ನೆರೆ ಪರಿಹಾರಕ್ಕಾಗಿ ಸ್ವಂತ ಮನೆ ಕೆಡುವಿದ ಗ್ರಾಪಂ ಸದಸ್ಯೆ!

By Kannadaprabha News  |  First Published Aug 18, 2022, 1:54 PM IST

 ಸರ್ಕಾರದ ಹಣ, ನೆರೆ ಪರಿಹಾರದ ಹಣ ಹೇಗೆ ದುರ್ಬಳಕೆ ಆಗುತ್ತೆ ಎಂಬುದಕ್ಕೆ ಇಲ್ಲಿದೇ ಉದಾಹರಣೆ. ಗ್ರಾಪಂ ಸದಸ್ಯೆಯೊಬ್ಬರು ಗರೆಪರಿಹಾರಕ್ಕಾಗಿ ಸ್ವಂತ ಮನೆಯನ್ನೇ ಕೆಡವಿದ್ದಾಳೆ. ಇದಕ್ಕೆ ಗ್ರಾಮಸ್ಥರೇ ತಕರಾರು ಅರ್ಜಿ ಸಲ್ಲಿಸಿದ್ದಾರೆ.


ಧಾರವಾಡ (ಆ.18) : ನೆರೆ ಹಾನಿ ಪರಿಹಾರದ ಆಸೆಗಾಗಿ ತಮ್ಮ ಚೆನ್ನಾಗಿದ್ದ ಮನೆಯನ್ನೇ ಕೆಡುವಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರೇ ಮುಂದಾಗಿ ಅದಕ್ಕೆ ತಕರಾರು ತೆಗೆದ ಕಾರಣ ಜಿಲ್ಲಾಡಳಿತ ತನಿಖೆಗೆ ಆದೇಶಿದೆ. ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಪಂ ವ್ಯಾಪ್ತಿಯ ಬಿದರಗಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದು ಕೂಡ ಈ ಕೆಲಸವನ್ನು ಮಾಡಿದ್ದು ಮತದಾರರಿಗೆ ನೆರವಾಗಬೇಕಿದ್ದ ಗ್ರಾಪಂ ಸದಸ್ಯೆಯೇ. ಈ ಊರಿನ ಗ್ರಾಮ ಪಂಚಾಯಿತಿ ಸದಸ್ಯೆ ನಾಗವೇಣಿ ಎಂಬುವವರು ತಮ್ಮ ಚೆನ್ನಾಗಿದ್ದ ಮನೆಯನ್ನೇ ಕೆಡವಿದ್ದಾರೆ. ಅದರ ಮುಂದೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಅಲ್ಲದೇ, ತಮ್ಮ ಶಿಫಾರಸು ಬಳಿಕ ಜಿಪಿಎಸ್‌ನಲ್ಲೂ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ತಮ್ಮ ಮನೆ ಮಳೆಗೆ ನೆಲಕಚ್ಚಿದೆ. ತಮಗೆ ಪರಿಹಾರ ನೀಡುವಂತೆ ಕೋರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇವರೇ ಕಾರ್ಮಿಕರನ್ನು ಕೆಲಸಕ್ಕೆ ಹಚ್ಚಿ ಮನೆ ಕೆಡವುತ್ತಿರುವ ಫೋಟೋ ಹಾಗೂ ವಿಡಿಯೋಗಳೆಲ್ಲ ವೈರಲ್‌ ಆಗಿವೆ. ಇದನ್ನು ಕಂಡ ಗ್ರಾಮಸ್ಥರು ಉತ್ತಮ ಸ್ಥಿತಿಯಲ್ಲಿದ್ದ ಮನೆಯನ್ನು ಸದಸ್ಯೆಯೇ ಮುಂದಾಗಿ ಕೆಡುವಿದ್ದು, ಯಾವುದೇ ಕಾರಣಕ್ಕೂ ಪರಿಹಾರ ನೀಡಬಾರದು ಎಂದು ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿ: ಸಚಿವ ಹಾಲಪ್ಪ ಭೇಟಿ

Tap to resize

Latest Videos

ಜಿಪಂಗೂ ದೂರು, ತನಿಖೆಗೆ ಸೂಚನೆ: ಈ ಮನವಿ ಪರಿಗಣಿಸಿರುವ ಜಿಪಂ ಸಿಇಒ ಇದೀಗ ತನಿಖೆಗೆ ಸೂಚನೆ ನೀಡಿದ್ದಾರೆ. ಅದರಂತೆ ಕಂದಾಯ ಹಾಗೂ ಪಂಚಾಯಿತಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ತನಿಖೆ ನಡೆಸಿ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಜಿಪಂ ತಿಳಿಸಿದೆ.

ಆಕ್ರೋಶ: ಅತ್ತ ಮೇ ನಲ್ಲಿ ಸುರಿದ ಮಳೆಗೆ ಕುಸಿದ ಮನೆಗಳಿಗೆ ಪರಿಹಾರ ಕೊಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇನ್ನೂ ಕೆಲ ಅರ್ಹ ಫಲಾನುಭವಿಗಳು ಪರಿಹಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆ ಗ್ರಾಪಂ ಸದಸ್ಯರು, ಅಧಿಕಾರಿಗಳು ತಮ್ಮದೇ ಆಟ ಎಂಬಂತೆ ಚೆನ್ನಾಗಿರುವ ಮನೆಗಳನ್ನು ಬೀಳಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದು ಇದೊಂದೇ ಗ್ರಾಪಂ ಕಥೆಯಲ್ಲ. ಬದಲಿಗೆ ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಇಂತಹ ಬೀಳದ ಮನೆಗಳಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿರಬಹುದು. ಆದಕಾರಣ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಪರಿಹಾರ ವಿತರಿಸಬೇಕು. ಉಳ್ಳವರಿಗೆ ಪರಿಹಾರ ಸಿಗದಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Dharwad; ಮುಂಗಾರು ಮಳೆ 89 ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾನಿ

.ನಾಗವೇಣಿ ಅವರು ಮಳೆಗೆ ಮನೆ ಬಿದ್ದಿದೆ ಎಂದು ಪರಿಹಾರ ಕೊಡಲು ಅರ್ಜಿ ಸಲ್ಲಿಸಿದ್ದರು. ಆದರೆ ತಾವೇ ಸ್ವತಃ ಮನೆ ಬೀಳಿಸಿದ್ದಾರೆ. ಪರಿಹಾರ ಕೊಡಬೇಡಿ ಎಂಬ ತಕರಾರು ಅರ್ಜಿ ಬಂದಿದೆ.

ಯಲ್ಲಪ್ಪ ಗೋಣ್ಣೆನವರ, ತಹಸೀಲ್ದಾರ್‌ ಕಲಘಟಗಿ

ಮುಕ್ಕಲ ಗ್ರಾಪಂ ಸದಸ್ಯೆಯೊಬ್ಬರು ಮನೆ ಬಿದ್ದಿರುವ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ತಿಳಿಸಲಾಗಿದೆ. ತನಿಖೆ ನಡೆಸಿ ವರದಿ ಬಂದ ಬಳಿಕ ಕ್ರಮಕೈಗೊಳ್ಳಲಾಗುವುದು.

ಸುರೇಶ ಇಟ್ನಾಳ, ಸಿಇಒ, ಧಾರವಾಡ ಜಿಪಂ

click me!