ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕು, ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಚಿಕ್ಕಮಗಳೂರು (ಅ.13): ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕು, ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಬಿಕ್ಕಿಮನೆಯ ನೇಚರ್ ಕನ್ಸರ್ವೇಷನ್ ಟ್ರಸ್ಟ್ ಆಯೋಜಿಸಿದ್ದ ‘ಭೂಮಿ ಉಳಿದರೆ ನಾವು ಉಳಿದೇವು’, ‘ಭ್ರಷ್ಟಾಚಾರ ಮುಕ್ತವಾದರೆ ದೇಶ ಉಳಿದೀತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಗಳು 10 ಪರ್ಸೆಂಟ್‌ನಿಂದ 50 ಪರ್ಸೆಂಟ್‌ಗೆ ಏರಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ವಿಷಯ. ಯುವಕರು ಎಚ್ಚೆತ್ತು ತಡೆಗಟ್ಟದೇ ಇದ್ದಲ್ಲಿ ಭಾರತವು ಶಾಂತಿಯುತವಾಗಿ, ಜಾತ್ಯತೀತವಾಗಿ ಹೊಂದಾಣಿಕೆಯಿಂದ ನಡೆದುಕೊಂಡು ಹೋಗುವುದು ಅಸಾಧ್ಯ. ಉತ್ತಮ ಸಮಾಜ ನಿರ್ಮಾಣ ಮಾಡಲು ನಮ್ಮಲ್ಲಿ ಮಾನವೀಯ ಮೌಲ್ಯಗಳು ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಹಲವರು ಪ್ರಚಾರಕ್ಕಾಗಿ ಮಾನವೀಯತೆ ತೋರುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ದಲಿತ ಸಂಘಟನೆಗಳಿಂದ ಬಾಳೆಹೊನ್ನೂರು ಚಲೋ ಬೃಹತ್ ಜಾಥಾ
ನಡತೆ ಹೇಗಿರಬೇಕು ಎಂದು ಯೋಚಿಸಬೇಕು. ಉತ್ತಮ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಮಾಜವನ್ನು ಬದಲಾಯಿಸಲು ಮುಂದಾಗಬೇಕು. ಚರಿತ್ರೆ ಅವಲೋಕಿಸಬೇಕು. ಬದಲಾವಣೆ ಸಾಧ್ಯ ಇದೆ. ಮಕ್ಕಳಿಗೆ ಮೌಲ್ಯಗಳನ್ನು ಹೇಳಿಕೊಡುವವರು ಇಲ್ಲ. ಶಾಲೆಗಳಲ್ಲಿ ನೀತಿ ಪಾಠ ಬೋಧನೆ ಇಲ್ಲ. ಹಿಂದಿನ ಕಾಲದಲ್ಲಿ ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಕಲಿಸುತ್ತಿದ್ದರು. ಈಗ ಅದು ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೈ ತುಂಬಾ ಸಂಬಳ ಪಡೆಯುತ್ತಾರೆ. ಆದರೂ, ಹಲವರು ಲಂಚಕ್ಕೆ ಕೈ ಚಾಚುತ್ತಾರೆ. ಆಸ್ಪತ್ರೆ ಸಹಿತ ಎಲ್ಲ ಕಡೆ ಲಂಚದ ಹಾವಳಿ ಇದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಲಂಚಕ್ಕೆ ಕಡಿವಾಣ ಹಾಕಬೇಕು. ಮನುಷ್ಯರ ದುರಾಸೆಗಳಿಂದ ಪರಿಸರ ಯಾವ ರೀತಿ ನಾಶವಾಗುತ್ತಿದೆ ಅರ್ಥ ಮಾಡಿಕೊಳ್ಳಬೇಕು. ಪರಿಸರವನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು. ಬಿಕ್ಕಿಮನೆಯ ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಸುಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಟಿ. ಜಯದೇವ್ ಉಪಸ್ಥಿತರಿದ್ದರು.
ಸ್ವತಂತ್ರ ಮಾಧ್ಯಮದಿಂದ ಮಾತ್ರ ಬದಲಾವಣೆ: ಸ್ವತಂತ್ರ ಮಾಧ್ಯಮದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಸುಪ್ರೀಂ ಕೋರ್ಚ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಮತ್ತು ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಜಂಟಿಯಾಗಿ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ‘ಮಾಧ್ಯಮದ ಸ್ವಾತಂತ್ರ್ಯ: ಸ್ವರೂಪ ವ್ಯಾಪ್ತಿ ಮತ್ತು ಅದರ ಇತಿಮಿತಿಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
Chikkamagaluru: ಶ್ರೀ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ
ವಿದ್ಯೆಯಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕಾನೂನುಬಾಹಿರವಾಗಿ ಅನೈತಿಕ ಮಾರ್ಗಗಳಲ್ಲಿ ದುಡ್ಡು ಸಂಪಾದಿಸಿದ್ದರೂ ಅವರನ್ನು ಶ್ರೀಮಂತರೆಂದು ಕರೆದು, ಮನ್ನಣೆ ನೀಡಲಾಗುತ್ತಿದೆ. ಈ ಭಾವನೆಯನ್ನು ಬದಲಾಯಿಸಲು ಮಾಧ್ಯಮಗಳು ಸಮಾಜದಲ್ಲಿ ತಿಳುವಳಿಕೆ ಮೂಡಿಸಬೇಕು. ಕಾನೂನು ವಿಶ್ವವಿದ್ಯಾಲಯದ ಉಪನ್ಯಾಸಕ ಸತೀಶ್ ಗೌಡ ಮಾತನಾಡಿ, ಮಾಧ್ಯಮಗಳು ತುಸು ಎಡವಿದರೂ ಅದನ್ನು ನಿಯಂತ್ರಿಸುವ ಕಾನೂನುಗಳನ್ನು ತರಲು ಸರ್ಕಾರಗಳು ಕಾಯುತ್ತಿರುತ್ತವೆ ಎಂದರು.