ಶಿರಸಿ- ಕುಮಟಾ ಹೆದ್ದಾರಿ : 9 ಸಾವಿರ ಮರಗಳ ಮಾರಣಹೋಮ

By Kannadaprabha NewsFirst Published Oct 13, 2020, 8:20 AM IST
Highlights

ಶಿರಸಿ ಕುಮಟಾ ಹೆದ್ದಾರಿ ನಿರ್ಮಾಣದ ಉದ್ದೇಶದಿಂದ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. 

ವರದಿ : ಮಂಜುನಾಥ ಸಾಯಿಮನೆ

ಶಿರಸಿ (ಅ.13):  ಶಿರಸಿ- ಕುಮಟಾ ರಸ್ತೆಯ ಇಕ್ಕೆಲಗಳಲ್ಲಿರುವ 9 ಸಾವಿರಕ್ಕೂ ಅಧಿಕ ಮರಗಳ ಮಾರಣಹೋಮಕ್ಕೆ ಅಂತಿಮ ಕ್ಷಣದ ಸಿದ್ಧತೆ ನಡೆದಿದೆ. ಸರ್ಕಾರದಿಂದ ಅನುಮತಿಯೂ ಲಭಿಸಿದ್ದು, ಕಟಾವಿಗಾಗಿ ಮರಗಳಿಗೆ ಸಂಖ್ಯೆ ನಮೂದಿಸಲಾಗಿದೆ.

ಶಿರಸಿ- ಕುಮಟಾ ರಾಜ್ಯ ಹೆದ್ದಾರಿ 69, ಈಗ ಭಾರತಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದೆ. ಈ ಹಿಂದಿದ್ದ 10 ಮೀ. ಅಗಲದ ರಸ್ತೆ ಇನ್ನು 18 ಮೀಟರ್‌ಗೆ ವಿಸ್ತಾರಗೊಳ್ಳಲಿದೆ. ಈ ಕಾಮಗಾರಿ ಆರಂಭಿಸುವ ಸಲುವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಯೂ ಆದೇಶಿಸಿದ್ದಾರೆ. ರಸ್ತೆ ಕಾಮಗಾರಿ ಮೊದಲ ಹಂತವಾಗಿ ರಸ್ತೆ ಬದಿಯ ಈ ಮರಗಳನ್ನು ತೆರವುಗೊಳಿಸುವ ಕಾರ್ಯ ಆರಂಭಗೊಳ್ಳಲಿದೆ.

ರಾಜ್ಯದ 10,110 ಕಿ.ಮೀ ಜಿಲ್ಲಾ ರಸ್ತೆಗಳಿಗೆ ಹೆದ್ದಾರಿ ಭಾಗ್ಯ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡುವ ಸಲುವಾಗಿ ಪರ ವಿರೋಧಗಳ ಚರ್ಚೆ ಕೂಡ ಹಿಂದೆ ನಡೆದಿದೆ. ಮುಖ್ಯವಾಗಿ ಇಲ್ಲಿಯ ಅರಣ್ಯ ಸಂಪತ್ತು ನಾಶವಾಗುವ ಬಗ್ಗೆ ಜಿಲ್ಲೆಯ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ವಿಸ್ತರಣೆ, ನಿರ್ಮಾಣಕ್ಕೆ ಒಪ್ಪಿಗೆ ಲಭಿಸಿದೆ. ಶಿರಸಿ ತಾಲೂಕಿನ ಪ್ರದೇಶದ ರಸ್ತೆ ವಿಸ್ತರಣೆ ಮೊದಲು ನಡೆಯಲಿದೆ ಎಂಬ ಮಾತು ಕೇಳಿಬಂದಿದೆ. ಈ ರಸ್ತೆ ಎರಡು ಅರಣ್ಯ ಉಪ ವಿಭಾಗದ ಮೂಲಕ ಹಾದು ಹೋಗಿದೆ. ಶಿರಸಿಯಿಂದ ಕೆರೆ ಹನುಮಂತಿವರೆಗಿನ 8 ಕಿ.ಮೀ. ಪ್ರದೇಶ ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿದ್ದರೆ, ಕೆರೆ ಹನುಮಂತಿಯಿಂದ ದೇವಿಮನೆ ಘಾಟ್‌ ಪ್ರದೇಶದವರೆಗಿನ 24 ಕಿ.ಮೀ. ಜಾನ್ಮನೆ ಅರಣ್ಯ ವಿಭಾಗಕ್ಕೆ ಒಳಪಡುತ್ತದೆ. ರಸ್ತೆ ನಿರ್ಮಾಣದ ಕುರಿತಂತೆ ಕಳೆದ ಎರಡು ತಿಂಗಳ ಹಿಂದೆ ಅರಣ್ಯ ಇಲಾಖೆ ಸಮೀಕ್ಷೆ ನಡೆಸಿ ಕಟಾವು ಮಾಡಬೇಕಾದ ಮರಗಳ ಸಂಖ್ಯೆಯನ್ನು ಮುಖ್ಯ ಕಚೇರಿಗೆ ಸಲ್ಲಿಸಿತ್ತು. ಈಗ ಕಟಾವಿಗೆ ಒಪ್ಪಿಗೆಯೂ ದೊರೆತಿದೆ.

ಕಟಾವು ಮಾಡಬೇಕಾದ ಮರಗಳನ್ನು ಅರಣ್ಯ ಇಲಾಖೆ ಗಾತ್ರದ ಆಧಾರದಲ್ಲಿ 7 ಹಂತದಲ್ಲಿ ಪಟ್ಟಿಮಾಡಿದೆ. ಶಿರಸಿ ತಾಲೂಕಿನಲ್ಲಿ ಒಟ್ಟು 5702 ಮರಗಳನ್ನು ಗುರುತಿಸಲಾಗಿದೆ. 30 ಸೆಂ.ಮೀ.ಗಿಂತ ಕಡಿಮೆ ಸುತ್ತಳತೆಯ 2139 ಮರಗಳು, 31ರಿಂದ 60 ಸೆಂ.ಮೀ. ಅಳತೆಯ 2427 ಮರಗಳು, 61ರಿಂದ 90 ಸೆಂ.ಮೀ. ವ್ಯಾಪ್ತಿಯ 718 ಮರಗಳು, 91ರಿಂದ 120 ಸೆಂ.ಮೀ. ವ್ಯಾಪ್ತಿಯ 253 ಮರಗಳು, 121ರಿಂದ 153 ಸೆಂ.ಮೀ. ಸುತ್ತಳತೆಯ 93 ಮರಗಳು ಮತ್ತು 150 ಸೆಂ.ಮೀ.ಗಿಂತ ಅಧಿಕ ಸುತ್ತಳತೆ ಹೊಂದಿದ 72 ಮರಗಳನ್ನು ಕಟಾವಿಗೆ ಗುರುತಿಸಲಾಗಿದೆ. ಇದೇ ಪರಿಸ್ಥಿತಿ ಜಾನ್ಮನೆ ಅರಣ್ಯ ವಿಭಾಗದಲ್ಲಿದೆ. ಇಲ್ಲಿ ಒಟ್ಟು 4 ಸಾವಿರ ಮರಗಳನ್ನು ಗುರುತು ಹಾಕಲಾಗಿದೆ.

ಜಾತಿವಾರು ಮರಗಳು ಕಡಿಮೆ

ಈ ಎರಡೂ ಅರಣ್ಯ ವಿಭಾಗಲ್ಲಿ ಕಟಾವಿಗೆ ಗುರುತಿಸಲಾದ ಮರಗಳಲ್ಲಿ ಉತ್ತಮ ಜಾತಿ ಮರಗಳ ಸಂಖ್ಯೆ ಕಡಿಮೆ ಇದೆ. ರಸ್ತೆ ಪಕ್ಕದಲ್ಲಿ ನೆಟ್ಟಅಕೆಶಿಯಾ, ನೀಲಗಿರಿ ಮರಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಜಾನ್ಮನೆ ಅರಣ್ಯ ವಲಯದಲ್ಲಿ ಬಸುರಿ, ಬನಾಟೆ, ಅಕ್ಕರಕಲು, ಹೈಗ ಇನ್ನಿತರ ಮರಗಳ ಸಂಖ್ಯೆ ಜಾಸ್ತಿ ಇದೆಯಾದರೂ 30ರಿಂದ 40 ಸೆಂ.ಮೀ. ವ್ಯಾಪ್ತಿಯಲ್ಲಿವೆ. ಆದರೆ, 150 ಸೆಂ.ಮೀ.ಗಿಂತ ಜಾಸ್ತಿ ವಿಸ್ತೀರ್ಣ ಹೊಂದಿರುವ ಮರಗಳ ಪಟ್ಟಿಯಲ್ಲಿ ಅಕೇಶಿಯಾ, ಗೇರು, ಮಾವು ಇನ್ನಿತರ ಗಿಡಗಳೇ ಜಾಸ್ತಿ ಇದ್ದುದು ಸ್ವಲ್ಪ ಸಮಾಧಾನಕರ ಸಂಗತಿ.

ಶಿರಸಿ ಕುಮಟಾ ರಸ್ತೆಯಲ್ಲಿ 18 ಮೀ. ವ್ಯಾಪ್ತಿಯಲ್ಲಿರುವ ಮರಗಳ ಕಟಾವಿಗೆ ಈಗಾಗಲೇ ಸರ್ಕಾರದಿಂದ ಅನುಮತಿ ಲಭಿಸಿದೆ. ಕತ್ತರಿಸುವ ಮರಗಳ ಬದಲಿ ಗಿಡಗಳನ್ನು ನಾವು ಉತ್ಪಾದಿಸಿ ಅರಣ್ಯ ಜಾಗದಲ್ಲಿ ನೆಡಲಿದ್ದೇವೆ.

- ಎಸ್‌. ಜಿ. ಹೆಗಡೆ, ಡಿಎಫ್‌ಒ, ಶಿರಸಿ.

click me!