Tumakuru: ಐತಿಹಾಸಿಕ ಸಿದ್ದಗಂಗಾ ಮಠದ ದನಗಳ ಪರಿಷೆ ರದ್ದು: ಸಿದ್ದಲಿಂಗಶ್ರೀಗಳ ಪ್ರಕಟಣೆ

By Sathish Kumar KH  |  First Published Feb 4, 2023, 5:51 PM IST

ಐತಿಹಾಸಿಕ ಸಿದ್ಧಗಂಗಾ ಮಠದ ದನಗಳ ಪರಿಷೆ ರದ್ದು
ದನಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ನಿರ್ಧಾರ
ಪಶು ಸಂಗೋಪನೆ ಇಲಾಖೆಯಿಂದ ದನಗಳ ಪರಿಷೆ ನಡೆಸಲು ಅನುಮತಿ ನಿರಾಕರಣೆ


ತುಮಕೂರು (ಫೆ.04): ರಾಜ್ಯದ ಕೃಷಿ ಪ್ರಧಾನ ಪ್ರದೇಶವಾಗಿರುವ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಐತಿಹಾಸಿಕ ರಾಸು ಜಾತ್ರೆಗಳಲ್ಲಿ ಒಂದಾಗಿರುವ ಸಿದ್ದಗಂಗಾ ಮಠದ ದನಗಳ ಪರಿಷೆಯನ್ನು ಈ ವರ್ಷ ರದ್ದುಗೊಳಿಸಲಾಗಿದೆ ಎಂದು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಪ್ರತಿವರ್ಷ ಸಂಕ್ರಾಂತಿ ಹಬ್ಬದ ನಂತರ ನಡೆಯುತ್ತಿದ್ದ ಐತಿಹಾಸಿಕ ಜಾನುವಾರುಗಳ ಜಾತ್ರೆಯಲ್ಲಿ ಸಿದ್ಧಗಂಗಾ ಮಠದ ಜಾನುವಾರು ಜಾತ್ರೆಯೂ ಒಂದಾಗಿತ್ತು. ಕೃಷಿ ಪ್ರಧಾನವಾದ ಪ್ರದೇಶಗಳಲ್ಲಿ ರೈತರು ಹಾಗೂ ಪಶು ಸಂಗೋಪನೆ ಮಾಡುವವರಿಗೆ ಈ ದನಗಳ ಪರಿಷೆ ಅತ್ಯಂತ ಪ್ರಮುಖ ಜಾತ್ರೆಯಾಗಿತ್ತು. ಆದರೆ, ಈ ವರ್ಷ ರಾಜ್ಯದಾದ್ಯಂತ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ದನಗಳಿಗೆ ಇದು ಅಂಟು ರೋಗವಾಗಿ ಕಾಡುತ್ತಿದೆ. ಹೀಗಾಗಿ, ಒಂದು ದನಕ್ಕೆ ಚರ್ಮಗಂಟು ರೋಗವಿದ್ದರೂ ಅದರಿಂದ ನೂರಾರು ರಾಸುಗಳಿಗೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ, ಈ ವರ್ಷದ ದನಗಳ ಪರಿಷೆಯನ್ನು ಮಾಡದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

Lumpy skin disease: ನಿಷೇಧದ ನಡುವೆಯೂ ಬೆಟ್ಟದಪುರದಲ್ಲಿ ಜಾನುವಾರ ಜಾತ್ರೆ!

ಸಿದ್ದಗಂಗಾ ಮಠದಲ್ಲಿ ನಡೆಯಬೇಕಿದ್ದ ದನಗಳ ಪರಿಷೆ: ತುಮಕೂರಿನ ಕ್ಯಾತ್ಸಂದ್ರದ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ದನಗಳ ಜಾತ್ರೆಯನ್ನೂ ನಡೆಸಲಾಗುತ್ತಿತ್ತು. ಕಳೆದ 50 ವರ್ಷಗಳಿಂದಲೂ ದನಗಳ ಪರಿಷೆ ನಡೆದುಕೊಂಡು ಬಂದಿದೆ. ಈ ಬಾರಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹಿನ್ನೆಲೆ ಜಾತ್ರಾ ಮಹೋತ್ಸವದಲ್ಲಿ ದನಗಳ ಪರಿಷೆ ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಮಗಂಟು ರೋಗ ಹರಡುತ್ತಿರುವ ಕಾರಣ ಪಶು ಸಂಗೋಪನೆ ಇಲಾಖೆಯ ಸಲಹೆ ಕೇಳಲಾಗಿತ್ತು. ಆದರೆ, ಪಶು ಸಂಗೋಪನೆ ಇಲಾಖೆಯು ಈಗಾಗಲೇ ರಾಜ್ಯದ ಹಲವು ಸುಪ್ರಸಿದ್ಧ ಜಾನುವಾರು ಜಾತ್ರೆಗಳನ್ನು ರದ್ದುಗೊಳಿಸಿದ್ದು, ಈ ಬಾರಿ ಸಿದ್ದಗಂಗಾ ಮಠದಲ್ಲಿಯೂ ದನಗಳ ಪರಿಷೆ ಮಾಡದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ದನಗಳ ಜಾತ್ರೆಯನ್ನು ನಿರ್ಬಂಧಿಸಲಾಗಿದೆ ಎಂದು ಸಿದ್ದಲಿಂಗೇಶ್ವರ ಸ್ವಾಮೀಜಿ ಪ್ರಕಟಣೆ ಹೊರಡಿಸಿದ್ದಾರೆ.

ರಾಸುಗಳಿಗೆ ಬಹುಮಾನ ನೀಡಲಾಗುತ್ತಿತ್ತು: ಇನ್ನು ತುಮಕೂರಿನ ಸಿದ್ಧಗಂಗಾ ಮಠದ ರೈತರಿಗೆ ಅನುಕೂಲ ಆಗುವಂತೆ ಸಿದ್ಧಲಿಂಗೇಶ್ವರ ಜಾತ್ರೆಯ ಸಮಯದಲ್ಲಿ ರಾಸುಗಳ ಜಾತ್ರೆ ಮಾಡಲು ಲಿಂ. ಶಿವಕುಮಾರ ಸ್ವಾಮೀಜಿ ಅವರು ಚಾಲನೆ ನೀಡಿದ್ದರು. ರೈತರನ್ನು ಪ್ರೋತ್ಸಾಹಿಸಲು ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಆಯೋಜನೆ ಮಾಡುತ್ತಿದ್ದ ದನಗಳ ಜಾತ್ರೆ ಇದಾಗಿದೆ. ಇನ್ನು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಉತ್ತಮ ರಾಸುಗಳಿಗೆ ವಿಶೇಷ ಬಹುಮಾನವನ್ನು ಮಠದ ಆಡಳಿತ ಮಂಡಳಿಯಿಂದ ನೀಡಲಾಗುತ್ತಿತ್ತು. ಈ ವರ್ಷ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಸರ್ಕಾರದಿಂದ ಅನುಮತಿ ಸಿಗಲಿಲ್ಲ.

Hassan: ಜಾನುವಾರು ಚರ್ಮಗಂಟು ರೋಗ: ಐತಿಹಾಸಿಕ ಬೂಕನಬೆಟ್ಟ ರಾಸುಗಳ ಜಾತ್ರೆ ನಿಷೇಧ

ಚರ್ಮಗಂಟು ರೋಗ ತಡೆಗೆ ಲಸಿಕೆ ನೀಡಿಕೆ ಮುಂದುವರಿಕೆ: ಮನುಷ್ಯರಿಗೆ ಕಳೆದ ಎಡರು ವರ್ಷಗಳಿಂದ ಕಾಡಿದ್ದ ಕೋವಿಡ್‌ ಸಾಂಕ್ರಾಮಿಕ ರೋಗದಂತೆ ಈಗ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈಗಾಗಲೇ ರಾಜ್ಯದಲ್ಲಿ ಹಲವು ರಾಸುಗಳು ಕೂಡ ಈ ರೋಗಕ್ಕೆ ಬಲಿಯಾಗಿವೆ. ಸರ್ಕಾರದಿಂದ ಲಸಿಕೆ ನೀಡಿಕೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇನ್ನು ಚರ್ಮಗಂಟು ರೋಗದಿಂದ ಸಾವನ್ನಪ್ಪುವ ರಾಸುಗಳಿಗೆ ಸರ್ಕಾರ ಪರಿಹಾರ ಧನವನ್ನೂ ಘೋಷಣೆ ಮಾಡಿದೆ. ಇನ್ನೂ ಕೆಲವು ದಿನಗಳು ಚರ್ಮಗಂಟು ರೋಗ ನಿಯಂತ್ರಣಕ್ಕೆ ಸಮಯ ಬೇಕಿದ್ದು, ಯಾವುದೇ ದನದ ಜಾತ್ರೆಗಳನ್ನು ಮಾಡದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿದೆ. ಇನ್ನು ಜನರೂ ಕೂಡ ನಿಯಮಗಳನ್ನು ಪಾಲಿಸಿದಲ್ಲಿ ಚರ್ಮಗಂಟು ರೋಗವನ್ನು ತಡೆಗಟ್ಟಬಹುದು.

click me!