ವಿರಾಜಪೇಟೆಯ ನೆಹರು ನಗರದ ಬೃಹತ್ ಬೆಟ್ಟ ಕೊರೆತ: ಭೂಕುಸಿತಕ್ಕೆ ಆಹ್ವಾನ

Published : May 01, 2025, 07:32 PM ISTUpdated : May 01, 2025, 07:35 PM IST
ವಿರಾಜಪೇಟೆಯ ನೆಹರು ನಗರದ ಬೃಹತ್ ಬೆಟ್ಟ ಕೊರೆತ: ಭೂಕುಸಿತಕ್ಕೆ ಆಹ್ವಾನ

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಭೂಕುಸಿತ, ಪ್ರವಾಹ ಸಾಮಾನ್ಯ ವಿಷಯಗಳಂತಾಗಿವೆ. ಮಾನವ ಪ್ರಾಕೃತಿಕ ಮೇಲೆ ಮಾಡಿರುವ ದೌರ್ಜನ್ಯವೇ ಕಾರಣ ಎಂದು ವಿಜ್ಞಾನಿಗಳ ತಂಡ ವರದಿಯನ್ನೂ ನೀಡಿದೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮೇ.01): ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಭೂಕುಸಿತ, ಪ್ರವಾಹ ಸಾಮಾನ್ಯ ವಿಷಯಗಳಂತಾಗಿವೆ. ಮಾನವ ಪ್ರಾಕೃತಿಕ ಮೇಲೆ ಮಾಡಿರುವ ದೌರ್ಜನ್ಯವೇ ಕಾರಣ ಎಂದು ವಿಜ್ಞಾನಿಗಳ ತಂಡ ವರದಿಯನ್ನೂ ನೀಡಿದೆ. ಇದು ಗೊತ್ತಿದ್ದರೂ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುವುದನ್ನು ಮಾತ್ರ ನಿಲ್ಲಿಸಿಲ್ಲ. ಈಗಾಗಲೇ ಕುಸಿದಿರುವ ಬೆಟ್ಟದಲ್ಲೇ ಮತ್ತೆ ಬೆಟ್ಟ ಕೊರೆದು ಹೋಂಸ್ಟೇ ಮಾಡಲು ಹೊರಟಿರುವುದು ಮತ್ತೊಂದು ಅನಾಹುತಕ್ಕೆ ದಾರಿಮಾಡಿಕೊಟ್ಟಂತೆ ಆಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ನೆಹರುಬೆಟ್ಟ, ಅಯ್ಯಪ್ಪಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟಗಳಲ್ಲಿ ಸಾವಿರಾರು ಕುಟುಂಬಗಳು ನಾಲ್ಕಾರು ದಶಕಗಳಿಂದ ನೆಲೆ ನಿಂತು ಜೀವನ ಕಂಡುಕೊಂಡಿವೆ. ಆದರೆ ಈ ಬೆಟ್ಟಗಳಲ್ಲಿ 2019 ರಲ್ಲಿಯೇ ಬಿರುಕು ಬಿಟ್ಟು ಅಲ್ಲಲ್ಲಿ ಭೂಕುಸಿತವೂ ಆಗಿತ್ತು. 

ಇದೀಗ ಮಗ್ಗುಲ ಗ್ರಾಮದ ಭಾಗದಲ್ಲಿ ವ್ಯಕ್ತಿಯೊಬ್ಬರು ಜೆಸಿಬಿ ಬಳಸಿ ಬೃಹತ್ ಪ್ರಮಾಣದಲ್ಲಿ ಬೆಟ್ಟ ಕೊರೆದು ಹೋಂಸ್ಟೇ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಇನ್ನೇನು ಆರಂಭವಾಗಲಿರುವ ಮಳೆಗಾಲದಲ್ಲಿ ಈ ಭಾಗದಲ್ಲಿ ಇರುವ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಕುಸಿತದ ಆತಂಕ ತಂದೊಡ್ಡಿದೆ. ಎತ್ತರವಾದ ಬೆಟ್ಟದಲ್ಲಿ ಜೆಸಿಬಿ ಬಳಸಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊರೆದು ಸಮತಟ್ಟು ಮಾಡಿರುವುದು ಮಳೆಗಾಲದಲ್ಲಿ ಇಡೀ ಬೆಟ್ಟ ಕುಸಿದು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಬೆಟ್ಟವನ್ನು ಅಗೆದು ನೂರಾರು ಲೋಡಿನಷ್ಟು ಮಣ್ಣನ್ನು ತೆಗೆದಿರುವುದರಿಂದ ಬೆಟ್ಟದ ಬಹುತೇಕ ಭಾಗಗಳಲ್ಲಿ ಬಿರುಕು ಮೂಡಿರುವ ಸಾಧ್ಯತೆ ಇದೆ. 

ನಿವೇಶನಕ್ಕಾಗಿ ಸರ್ಕಾರಿ ಜಾಗದಲ್ಲಿ ಕುಳಿತ ಪ್ರತಿಭಟನಾಕಾರರ ಗುಡಿಸಲು ತೆರವು

ಮಳೆ ಶುರುವಾಯಿತ್ತೆಂದರೆ ಬಿರುಕುಗಳಿಗೆ ನೀರು ಹೋಗಿ ಇಡೀ ಬೆಟ್ಟವೇ ಜಾರುವ ಸಾಧ್ಯತೆ ನಿಚ್ಚಳವಾಗಿದೆ. ಇದರಿಂದ ಬೆಟ್ಟದ ತಪ್ಪಲಿನಲ್ಲಿ ಇರುವ ಹತ್ತಾರು ಕುಟುಂಬಗಳು ಮಳೆಗಾಲವನ್ನು ನೆನೆದು ಕಂಗಾಲಾಗಿದ್ದಾರೆ. ಮಳೆ ಶುರುವಾಯಿತ್ತೆಂದರೆ ನಾವು ಎಲ್ಲಿಗೆ ಹೋಗಬೇಕು. ವಯಸ್ಸಾಗಿ ಓಡಾಡಲು ಸಾಧ್ಯವಾಗದೆ ಇರುವ ನಾವು ನಿರಾಶ್ರಿತ ಶಿಬಿರಗಳಿಗೆ ಹೋಗಿ ಬದುಕಲು ಸಾಧ್ಯವೇ ಎಂದು ಸ್ಥಳೀಯರಾದ ಉಷಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈಗ ಬೆಟ್ಟ ಕೊರೆದಿರುವ ಜಾಗದ ಪಕ್ಕದಲ್ಲೇ 2019 ರಲ್ಲೇ ಭೂಕುಸಿತವಾಗಿತ್ತು. ಇದರಿಂದ ಕೆಳಭಾಗದಲ್ಲೇ ಇರುವ ರಸ್ತೆಯೊಂದು ಸಂಪೂರ್ಣ ಮುಚ್ಚಿಹೋಗಿ, ಹತ್ತಾರು ಮನೆಗಳಿಗೆ ಸಂಪರ್ಕ ಬಂದ್ ಆಗಿತ್ತು. 

2019 ರಲ್ಲಿ ಈ ಜಾಗದ ಪಕ್ಕದಲ್ಲೇ ಭೂಕುಸಿತವಾಗಿದ್ದರಿಂದ ಈ ಜಾಗವನ್ನು ಝಕ್ರಿಯಾ ಜೋಸೆಫ್ ಎಂಬುವರು ಬಿಟ್ಟು ಮೈಸೂರಿಗೆ ಹೋದರು. ನಂತರ ಇದನ್ನು ಯಾರೋ ವ್ಯಕ್ತಿಯೊಬ್ಬರು ಕೊಂಡು ಕೊಂಡಿದ್ದು, ಹೋಂಸ್ಟೇ ನಿರ್ಮಿಸುವುದಕ್ಕಾಗಿ ಬೆಟ್ಟವನ್ನು ಸಮತಟ್ಟು ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರು ಜೆಸಿಬಿ ಬಳಸಿ ಹೀಗೆ ಬೆಟ್ಟವನ್ನೆಲ್ಲಾ ಅಗೆದು ಸಮತಟ್ಟು ಮಾಡುತ್ತಿರುವುದು ವಿರಾಜಪೇಟೆ ಮತ್ತು ಸಿದ್ದಾಪುರ ಹೆದ್ದಾರಿ ಬದಿಯಲ್ಲೇ. ಹೆದ್ದಾರಿಯಲ್ಲಿ ಹೋದರೆ ಸಾಕು ಬೆಟ್ಟವನ್ನು ಅಗೆದಿರುವುದು ಕಣ್ಣಿಗೆ ರಾಚುತ್ತದೆ. ಆದರೂ ವಿರಾಜಪೇಟೆ ಪುರಸಭೆ ಅಧಿಕಾರಿಗಳಾಗಲಿ ಅಥವಾ ಆಡಳಿತ ಮಂಡಳಿಯವರಾಗಲಿ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ. 

ಪಾಕಿಸ್ತಾನದ ಪ್ರಜೆಗಳ ಗಡಿಪಾರಿಗೆ ಅಗತ್ಯ ಕ್ರಮ: ಪರಮೇಶ್ವರ್‌ ಸ್ಪಷ್ಟನೆ

ಹೀಗೆ ಕಾಮಗಾರಿ ಮಾಡುತ್ತಿರುವುದನ್ನು ನಾವು ಹೋಗಿ ಪ್ರಶ್ನಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಕೇಳಬೇಕಲ್ಲವೆ ಎಂದು ಸ್ಥಳೀಯರಾದ ಮನು ನಾಣಯ್ಯ ಪ್ರಶ್ನಿಸಿದ್ದಾರೆ. ಏನೇ ಆಗಲಿ ಮಳೆಗಾಲದಲ್ಲಿ ಯಾವ ಬೆಟ್ಟ ಪ್ರದೇಶದಲ್ಲಿ ಭೂಕುಸಿತವಾಗಿ ಬದುಕೇ ಮುಗಿದು ಹೋಗುತ್ತದೆಯೋ ಎನ್ನುವ ಆತಂಕದಲ್ಲಿ ಬದುಕಬೇಕಾಗಿರುವ ವಿರಾಜಪೇಟೆಯ ನೆಹರುನಗರ ಬೆಟ್ಟವನ್ನು ಜೆಸಿಬಿ ಬಳಸಿ ಸಮತಟ್ಟು ಮಾಡಿರುವುದರ ವಿರುದ್ಧ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ