ತಮಿಳು ಕಾಲೋನಿ ವಿವಾದಕ್ಕೆ ತಾರ್ಕಿಕ ಅಂತ್ಯ? ದಸರಾ ಮುಗಿಯುತ್ತಿದ್ದಂತೆ ಒತ್ತುವರಿ ತೆರವು ಆರಂಭ!

Sathish Kumar KH   | Kannada Prabha
Published : Oct 05, 2026, 05:06 PM IST
Tamil Colony Mandya

ಸಾರಾಂಶ

ತಮಿಳು ಕಾಲೋನಿ ತೆರವು ಮತ್ತು ಆಸ್ಪತ್ರೆ ಜಾಗದ ಒತ್ತುವರಿ ವಿವಾದವು ದಸರಾ ಹಬ್ಬದ ನಂತರ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದೆ. ಸಾಮಾಜಿಕ ಹೋರಾಟಗಾರರ ಉಪವಾಸ ಸತ್ಯಾಗ್ರಹದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ.

ವರದಿ- ಮಂಡ್ಯ ಮಂಜುನಾಥ

ಮಂಡ್ಯ (ಅ.05): ತಮಿಳು ಕಾಲೋನಿ ವಿವಾದದ ಒಂದು ಕೇಂದ್ರ ಬಿಂದುವಷ್ಟೇ. ಅಲ್ಲಿರುವ ನಿವಾಸಿಗಳನ್ನು ಮುಂದಿಟ್ಟುಕೊಂಡು ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿದ್ದವರೇ ಬೇರೆ. ಈಗ ಅವೆಲ್ಲಕ್ಕೂ ತಾರ್ಕಿಕ ಅಂತ್ಯವಾಡುವ ಕಾಲ ಸನ್ನಿಹಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದಸರಾ ಮುಗಿದ ಬಳಿಕ ತಮಿಳು ಕಾಲೋನಿ ಹಾಗೂ ಒತ್ತುವರಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ತಮಿಳು ಕಾಲೋನಿ ತೆರವಿಗೆ ಒತ್ತಾಯಿಸಿ ಸೆ.07ರಿಂದ ಆಮರಣಾಂತ ಉಪವಾಸ ಆರಂಭಿಸಿದ ನಂತರದಲ್ಲಿ ಜಿಲ್ಲಾಡಳಿತದಿಂದ ಪ್ರಕ್ರಿಯೆಗಳು ಚುರುಕುಗೊಂಡವು. ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರೂ ಕೂಡ ಇದಕ್ಕೆ ಒತ್ತಾಸೆಯಾಗಿ ನಿಂತರು. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಆಸ್ಪತ್ರೆ ಸ್ಥಾಪನೆಗೆ ಪ್ರಾಮುಖ್ಯತೆ ನೀಡಿ ಹಲವು ದಶಕಗಳ ವಿವಾದಕ್ಕೆ ಅಂತ್ಯವಾಡುವುದಕ್ಕೆ ನಿರ್ಧರಿಸಿದರು.

ಆ ನಂತರದಲ್ಲಿ ಮೈಸೂರು ಗೆಜೆಟ್ ನೋಟಿಫಿಕೇಷನ್ ಅನ್ವಯ ಮಿಮ್ಸ್ ಮತ್ತು ಸರ್ಕಾರಿ ಪ್ರೌಢಶಾಲೆ ಜಾಗದ ಸರ್ವೇ ಕಾರ್ಯ, ಒತ್ತುವರಿದಾರರ ಗುರುತು, ಖರಾಬು ಜಮೀನಿನ ಒತ್ತುವರಿಯನ್ನು ಅಳತೆ ಮಾಡಲು ಸೂಚನೆ, ರಾಜ್ಯ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತೆರವಿಗೆ ಅಗತ್ಯ ಕ್ರಮ, ಹೈಕೋರ್ಟ್ ವಕೀಲರು, ಅಡ್ವೋಕೇಟ್ ಜನರಲ್ ಅವರೊಂದಿಗೆ ಸಭೆ ಹೀಗೆ ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಂಡು ತಮಿಳು ಕಾಲೋನಿ ಸೇರಿದಂತೆ ಪ್ರಭಾವಿಗಳು ಮಾಡಿಕೊಂಡಿರುವ ಒತ್ತುವರಿಯನ್ನು ತೆರವುಗೊಳಿಸುವತ್ತ ದಿಟ್ಟ ಹೆಜ್ಜೆಯನ್ನು ಇಡಲಾಯಿತು.

ಪ್ರಮುಖ ಘಟನಾವಳಿ:

1979 ರಿಂದ 2026ರವರೆಗೆ ತಮಿಳು ಕಾಲೋನಿಗೆ ಸಂಬಂಧಿಸಿದಂತೆ ನಡೆದ ಪ್ರಮುಖ ಘಟನಾವಳಿಗಳನ್ನು ಇಲ್ಲಿ ದಾಖಲಿಸಲಾಗಿದೆ.

11.05.1979: ಮಂಡ್ಯ ನಗರದ ಪೂರ್ವಭಾಗದ ತಮಿಳು ಕಾಲೋನಿಯ 5 ಎಕರೆ 25 ಗುಂಟೆ ಪ್ರದೇಶ ಕೊಳಚೆ ಪ್ರದೇಶವೆಂದು ಘೋಷಣೆ. 2002-03ರಲ್ಲಿ ವಾಂಬೆ ಯೋಜನೆಯಡಿ 146 ಮನೆಗಳ ನಿರ್ಮಾಣ. 2008ರಲ್ಲಿ ತಮಿಳು ಕಾಲೋನಿ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ, ಹಲವು ಮನೆಗಳು ಆಹುತಿ. 2009ರಲ್ಲಿ ಕೊಳಚೆ ಪ್ರದೇಶದ ಪಕ್ಕದ 2 ಎಕರೆ 33 ಗುಂಟೆ ಪ್ರದೇಶ ವಸತಿ ಯೋಜನೆಗಾಗಿ ಮಂಡಳಿಗೆ ಹಸ್ತಾಂತರ. ಐಎಚ್‌ಎಸ್‌ಡಿಪಿ ಯೋಜನೆಯಡಿ 378 ಮನೆಗಳನ್ನು ನಿರ್ಮಿಸಲು ಮೂರು ಪ್ಯಾಕೇಜ್‌ಗಳಡಿ ಕಾರ್ಯಾದೇಶ ನೀಡಿ ಕಾಮಗಾರಿ ಆರಂಭ. 2010ರಲ್ಲಿ ಬಿ.ಟಿ.ರವೀಂದ್ರಕುಮಾರ್ ಮತ್ತಿತರರು 2 ಎಕರೆ 33 ಗುಂಟೆ ಜಮೀನಿನ ಹಸ್ತಾಂತ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಕಾಮಗಾರಿ ಮುಂದುವರೆಸದಂತೆ ತಡೆಯಾಜ್ಞೆ. 2015ರಲ್ಲಿ ತಮಿಳು ಕಾಲೋನಿ ಕೊಳಚೆ ಪ್ರದೇಶವನ್ನು ಸ್ಥಳಾಂತರಿಸಲು ನ್ಯಾಯಾಲಯದಿಂದ ಆದೇಶ.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಕೇಂದ್ರ ಕಚೇರಿಯಿಂದ ತಮಿಳು ಕಾಲೋನಿ ನಿವಾಸಿಗಳ ಪುನರ್‌ ವಸತಿಗಾಗಿ 6 ರಿಂದ 8 ಎಕರೆ ಜಮೀನು ಕೋರಿ ಪತ್ರ. ಫಲಾನುಭವಿಗಳ ಪಟ್ಟಿ ಪರಿಶೀಲನೆ, ನಿವಾಸಿಗಳಿಂದ ವಿರೋಧ. 2016ರಲ್ಲಿ ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಕ್ಕೆ ರಾಜೀವ್ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಡ್ಯ ನಗರದ ಸರ್ವೆ ನಂ. 507ರ 6 ಎಕರೆ ಜಮೀನು ಮಂಡಳಿಗೆ ಹಸ್ತಾಂತರ. 12 ಎಕರೆ ಜಮೀನು ಹಸ್ತಾಂತರ ಪ್ರಕ್ರಿಯೆಗೆ ತಡೆಯಾಜ್ಞೆ.

ಹಾಲಹಳ್ಳಿಯಲ್ಲಿ ಜಿ-ಪ್ಲಸ್ 3 ಮಾದರಿಯ 1335 ಮನೆಗಳ ಬದಲಾಗಿ ಮೂರು ಸ್ಥಳಗಳಲ್ಲಿ ಜಿ-ಪ್ಲಸ್ 1 ಮತ್ತು ಜಿ-ಪ್ಲಸ್ 2 ಮಾದರಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ. 2018ರಲ್ಲಿ ಸರ್ವೇ ನಂ. 507ರ 6 ಎಕರೆ ಜಮೀನಿನಲ್ಲಿ 575 ಜಿ-ಪ್ಲಸ್ 3 ಮಾದರಿಯ ಮನೆಗಳ ನಿರ್ಮಾಣಕ್ಕೆ ಬಡಾವಣೆ ನಕ್ಷೆ ಅನುಮೋದನೆಗೆ ಮನವಿ. ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಿಸುವ ಸಲುವಾಗಿ ನಿರ್ಮಿಸುತ್ತಿರುವ 575 ಮನೆಗಳ ಕಾಮಗಾರಿ ಪೂರ್ಣಕ್ಕೆ ಹೈಕೋರ್ಟ್ ಒಂದೂವರೆ ವರ್ಷ ಕಾಲಾವಕಾಶ ನೀಡಿ ಆದೇಶ.

ತಮಿಳು ಕಾಲೋನಿ ನಿವಾಸಿಗಳಿಂದ ತೀವ್ರ ವಿರೋಧ

2023ರಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಲು ನಗರಸಭೆ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದಾಗ ತಮಿಳು ಕಾಲೋನಿ ನಿವಾಸಿಗಳಿಂದ ತೀವ್ರ ವಿರೋಧ. ಜಿಲ್ಲಾಧಿಕಾರಿಗಳ ಮನವೊಲಿಕೆ ಯತ್ನ ವಿಫಲ. 2023ರಲ್ಲಿ ಸುಶೀಲಮ್ಮ ಮತ್ತಿತರರು ನಿವಾಸಿಗಳನ್ನು ಸ್ಥಳಾಂತರದಂತೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ. 2024ರಲ್ಲಿ ತಮಿಳು ಕಾಲೋನಿ ನಿವಾಸಿಗಳ ಜೊತೆ ಸಭೆ, ಚಿಕ್ಕಮಂಡ್ಯದಲ್ಲಿ ನಿರ್ಮಿಸಿರುವ ಮನೆಗಳಿಗೆ ತೆರಳುವಂತೆ ಮನವಿ, ನಿವಾಸಿಗಳ ತೀವ್ರ ವಿರೋಧ.

2025ರಲ್ಲಿ ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರಿಸಲು ಮಿಮ್ಸ್‌ನಿಂದ ಹೈಕೋರ್ಟ್‌ಗೆ ದಾವೆ. ಫಲಾನುಭವಿಗಳ ಪಟ್ಟಿ ತಯಾರಿಸಲು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಮಿಳು ಕಾಲೋನಿಗೆ ಭೇಟಿ. ನಿವಾಸಿಗಳ ಅಸಹಕಾರ, ತೀವ್ರ ವಿರೋಧ. 2026ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಮಿಳು ಕಾಲೋನಿ ನಿವಾಸಿಗಳೊಂದಿಗೆ ಸಭೆ ನಡೆಸಿ ಫಲಾನುಭವಿಗಳ ಸರ್ವೆ ಕಾರ್ಯಕ್ಕೆ ಅವಕಾಶ ನೀಡುವಂತೆ ಸೂಚನೆ. ಆದರೂ ತಮಿಳು ಕಾಲೋನಿ ನಿವಾಸಿಗಳ ಅಸಹಕಾರ, ವಿರೋಧ.

ಅಂತಿಮವಾಗಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ತಮಿಳು ಕಾಲೋನಿ ನಿವಾಸಿಗಳ ತೆರವಿಗೆ ಆಗ್ರಹಿಸಿ ಜಿಲ್ಲಾಡಳಿತದ ವಿರುದ್ಧ ಆಮರಣಾಂತ ಉಪವಾಸ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಮಧ್ಯಪ್ರವೇಶ. ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ, ಆಮರಣಾಂತ ಉಪವಾಸ ಕೈಬಿಡುವಂತೆ ಮನವಿ. ಉಪವಾಸ ಕೈಬಿಡಲು ಕೆ.ಆರ್.ರವೀಂದ್ರ ಒಪ್ಪಿಗೆ. ಉಚ್ಛ ನ್ಯಾಯಾಲಯಕ್ಕೆ ಮಂಡಳಿಯಿಂದ ಅಡ್ವಾನ್ಸ್ ಅಪ್ಲಿಕೇಷನ್ ಸಲ್ಲಿಸಲಾಗಿದೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ದಿಢೀರ್ ವರ್ಷಧಾರೆ: ಕರಾವಳಿ- ಮಲೆನಾಡಿನಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ, ಅ.10ರವರೆಗೆ ಇದೇ ಕಥೆ!
Dharwad ಪದವೀಧರರ ಎಲೆಕ್ಷನ್ ದಂಗಲ್‌; ಕಾಂತಕುಮಾರ್‌ಗೆ ಕಾಂಗ್ರೆಸ್ ಬೆಂಬಲ! ಲಿಂಬಿಕಾಯಿ ವಿಲವಿಲ!