ಈದ್ಗಾದಲ್ಲಿ ಗಣೇಶ ಚತುರ್ಥಿ; ನಾಳೆ ಹಿಂದೂಪರ ಸಂಘಟನೆಗಳ ಹೋರಾಟ

By Kannadaprabha News  |  First Published Aug 21, 2022, 1:22 PM IST

ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಚತುರ್ಥಿ ಆಚರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಸೋಮವಾರ ಪಾಲಿಕೆಗೆ ಮುತ್ತಿಗೆ ಹಾಕಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ.


ಹುಬ್ಬಳ್ಳಿ (ಆ.21): ಇಲ್ಲಿನ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಚತುರ್ಥಿ ಆಚರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಸೋಮವಾರ ಪಾಲಿಕೆಗೆ ಮುತ್ತಿಗೆ ಹಾಕಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ನಗರದ ಮೂರುಸಾವಿರ ಮಠದ ಸಭಾಭವನದಲ್ಲಿ ಶನಿವಾರ ಸಂಜೆ ಸಭೆ ನಡೆಸಿದ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಸೇರಿ ನಗರದ ವಿವಿಧ ಗಣೇಶೋತ್ಸವ ಮಂಡಳಿಗಳು ಈ ತೀರ್ಮಾನ ಕೈಗೊಂಡವು.

ಸರ್ಕಾರವನ್ನೇ ಅಲುಗಾಡಿಸಿದ್ದ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮತ್ತೆ ವಿವಾದ!

Latest Videos

undefined

ಸಮಿತಿಯ ಸಂಚಾಲಕ ಹನುಮಂತಸಾ ನಿರಂಜನ(Hanumanta Niranjan), ‘ಅಂದು ಬೆಳಗ್ಗೆ ದುರ್ಗದಬೈಲಿ(Durgadbailu)ನಿಂದ ದಾಜಿಬಾನ್‌ ಪೇಟೆ(Daajibanpete) ಮೂಲಕವಾಗಿ ಮೆರವಣಿಗೆ ನಡೆಸಿ ಪಾಲಿಕೆ ತಲುಪುತ್ತೇವೆ. ಭಜನೆ ಮಾಡುತ್ತ, ಗಣೇಶೋತ್ಸವ ಆಚರಣೆಗೆ ಸಹಿ ಸಂಗ್ರಹ ಮಾಡಲಾಗುವುದು. ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಒಂದು ಗಂಟೆ ಕಾಲ ಅಲ್ಲಿ ಭಜನೆ ನಡೆಸಲಾಗುವುದು. ಸ್ಪಷ್ಟನಿರ್ಧಾರವನ್ನು ಪ್ರಕಟಿಸುವಂತೆ ಆಯುಕ್ತರಿಗೆ ಕೋರಲಾಗುವುದು’ ಎಂದರು.

‘ಈದ್ಗಾ ಮೈದಾನ(Eedga Ground)ದಲ್ಲಿ ಗಣೇಶೋತ್ಸವ(Ganeshotsava) ಆಚರಿಸಲು ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮೂರು ದಿನಗಳ ಅವಕಾಶ ಕೋರಲಾಗಿತ್ತು. ಆದರೆ, ಪಾಲಿಕೆ ನಮಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿದೆ. ಹೆಸ್ಕಾಂ, ಪೊಲೀಸ್‌ ಸೇರಿ ಇತರೆ ಇಲಾಖೆಗಳಿಂದ ಅನುಮತಿ ಪಡೆದಲ್ಲಿ ಪಾಲಿಕೆಯಿಂದ ಪರವಾನಗಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಸ್ಪಷ್ಟಉತ್ತರವನ್ನು ನಾವು ಒಪ್ಪುವುದಿಲ್ಲ. ಕಾನೂನು ಚೌಕಟ್ಟಿನಲ್ಲಿಯೆ ಹೋರಾಟ ಮಾಡಲಾಗುವುದು. ಸರ್ಕಾರ ಮಧ್ಯಪ್ರವೇಶ ಮಾಡಿ ಅನುಮತಿ ನೀಡಬೇಕು’ ಎಂದರು.

ಶ್ರೀರಾಮ ಸೇನೆ(Sriramsene)ಯ ಜಿಲ್ಲಾಧ್ಯಕ್ಷ ಅಣ್ಣಪ್ಪ ದೀವಟಗಿ, ‘ಗಣೇಶೋತ್ಸವಕ್ಕೆ ಸರ್ಕಾರ, ಮಹಾನಗರ ಪಾಲಿಕೆ ಒಪ್ಪಿಗೆ ನೀಡುವವರೆಗೆ ನಾವು ಹಂತ​ಹಂತವಾಗಿ ಹೋರಾಟ ಮಾಡುತ್ತೇವೆ. ಒಪ್ಪಿಗೆ ನೀಡದಿದ್ದರೂ ನಾವು ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಸಿದ್ಧರಿದ್ದೇವೆ. ಹಿಂದೂಗಳ ಭಾವನೆಗೆ ಸ್ಪಂದಿಸಿ ಚತುರ್ಥಿ ಆಚರಣೆಗೆ ಅನುವು ಮಾಡಿಕೊಡಬೇಕು’ ಎಂದು ಒತ್ತಾಯ ಮಾಡಿದರು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸೋಮವಾರದ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಂಘಟಿಸಲು ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಮೀರುವ ವರ್ತನೆ ತೋರಬಾರದು ಎಂದು ಮುಖಂಡರು ಸೂಚಿಸಿದರು. ಸಹಿ ಸಂಗ್ರಹಿಸಿ ಪಾಲಿಕೆಗೆ ಸಲ್ಲಿಸಲು ತೀರ್ಮಾನಿಸಲಾಯಿತು.

ಹುಬ್ಬಳ್ಳಿ ಈದ್ಗಾ ಮೈದಾನಕ್ಕೂ ಕಾಲಿಟ್ಟ ಗಣೇಶೋತ್ಸವ ವಿವಾದ

ಈ ವೇಳೆ ಪರಶುರಾಮ ಕೊಟಗಿ, ವಿಶ್ವನಾಥ ಕುಲಕರ್ಣಿ, ರಾಘವೇಂದ್ರ ಕಟಾರೆ, ಸಾಗರ ಪವಾರ, ವಿಶ್ವ ಹಿಂದೂ ಪರಿಷತ್‌ ಹುಬ್ಬಳ್ಳಿ ಮಹನಗರದ ಸಹ ಸಂಚಾಲಕ ರಾಜು ಪಾಚಂಗಿ, ಬಜರಂಗ ದಳದ ವಿದ್ಯಾನಗರದ ಸಹ ಸಂಚಾಲ ಚಿದಾನಂದ ಗುಮಗೋಳಮಠ, ರಾಜಶ್ರೀ ಜಡಿ, ಯಶೋಧಾ ತಾಂಬೆ ಸೇರಿ ಇತರರಿದ್ದರು.

click me!