ಬೆಂಗಳೂರಿನಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಪಹಲ್ಗಾಮ್‌ ದುರಂತ ನೆನೆದ‌ ಗಾಯಕ Sonu Nigam!

Published : May 01, 2025, 04:37 PM ISTUpdated : May 02, 2025, 09:17 AM IST
ಬೆಂಗಳೂರಿನಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಪಹಲ್ಗಾಮ್‌ ದುರಂತ ನೆನೆದ‌ ಗಾಯಕ Sonu Nigam!

ಸಾರಾಂಶ

ಬೆಂಗಳೂರಿನ ಕಾರ್ಯಕ್ರಮದಲ್ಲಿ ಕನ್ನಡ ಹಾಡುವಂತೆ ಒತ್ತಾಯಿಸಿದ ವ್ಯಕ್ತಿಯನ್ನು ಸೋನು ನಿಗಮ್ ತರಾಟೆಗೆ ತೆಗೆದುಕೊಂಡರು. ಕನ್ನಡ ಹಾಡುಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ ಅವರು, ಪಹಲ್ಗಾಮ್ ಘಟನೆಯನ್ನು ಉಲ್ಲೇಖಿಸಿ, ಗೌರವಯುತವಾಗಿ ವರ್ತಿಸುವಂತೆ ಕೋರಿದರು. ವಿಶ್ವಾದ್ಯಂತ ಕನ್ನಡ ಅಭಿಮಾನಿಗಳಿಗಾಗಿ ಹಾಡುವುದಾಗಿ ತಿಳಿಸಿದರು.

ಗಾಯಕ ಸೋನು ನಿಗಮ್ ಇತ್ತೀಚೆಗೆ ಬೆಂಗಳೂರಿನಲ್ಲಿರುವ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಹಾಡು ಹಾಡುವ ವೇಳೆ ಓರ್ವ ಹುಡುಗನನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸೋನು ನಿಗಮ್‌ ಅವರು, ಕನ್ನಡ ಹಾಡುಗಳು ಎಂದರೆ ತುಂಬ ಇಷ್ಟ. ಕರ್ನಾಟಕ ಎಂದರೆ ತುಂಬ ಇಷ್ಟ ಎಂದು ಹೇಳುತ್ತಾರೆ. ಅದೇ ಸಮಯಕ್ಕೆ ಓರ್ವ ಹುಡುಗ ಕನ್ನಡದಲ್ಲಿ ಹಾಡಿ ಎಂದು ಗದರಿಸುವ ರೀತಿಯಲ್ಲಿ ಒತ್ತಾಯ ಮಾಡಿದ್ದಾನೆ. ಆಗ ಸೋನು ಅವರು ಪಹಲ್ಗಾಮ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಸೋನು ನಿಗಮ್‌ ಹೇಳಿದ್ದೇನು?
ವೀಡಿಯೊದಲ್ಲಿ ಸೋನು ನಿಗಮ್, "ನಾನು ಎಲ್ಲ ಭಾಷೆಗಳಲ್ಲಿನ ಹಾಡುಗಳನ್ನು ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದವು. ನಾನು ನಿಮ್ಮ ಬಳಿ ಯಾವಾಗ ಬಂದರೂ ಕೂಡ ಬಹಳ ಪ್ರೀತಿಯಿಂದ ಬರುತ್ತೇನೆ. ನಾವು ಪ್ರತಿದಿನ ಇವೆಂಟ್‌ಗಳನ್ನು ಮಾಡುತ್ತೇವೆ, ಆದರೆ ಕರ್ನಾಟಕದಲ್ಲಿ ಎಲ್ಲಿಯಾದರೂ ಕಾರ್ಯಕ್ರಮವಿದ್ದಾಗ, ನಾವು ಬಹಳ ಗೌರವದಿಂದ, ಖುಷಿಯಿಂದ ಬರ್ತೀವಿ. ನೀವೆಲ್ಲರೂ ನಮ್ಮನ್ನು ನಿಮ್ಮ ಕುಟುಂಬ ಎಂಬಂತೆ ಸ್ವೀಕರಿಸಿದ್ದೀರಿ ಎನ್ನೋದು ಇದಕ್ಕೆ ಕಾರಣ" ಎಂದು ಅವರು ಹೇಳಿದರು.

ಪಹಲ್ಗಾಮ್‌ನಲ್ಲಿ ನೆನೆದ ಸೋನು ನಿಗಮ್!‌ 
“ಓರ್ವ ಹುಡುಗ ನನಗೆ ಕನ್ನಡ ಹಾಡು ಹಾಡಿ ಎಂದ. ಅವನು ಹುಟ್ಟುವ ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡುತ್ತಿದ್ದೇನೆ. ಆದರೆ ಆ ಹುಡುಗ 'ಕನ್ನಡ, ಕನ್ನಡ' ಎಂದು ಒರಟಾಗಿ ಬೆದರಿಕೆ ಹಾಕಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ಏನಾಯಿತು ಅಂತ ಗೊತ್ತಿದೆ ಅಲ್ವಾ? ಮೊದಲು ಯಾರು ಮುಂದೆ ನಿಂತಿದ್ದಾರೆ ಎಂದು ಗಮನಿಸಿ. ನಾನು ಕನ್ನಡಿಗರನ್ನು ಪ್ರೀತಿಸುವೆ, ನಿಮ್ಮನ್ನು ಪ್ರೀತಿಸುವೆ" ಎಂದು ಸೋನು ನಿಗಮ್‌ ಹೇಳಿದ್ದಾರೆ.

ಕನ್ನಡದ ಅಭಿಮಾನಿಗೋಸ್ಕರ ಹಾಡುವೆ
ವಿಶ್ವದಾದ್ಯಂತ ಸೋನು ನಿಗಮ್‌ ಹಾಡಿದ ಕನ್ನಡ ಹಾಡುಗಳ ಅಭಿಮಾನಿಗಳು ಇರುತ್ತಾರೆ. ಈ ಬಗ್ಗೆ ಕೂಡ ಅವರು ಮಾತನಾಡಿ, "ನಾನು ವಿಶ್ವದಲ್ಲಿ ಎಲ್ಲೇ ಹೋದರೂ ಕೂಡ, ಕನ್ನಡ ಹಾಡು ಹಾಡ್ತೀನಿ. 14,000 ಜನರು ಇರುವ ಜನಸಮೂಹದಲ್ಲಿ 'ಕನ್ನಡ' ಎಂಬ ಒಂದು ಪದ ಬಂದರೆ ಸಾಕು, ನಾನು ಆ ಒಬ್ಬ ಕನ್ನಡಿಗ ಅಭಿಮಾನಿಗಾಗಿ ಕೆಲವು ಸಾಲುಗಳನ್ನು ಕನ್ನಡದಲ್ಲಿ ಹಾಡುತ್ತೇನೆ. ನಾನು ನಿಮ್ಮನ್ನು ಇಷ್ಟೆಲ್ಲ ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ಆದ್ದರಿಂದ ಸ್ವಲ್ಪ ಗೌರವವಿರಲಿ, ಹೀಗೆಲ್ಲ ಮಾಡಬಾರದು" ಎಂದರು.

ಸೋನು ನಿಗಮ್‌ ವೃತ್ತಿ ಜೀವನ ಯಾವಾಗ ಶುರು ಆಯ್ತು? 
ಇತ್ತೀಚೆಗೆ, ಸೋನು ನಿಗಮ್‌ ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಾಡು ಹಾಡಿದ್ದರು. 1992ರಲ್ಲಿ ʼತಲಾಶ್ʼ ಎಂಬ ಹಿಂದಿ ಧಾರಾವಾಹಿಯ 'ಹಮ್ ತೋ ಚೈಲಾ ಬನ್ ಗಯೆ' ಹಾಡಿನಿಂದ ಸೋನು ನಿಗಮ್‌ ವೃತ್ತಿ ಜೀವನ ಶುರು ಆಯ್ತು. 1990ರ ಆರಂಭದಲ್ಲಿ ಬಾಲಿವುಡ್‌ನಲ್ಲಿ ಹಿನ್ನೆಲೆ ಗಾಯಕರಾಗಿ ವೃತ್ತಿಜೀವನ ಆರಂಭಿಸಿದ ಸೋನು ನಿಗಮ್‌ ಅವರು 'ಸಂದೇಶ್ ಆತೆ ಹೈ' (ಬಾರ್ಡರ್), 'ಯೇ ದಿಲ್ ದೀವಾನಾ' (ಪರದೇಸ್) ಮುಂತಾದ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಎಲ್ಲ ಭಾಷೆಗಳಿಂದಲೂ ಸಾವಿರಾರು ಹಾಡು ಹಾಡಿರುವ ಸೋನು ನಿಗಮ್‌ ಅವರು, ಹಿಂದಿ, ಕನ್ನಡ, ಬೆಂಗಾಲಿ, ಮೈಥಿಲಿ, ಮರಾಠಿ, ಅಸ್ಸಾಂ, ತೆಲುಗು, ತಮಿಳು, ಗುಜರಾತಿ, ಒಡಿಯಾ, ಮಲಯಾಳಂ, ಭೋಜಪುರಿ, ನೇಪಾಳಿ, ಇಂಗ್ಲಿಷ್, ತುಳು, ಮಣಿಪುರಿ ಭಾಷೆಗಳಲ್ಲಿಯೂ ಹಾಡಿದ್ದಾರೆ.

ಪಹಲ್ಗಾಮ್‌ನಲ್ಲಿ ಏನಾಯ್ತು?
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಉಗ್ರರು ಭಾರತದ ಪ್ರವಾಸಿಗರನ್ನು ಗುಂಡು ಹಾಕಿ ಕೊಂದಿದ್ದರು. ಧರ್ಮ ಕೇಳಿ ಕೊಲೆ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಒಟ್ಟಿನಲ್ಲಿ ಈ ಬಗ್ಗೆ ಭಾರತ ತನಿಖೆ ಮಾಡುತ್ತಿದೆ. 

PREV
Read more Articles on
click me!

Recommended Stories

ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್
ಚಿನ್ನಯ್ಯನ ಜಾಮೀನಿಗೆ ಶ್ಯೂರಿಟಿ ನೀಡಲು ಆಗುತ್ತಿಲ್ಲ, ಕಾರಣ ಹೇಳಿದ ಮಟ್ಟಣ್ಣನವರ್