠಡಿಗಳಲ್ಲಿಯೇ ಗಡಿ ಗ್ರಾಮದ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸ್ಥಿತಿ ಇದೆ.
ಪಾವಗಡ ತಾಲೂಕು ಕಸಬಾ ವ್ಯಾಪ್ತಿಯ ದೊಮ್ಮತಮರಿ ಸಮೀಪದ ವಿರುಪಸಮುದ್ರ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಬಸವನಹಳ್ಳಿ, ಗಡಿ ಭಾಗದ ಕುಗ್ರಾಮವಾಗಿದ್ದು, ಸುಮಾರು ಮುನ್ನೂರಕ್ಕಿಂತ ಹೆಚ್ಚು ಕುಟುಂಬಗಳು ವಾಸವಾಗಿವೆ. ಶಿಕ್ಷಣ, ಸಮರ್ಪಕ ರಸ್ತೆ ಹಾಗೂ ಶುದ್ಧ ಕುಡಿವ ನೀರಿನ ಅಭಾವ ಸೇರಿದಂತೆ ಶೌಚಾಲಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳಿಂದ ಗ್ರಾಮದ ಜನತೆ ವಂಚನೆಗೆ ಒಳಗಾಗಿದೆ.
ಬಸವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಇದ್ದು 1ರಿಂದ 5ನೇ ತರಗತಿವರೆಗೆ ಸುಮಾರು 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳ ಹಳೇ ಕಾಲದ ಎರಡು ಕೊಠಡಿಗಳಲ್ಲಿ ನಿತ್ಯ ತರಗತಿಗಳು ನಡೆಯುತ್ತಿವೆ. ಮಳೆ ಬಿದ್ದರೆ ಕೊಠಡಿಗಳು ಸೋರುತ್ತಿದ್ದು ಶಾಲೆ ತುಂಬ ನೀರು ಹರಡುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಆಗುತ್ತಿದೆ.
ಶಾಲಾ ಕೊಠಡಿಗಳ ಅತಂತ್ರ ಸ್ಥಿತಿಯಲ್ಲಿರುವ ಕಾರಣ ಗ್ರಾಮದ ಬಹುತೇಕ ಫೋಷಕರು ತಮ್ಮ ಮಕ್ಕಳನ್ನು ಪಕ್ಕದ ವೆಂಕಟಾಪುರ ಹಾಗೂ ದೊಮ್ಮತಮರಿ ಖಾಸಗಿ ಕಾನ್ವೆಂಟ್‌ಗಳಿಗೆ ಸೇರಿಸಿ ವ್ಯಾಸಂಗ ಮಾಡಿಸುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ಒಬ್ಬ ಸಹ ಶಿಕ್ಷಕರಿದ್ದು, ಇಬ್ಬರು ಬಿಸಿಯೂಟ ನಿರ್ವಹಣೆಯ ಅಡುಗೆ ಸಹಾಯಕರಿದ್ದಾರೆ. ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣ ಹಾಗೂ ಶೌಚಾಲಯ ಮತ್ತು ಶುದ್ಧನೀರಿನ ಸೌಲಭ್ಯ ಕಲ್ಪಿಸುವ ಮೂಲಕ ಗ್ರಾಮೀಣ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ ಮುಂದಾಗಬೇಕಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರಿಂದ ತರಾಟೆ:
ಮನೆಮನೆಗೆ ನಲ್ಲಿ ಅಳವಡಿಕೆ ಹಾಗೂ ಸಿಸಿರಸ್ತೆ ಕಾಮಗಾರಿ ಗುದ್ದಲಿಪೂಜೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಸಕ ವೆಂಕಟರಮಣಪ್ಪ ಬಸವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ತೆರಳಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರ ನಿಯೋಜನೆ ಹಾಗೂ ಶಾಲಾ ಕೊಠಡಿಗಳ ಮಾಹಿತಿ ಕುರಿತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಕೂಡಲೇ ಪೋನ್ ಮಾಡಿ ಶಾಲೆಯ ಅಭಿವೃದ್ಧಿಯ ನಿರ್ಲಕ್ಷ್ಯದ ಬಗ್ಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದರು. ಶಾಲೆ ಪ್ರಗತಿ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಶೀಘ್ರ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.
ಪಾವಗಡ ತಾಲೂಕಿನ ಗಡಿ ಭಾಗದ ಬಸವನಹಳ್ಳಿ ಪ್ರಾಥಮಿಕ ಶಾಲೆಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸಿದ್ದು, ಶಾಲಾ ಕೊಠಡಿಗಳ ಅತಂತ್ರ ಸ್ಥಿತಿ ಬಗ್ಗೆ ಈಗಾಗಲೇ ಶೈಕ್ಷಣಿಕ ಜಿಲ್ಲೆ ಮಧುಗಿರಿ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ. ಶಾಸಕರ ಸಹಕಾರದ ಮೇರೆಗೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ, ನೂತನ ಕೊಠಡಿ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಿ, ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಲಾಗುವುದು.
ಅಶ್ವತ್‌್ಥನಾರಾಯಣ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
ಬಸವನಹಳ್ಳಿ ಗಡಿ ಭಾಗದ ಕುಗ್ರಾಮ. ಇಲ್ಲಿಗೆ ಬಸ್ ಸೌಲಭ್ಯವಿಲ್ಲದೇ ಆಟೋ, ದ್ವಿಚಕ್ರ ವಾಹನಗಳಲ್ಲಿ ತೆರಳಬೇಕು. ಪಾವಗಡ, ವೆಂಕಟಾಪುರ, ಹಿಂದೂಪುರ ಮುಖ್ಯ ರಸ್ತೆಗೆ ಗ್ರಾಮದಿಂದ 2ಕಿಮೀ ದೂರವಿದ್ದು ರಸ್ತೆಯಿಡಿ ಜಲ್ಲಿ ಕಲ್ಲು ಹಾಗೂ ಅಲ್ಲಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಈ ಮಾರ್ಗದಲ್ಲಿ ವಾಹನಗಳಲ್ಲಿ ತೆರಳುವ ವೇಳೆ ಅಪಘಾತ ಸಂಭವಿಸುತ್ತಿವೆ. ರಸ್ತೆ ಸರಿಪಡಿಸಿ ಗ್ರಾಮಕ್ಕೆ ಓಡಾಡಲು ಅನುಕೂಲ ಕಲ್ಪಿಸಬೇಕು.
ಮುತ್ಯಾಲಪ್ಪ ಗ್ರಾಮದ ಮುಖಂಡ