ಭೂಸ್ವಾಧೀನಾಧಿಕಾರಿ ಮೇಲೆ ಎಸಿಬಿ ದಾಳಿ: ಅಪಾರ ಆಸ್ತಿ ಪತ್ತೆ

By Kannadaprabha NewsFirst Published Jun 13, 2020, 8:27 AM IST
Highlights

ಲಂಚ ಸ್ವೀಕರಿಸಿ ಅಮಾನತುಗೊಂಡಿದ್ದ ಮಂಗಳೂರಿನ ಭ್ರಷ್ಟಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಎಂ. ದಾಸೇಗೌಡನ ವಿವಿಧೆಡೆಯ ಮನೆಗಳ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರು. ಮೌಲ್ಯದ ಚರ- ಸ್ಥಿರ ಆಸ್ತಿಯನ್ನು ಪತ್ತೆ ಮಾಡಿದ್ದಲ್ಲದೆ, ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು(ಜೂ.13): ಲಂಚ ಸ್ವೀಕರಿಸಿ ಅಮಾನತುಗೊಂಡಿದ್ದ ಮಂಗಳೂರಿನ ಭ್ರಷ್ಟಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಎಂ. ದಾಸೇಗೌಡನ ವಿವಿಧೆಡೆಯ ಮನೆಗಳ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರು. ಮೌಲ್ಯದ ಚರ- ಸ್ಥಿರ ಆಸ್ತಿಯನ್ನು ಪತ್ತೆ ಮಾಡಿದ್ದಲ್ಲದೆ, ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಎಸಿಬಿ ಎಸ್ಪಿ ಉಮಾ ಪ್ರಶಾಂತ್‌, ಡಿವೈಎಸ್ಪಿ ಮಂಜುನಾಥ್‌, ಇಸ್ಸ್‌ಪೆಕ್ಟರ್‌ ಯೋಗೀಶ್‌ ನಾಯ್‌್ಕ ನೇತೃತ್ವದ ತಂಡವು ದಾಸೇಗೌಡನಿಗೆ ಸೇರಿದ ಮಂಗಳೂರು, ಮಂಡ್ಯದ ವಿವಿಧ ನಿವಾಸಗಳ ಮೇಲೆ ಮುಂಜಾನೆ 5 ಗಂಟೆಯ ವೇಳೆಗೆ ಏಕಕಾಲಕ್ಕೆ ದಾಳಿ ನಡೆಸಿದೆ. ಮಂಗಳೂರಿನ ಬಿಜೈನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಅಧಿಕಾರಿಗಳು ತೆರಳಿದಾಗ ಬೀಗ ಹಾಕಲಾಗಿದ್ದು ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮಂಡ್ಯದ ಮೂರು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ: ಅರ್ಜಿ ಸಲ್ಲಿಸಲು ಅವಧಿ​ ವಿಸ್ತರಣೆ

ಮಂಡ್ಯದಲ್ಲಿದ್ದ ದಾಸೇಗೌಡ: ದಾಸೇಗೌಡನಿಗೆ ಮಂಡ್ಯದಲ್ಲಿ ಮೂರು ಮನೆಗಳಿದ್ದು, ಅಧಿಕಾರಿಗಳು ದಾಳಿ ನಡೆಸಿದಾಗ ಆತ ಮಂಡ್ಯದ ಸಿಟಿಯಲ್ಲಿರುವ ಬಂಗಲೆಯಲ್ಲಿದ್ದ. ಉಳಿದ 2 ಮನೆಗಳಲ್ಲಿ ಆತನ ಸ್ನೇಹಿತರು ಮತ್ತು ಸಂಬಂಧಿಕರು ವಾಸವಾಗಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸತತ ಹಲವು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಲಾಗಿದ್ದು, 580 ಗ್ರಾಂ ಚಿನ್ನ, 6,600 ಗ್ರಾಂ ಬೆಳ್ಳಿ, ಒಂದು ಮಾರುತಿ ಎರ್ಟಿಗಾ ಕಾರು, ಮೂರು ದ್ವಿಚಕ್ರ ವಾಹನಗಳು, ಮನೆಯಲ್ಲಿ 15 ಲಕ್ಷ ರು.ಗೂ ಅಧಿಕ ಮೌಲ್ಯದ ಗೃಹೋಪಯೋಗಿ ಉಪಕರಣಗಳು, ವಿವಿಧ ಬ್ಯಾಂಕ್‌ಗಳಲ್ಲಿ ಲಾಕರ್‌ ಮತ್ತು 10 ಲಕ್ಷ ರು.ಗೂ ಹೆಚ್ಚು ನಗದು ಪತ್ತೆಯಾಗಿದೆ.

ಬೆಂಗಳೂರು, ಹಾಸನದಲ್ಲೂ ಆಸ್ತಿ:

ದಾಸೇಗೌಡ ಮಂಗಳೂರು, ಮಂಡ್ಯ ಮಾತ್ರವಲ್ಲದೆ, ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾನೆ ಎನ್ನುವ ಅಂಶ ದಾಖಲೆ ಶೋಧನೆ ವೇಳೆ ಗೊತ್ತಾಗಿದೆ. ಒಟ್ಟು 8 ಕಡೆಗಳಲ್ಲಿ ಈತ ಕೋಟ್ಯಂತರ ರು. ಮೌಲ್ಯದ ಸೈಟ್‌ ರೂಪದಲ್ಲಿ ಆಸ್ತಿ ಮಾಡಿಕೊಂಡಿದ್ದ. ತನ್ನ ಸರ್ಕಾರಿ ಸೇವಾವಧಿಯಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಗಳಿಸಿರುವುದು ತನಿಖೆಯ ವೇಳೆ ಕಂಡುಬಂದಿದೆ. ಇನ್ನೂ ಅನೇಕ ದಾಖಲೆಗಳ ಶೋಧದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಬ್ಯಾಂಕ್‌ ಲಾಕರ್‌ ತನಿಖೆ ಇನ್ನಷ್ಟೇ ನಡೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ:

ಮಂಗಳೂರಿನ ಎಂಆರ್‌ಪಿಎಲ್‌, ಎಸ್‌ಇಝಡ್‌ಗಳಿಗೆ ನೂರಾರು ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿದ ಅಧಿಕಾರಿ ಈತ. ಈ ಪ್ರಕ್ರಿಯೆಯುದ್ದಕ್ಕೂ ಬಡ ರೈತರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಆರೋಪ ವ್ಯಾಪಕವಾಗಿತ್ತು. ಕೊನೆಗೆ ಕಳೆದ ಡಿಸೆಂಬರ್‌ ತಿಂಗಳಲ್ಲಿ 5 ಲಕ್ಷ ರು. ಲಂಚ ಸ್ವೀಕಾರ ಮಾಡುತ್ತಿದ್ದಾಗ ರೆಡ್‌ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದ. ಆಗ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನು ಪಡೆದು ಹೊರಬಂದಿದ್ದ. ಇದೇ ಲಂಚ ಸ್ವೀಕಾರ ಆರೋಪದಡಿ ಪ್ರಸ್ತುತ ದಾಸೇಗೌಡ ಅಮಾನತಿನಲ್ಲಿದ್ದಾನೆ.

ಕೊರೋನಾದಿಂದ ದಾಳಿ ವಿಳಂಬ:

ದಾಸೇಗೌಡ ಮನೆಗಳ ಮೇಲೆ ಎಸಿಬಿ ದಾಳಿ ಹಿಂದೆಯೇ ನಡೆಸಲು ಎಸಿಬಿ ಉದ್ದೇಶಿಸಿತ್ತು. ಆದರೆ ಮಂಗಳೂರಿನಲ್ಲಿ ಗೋಲಿಬಾರ್‌ ನಂತರದ ಘಟನೆಗಳು, ಕೊರೊನಾ ಲಾಕ್‌ಡೌನ್‌ನಿಂದಾಗಿ ಕಾರ್ಯಾಚರಣೆ ಮುಂದೂಡಲಾಗಿತ್ತು. ಇದೀಗ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರಿಂದ ದಾಳಿ ನಡೆಸಲಾಗಿದೆ.

click me!