ಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕು. ಎಲ್ಲರಿಗೂ ಬದುಕುವ, ಮುಖ್ಯವಾಹಿನಿಗೆ ಬಂದು ಸಾಧಿಸುವ ಹಕ್ಕು ಇದೆ ಎಂದು ಪ್ರತಿಪಾದಿಸಿದವರು ಡಿ. ದೇವರಾಜ ಅರಸು ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಕಾರವಾರ (ಆ.21) : ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ದೊರೆಯಬೇಕು. ಎಲ್ಲರಿಗೂ ಬದುಕುವ, ಮುಖ್ಯವಾಹಿನಿಗೆ ಬಂದು ಸಾಧಿಸುವ ಹಕ್ಕು ಇದೆ ಎಂದು ಪ್ರತಿಪಾದಿಸಿದವರು ಡಿ. ದೇವರಾಜ ಅರಸು ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ನಗರದ ದೈವಜ್ಞ ಸಭಾಂಗಣದಲ್ಲಿ ಶನಿವಾರ ನಡೆದ ಡಿ. ದೇವರಾಜ ಅರಸು 107ನೇ ಜನ್ಮದಿನಾಚರಣೆ ಮತ್ತು ಜಿಲ್ಲಾಮಟ್ಟದ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಪ್ರತಿ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಬರುವಂತೆ ಆತ್ಮವಿಶ್ವಾಸ ತುಂಬಿದವರು. ರಾಜ್ಯದಲ್ಲಿ ಎಲ್ಲರೂ ಹೊಟ್ಟೆತುಂಬ ಊಟ ಮಾಡುವಂತೆ ಮಾಡಿದರು, ಜೀತ, ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ದಾಸ್ಯದ ಜೀವನವನ್ನು ಕೊನೆಗಾಣಿಸಿದ ಮೇರು ವ್ಯಕ್ತಿ ದೇವರಾಜ ಅರಸು ಆಗಿದ್ದಾರೆ ಎಂದು ಹೇಳಿದರು.
ಕುಟುಂಬ ರಾಜಕಾರಣದಲ್ಲಿ ವಿಫಲರಾದ ನಾಯಕರಿವರು!
undefined
ಮಾಜಿ ಸಚಿವ ಪ್ರಮೋದ ಮಧ್ವರಾಜ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಥಾಪನೆ, ಬಡವರ ಕಲ್ಯಾಣಕ್ಕಾಗಿ, ಹಸಿವುಮುಕ್ತ ಸಮಾಜದ ನಿರ್ಮಾಣಕ್ಕಾಗಿ, ಬಡ ಗೇಣಿದಾರ, ರೈತರಿಗೆ ಉಳುವವನೇ ಹೊಲದೊಡೆಯ ಕಾಯ್ದೆಯಂತೆ ಭೂಮಿ ನೀಡುವಲ್ಲಿ ಶ್ರಮಿವಹಿಸಿದ ಧೀಮಂತ ವ್ಯಕ್ತಿ ದೇವರಾಜ ಅರಸು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಅರಸು ಅವರ ಜೀವನ ನಮಗೆಲ್ಲ ದಾರಿದೀಪವಾಗಿದೆ. ಅವರ ಕೊಡುಗೆಯನ್ನುಂಡ ಫಲಾನುಭವಿಗಳು ನಾವೆಲ್ಲರೂ ಆಗಿದ್ದೇವೆ. ಅವರು ಹಾಕಿಕೊಟ್ಟದಾರಿಯಲ್ಲಿ ನಾವೆಲ್ಲ ನಡೆಯೋಣ. ಅವರಂತೆಯೇ ನಾವೆಲ್ಲ ಸಮಾಜದ ಬಡವರ, ನಿರ್ಗತಿಕರ, ಶೋಷಿತರ, ಮಹಿಳೆ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ನುಡಿದರು.
ಅರಸು ಮನೆತನದ ಅಭಿನೇತ್ರಿ- ಸಾರಿಕಾ ರಾಜೇ ಅರಸ್ ಅಂತರಾಳ
ಧಾರವಾಡದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಂದ್ರಪ್ಪ ಬಕಾಯಿ ಉಪನ್ಯಾಸ ನೀಡಿದರು. ಜಯಾನಂದ ಡೇರೇಕರ್ ಮತ್ತು ಲಕ್ಷ್ಮಣ ಬಕಾಯಿ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವ ಜಿಲ್ಲಾಧಿಕಾರಿ ಕಚೇರಿಯಿಂದ ದೈವಜ್ಞ ಸಭಾಂಗಣದ ವರೆಗೆ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು, ಕಲಾ ತಂಡಗಳು ಪಾಲ್ಗೊಂಡದ್ದವು. ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರಿಯಾಂಗಾ ಎಂ., ಎಸ್‌ಪಿ ಡಾ. ಸುಮನಾ ಪೆನ್ನೇಕರ್, ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ. ಸತೀಶ ಮೊದಲಾದವರು ಇದ್ದರು.