
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಜಂಬೂಸವಾರಿಯ ಮಾಜಿ ಕ್ಯಾಪ್ಟನ್ ಅಭಿಮನ್ಯು ಅರಮನೆ ಅಂಗಳ ಪ್ರವೇಶಿಸಿದ್ದು, ಅಭಿಮಾನಿಗಳ ಆಸೆಯಂತೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾನೆ. ಇತ್ತ ಅರಮನೆಯಲ್ಲಿ ಶರನ್ನವರಾತ್ರಿ ಹಾಗೂ ಖಾಸಗಿ ದರ್ಬಾರ್‌ಗೆ ಸಿದ್ಧತೆಗಳು ಭರದಿಂದ ಸಾಗಿದೆ.
ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಅಭಿಮನ್ಯು ಇಂದು ಅರಮನೆ ಅಂಗಳ ಪ್ರವೇಶಿಸಿದ್ದಾನೆ. ಜಯಮಾರ್ತಾಂಡ ದ್ವಾರದ ಬಳಿ ಅಭಿಮನ್ಯುವಿಗೆ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಅಭಿಮನ್ಯು ಆಗಮಿಸುತ್ತಿದ್ದಂತೆ ಇತರ ದಸರಾ ಆನೆಗಳೂ ಆತ್ಮೀಯವಾಗಿ ಸ್ವಾಗತಿಸಿದವು.
ಅಭಿಮಾನಿಗಳ ಆಸೆಯಂತೆ ಈ ಬಾರಿ ಅಭಿಮನ್ಯು ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದು, ಸರ್ಕಾರ ಆತನನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ. ಇದೇ ವೇಳೆ ಅಭಿಮಾನಿಗಳು ಅಭಿಮನ್ಯುವಿಗೆ ವಿಶೇಷ ಪೇಟವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೆಂಪು ಮತ್ತು ಗೋಲ್ಡ್ ಬಣ್ಣದಲ್ಲಿ ಸಿದ್ಧಪಡಿಸಿರುವ ಈ ಪೇಟ, ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಪೇಟದ ಮಾದರಿಯಲ್ಲಿದೆ. ಸುಮಾರು 6ರಿಂದ 8 ಕೆ.ಜಿ. ತೂಕದ ಪೇಟವನ್ನು ಸಂಪ್ರದಾಯಬದ್ಧ ಪೂಜೆಯ ಬಳಿಕ ಅಭಿಮನ್ಯುವಿಗೆ ಧರಿಸಲಾಯಿತು. ಅಭಿಮನ್ಯು ಇಲ್ಲದೆ ದಸರಾ ಇಲ್ಲ ಎಂಬಂತಾಗಿದೆ. ಅಂತಿಮವಾಗಿ ಅಭಿಮನ್ಯು ದಸರಾಗೆ ಬಂದಿದ್ದಾನೆ. ಸರ್ಕಾರ ನಿಶಾನೆ ಆನೆಯಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದು ಶ್ರೀವತ್ಸ ಹೇಳಿದ್ದಾರೆ.
ಅಭಿಮನ್ಯುವಿಗೆ ತಾಲೀಮಿನ ಅವಶ್ಯಕತೆ ಇಲ್ಲದಿದ್ದರೂ, ಮುನ್ನೆಚ್ಚರಿಕೆಯಾಗಿ ನಾಳೆಯಿಂದ ತಾಲೀಮಿನಲ್ಲಿ ಭಾಗಿಯಾಗಲಿದ್ದಾನೆ. ಅಕ್ಟೋಬರ್ 7, 9 ಮತ್ತು 12ರಂದು ಕುಶಾಲತೋಪು ಸಿಡಿಸುವ ತಾಲೀಮು ನಡೆಯಲಿದ್ದು, ಸದ್ದು-ಗದ್ದಲಕ್ಕೆ ಅಭಿಮನ್ಯು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದ್ದಾರೆ.
ಮತ್ತೊಂದೆಡೆ ಮೈಸೂರು ಅರಮನೆಯಲ್ಲಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನೆರವೇರಿತು. ಭದ್ರತಾ ಕೊಠಡಿಯಲ್ಲಿದ್ದ 13 ಬಿಡಿಭಾಗಗಳನ್ನು ದರ್ಬಾರ್ ಹಾಲ್‌ಗೆ ತಂದು, ವಿಶೇಷ ಪೂಜೆಗಳ ಬಳಿಕ ಸಿಂಹಾಸನ ಜೋಡಿಸಲಾಯಿತು. ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ ಹಾಗೂ ಶಾಂತಿ ಹೋಮ ನೆರವೇರಿಸಲಾಯಿತು.
ಒಂದೆಡೆ ದಸರಾ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಅಭಿಮನ್ಯುಗೆ ಅಭಿಮಾನಿಗಳಿಂದ ವಿಶೇಷ ಪೇಟದ ಗೌರವ. ಮತ್ತೊಂದೆಡೆ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಮೂಲಕ ಶರನ್ನವರಾತ್ರಿ ಹಾಗೂ ಖಾಸಗಿ ದರ್ಬಾರ್‌ಗೆ ಸಿದ್ಧತೆ.
ಒಟ್ಟಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಅರಮನೆ ಅಂಗಳದಲ್ಲಿ ಸಂಭ್ರಮದ ಕಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾ ನೆಟ್ ಸುವರ್ಣ ನ್ಯೂಸ್, ಮೈಸೂರು)