ಗ್ರಾಮಗಳ ಅಭಿವೃದ್ಧಿಗೆ ಪಂಚಾಯಿತಿಗಳೇ ಸ್ಥಳೀಯ ಸರ್ಕಾರಗಳು. ಅವುಗಳ ಮೂಲಕವೇ ಜನರ ಎಲ್ಲಾ ಅಭಿವೃದ್ಧಿ ಆಗಬೇಕು. ಆದರಿಲ್ಲಿ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯೇ ಲಕ್ಷ, ಲಕ್ಷ ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡ ಪರಿಣಾಮ ಕಳೆದ 15 ದಿನಗಳಿಂದ ಕತ್ತಲೆಯಲ್ಲಿ ಕಾಲ ದೂಡುತ್ತಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.01): ಗ್ರಾಮಗಳ ಅಭಿವೃದ್ಧಿಗೆ ಪಂಚಾಯಿತಿಗಳೇ ಸ್ಥಳೀಯ ಸರ್ಕಾರಗಳು. ಅವುಗಳ ಮೂಲಕವೇ ಜನರ ಎಲ್ಲಾ ಅಭಿವೃದ್ಧಿ ಆಗಬೇಕು. ಆದರಿಲ್ಲಿ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯೇ ಲಕ್ಷ, ಲಕ್ಷ ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡ ಪರಿಣಾಮ ಕಳೆದ 15 ದಿನಗಳಿಂದ ಕತ್ತಲೆಯಲ್ಲಿ ಕಾಲ ದೂಡುತ್ತಿದೆ. ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರ ಯಾವುದೇ ಕೆಲಸಗಳೂ ಆಗದೆ ಜನರು ಪರದಾಡುತ್ತಿದ್ದಾರೆ. ಹೌದು ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿಯ ದುಃಸ್ಥಿತಿ. ಹತ್ತಾರು ಗ್ರಾಮಗಳನ್ನು ಹೊಂದಿರುವ ದೊಡ್ಡ ಗ್ರಾಮ ಪಂಚಾಯಿತಿ ಆಗಿದ್ದು, ಉತ್ತಮ ಆದಾಯದ ಮೂಲಗಳೂ ಇವೆ.
undefined
ಆದರೂ ಬರೋಬ್ಬರಿ 9.91 ಲಕ್ಷ ರೂಪಾಯಿಯನ್ನು ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದೆ. ಕಳೆದ ನಾಲ್ಕೈದು ತಿಂಗಳಿನಿಂದ ವಿದ್ಯುತ್ ಬಿಲ್ಲನ್ನು ಪಾವತಿಸದ ಪರಿಣಾಮ ಚೆಸ್ಕಾ ಇಲಾಖೆ ಪಂಚಾಯಿತಿ ಕಟ್ಟಡದ ಫ್ಯೂಜ್ ಅನ್ನೇ ಕಿತ್ತುಕೊಂಡು ಹೋಗಿದ್ದು ಪಂಚಾಯಿತಿಗೆ ಕತ್ತಲೆ ಆವರಿಸಿದೆ. ಸ್ವತಃ ಪಿಡಿಓ ಕೂಡ ಏನಾದರೂ ಬರೆಯಬೇಕೆಂದರೂ ಸಿಬ್ಬಂದಿಯಿಂದ ಮೊಬೈಲ್ ಟಾರ್ಚ್ ಹಾಕಿಸಿ ಬರೆಯಬೇಕಾಗಿದೆ. ಹೊರಗಿನಿಂದ ಯಾರಾದರೂ ಬಂದರೆಂದರೆ ಸಿಬ್ಬಂದಿಗೆ ಕೂಡಲೇ ಮೊಬೈಲ್ ಟಾರ್ಚ್ ಆಫ್ ಮಾಡುವಂತೆ ನಾಚಿಕೆಪಟ್ಟುಕೊಂಡು ಹೇಳುವಂತಾಗಿದೆ. ಏತಕ್ಕಾಗಿ ಇಷ್ಟೊಂದು ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದ್ದೀರಾ?
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಹಕರಿಸಿ: ಶಾಸಕ ಸಿ.ಎಸ್.ನಾಡಗೌಡ
ಪಂಚಾಯಿತಿಗೆ ಆದಾಯವಿಲ್ಲವೇ ಎಂದು ಪಿಡಿಓ ಅವರನ್ನು ಕೇಳಿದರೆ, ನಾನು ಜನವರಿ ತಿಂಗಳಿನಲ್ಲಿ ಈ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಆ ಸಮಯಕ್ಕೆ ಏಳ ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಲಾಗಿತ್ತು. ಸಂಗ್ರಹವಾಗುತ್ತಿರುವ ತೆರಿಗೆ ಹಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿದ್ಯುತ್ ಬಿಲ್ಲನ್ನು ಪಾವತಿಸುತ್ತಿದ್ದೇವೆ. ಆದರೆ ಬೀದಿ ದೀಪ, ಕುಡಿಯುವ ನೀರಿನ ಮೋಟಾರ್ ಗಳ ಬಿಲ್ಲು ಸೇರಿದಂತೆ ತಿಂಗಳಿಗೆ 1.70 ಲಕ್ಷದಿಂದ 2 ಲಕ್ಷದವರೆಗೆ ವಿದ್ಯುತ್ ಬಿಲ್ಲು ಬರುತ್ತದೆ. ಹೀಗಾಗಿ ಅದು ಜಾಸ್ತಿಯಾಗುತ್ತಲೇ ಇದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೂ ಕೂಡಲೇ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿ ತೆರಿಗೆ ಸಂಗ್ರಹಿಸುತ್ತೇವೆ.
ಆ ಹಣದಲ್ಲಿ ವಿದ್ಯುತ್ ಬಿಲ್ಲನ್ನು ಪಾವತಿಸಿ ಪಂಚಾಯಿತಿಗೆ ವಿದ್ಯುತ್ ಸಂಪರ್ಕ ಕೊಡಲು ನಿರ್ಧರಿಸಿದ್ದೇವೆ ಎಂದು ಪಿಡಿಓ ಅಂಜನಾದೇವಿ ಹೇಳಿದ್ದಾರೆ. ಆದರೆ ಅಂಜನಾದೇವಿಯವರ ಈ ಮಾತಿಗೆ ಪಂಚಾಯಿತಿ ಸದಸ್ಯ ಕೆರಳಿ ಕೆಂಡವಾಗಿದ್ದಾರೆ. ತೆರಿಗೆ ಸಂಗ್ರಹಕ್ಕೆ ಸರಿಯಾಗಿ ಕ್ರಮ ವಹಿಸುತ್ತಿಲ್ಲ, ಬರಬೇಕಾಗಿರುವ ತೆರಿಗೆ ಬರದೇ ಇರುವುದರಿಂದ ಪಂಚಾಯಿತಿ ಆದಾಯಕ್ಕೆ ಕತ್ತರಿ ಬಿದ್ದಿದ್ದು, ವಿದ್ಯುತ್ ಬಿಲ್ಲು ಕಟ್ಟದೆ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಪಂಚಾಯಿತಿ ಸದಸ್ಯ ಅರುಣ್ ರಾವ್ ಸುವರ್ಣ ನ್ಯೂಸ್ ಮುಂದೆ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಸಂಗ್ರಹಿಸುತ್ತಿರುವ ತೆರಿಗೆ ಹಣವನ್ನು ತೆರಿಗೆ ಸಂಗ್ರಹಕಾರರು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸದಸ್ಯ ಬಿ.ಡಿ. ಅಣ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬಿಲ್ಲನ್ನು ಕಟ್ಟಲಾಗದ ಸ್ಥಿತಿ ಬಂದಿರುವುದಕ್ಕೆ ಪಂಚಾಯಿತಿಯ ಅಧ್ಯಕ್ಷರೇ ನೇರ ಕಾರಣ ಎಂದು ಪಂಚಾಯಿತಿ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮದಲಾಪುರ ಸೇರಿದಂತೆ ಕೆಲವು ಹಲವು ಕಡೆಗಳಲ್ಲಿ ಅನಧಿಕೃತವಾಗಿ ವ್ಯಾಪಾರ ಮಳಿಗೆಗಳನ್ನು ಮಾಡಲಾಗಿದೆ. ಕೋಳಿ ಅಂಗಡಿಗಳನ್ನು ನಡೆಸಲಾಗುತ್ತಿದೆ. ಇದ್ಯಾವುದರ ತೆರಿಗೆಯನ್ನು ಸಂಗ್ರಹಿಸಲು ಸ್ವತಃ ಅಧ್ಯಕ್ಷರೇ ಬಿಡುತ್ತಿಲ್ಲ ಇವೆಲ್ಲವುಗಳ ಪರಿಣಾಮ ಪಂಚಾಯಿತಿ ಆದಾಯಕ್ಕೆ ಕುತ್ತು ಬಂದಿದೆ.
ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ?: ಎಂ.ಬಿ.ಪಾಟೀಲರೋ? ಶಿವಾನಂದ ಪಾಟೀಲರೋ ಎಂಬ ಕುತೂಹಲ
ಜೊತೆಗೆ ಅಧಿಕೃತವಾಗಿರುವ ಮೀನು ಮಾಂಸದ ಅಂಗಡಿಗಳನ್ನು ಮಾರ್ಚ್ ತಿಂಗಳಲ್ಲಿ ಹರಾಜು ಮಾಡಬೇಕಾಗಿತ್ತು. ಅಧ್ಯಕ್ಷರು ಅದನ್ನು ಮಾಡಲು ಬಿಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಪಂಚಾಯಿತಿ ಆದಾಯಕ್ಕೆ ಕುತ್ತು ಬಂದು ವಿದ್ಯುತ್ ಬಿಲ್ಲನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ಹಮೀದ್ ಗಂಭೀರ ಆರೋಪ ಮಾಡಿದ್ದಾರೆ. ನೂತನ ಶಾಸಕ ಡಾ. ಮಂತರ್ ಗೌಡ ಅವರನ್ನು ಕೇಳಿದರೆ, ಮೊದಲು ವಿದ್ಯುತ್ ಬಿಲ್ಲು ಪಾವತಿಸಿ ಸಮಸ್ಯೆ ಸರಿಪಡಿಸುವಂತೆ ಸಿಇಓಗೆ ಸೂಚಿಸುತ್ತೇನೆ ಎಂದಿದ್ದಾರೆ. ಏನೇ ಆಗಲಿ, ಪಂಚಾಯಿತಿ ಆಡಳಿತ ಮಂಡಳಿಯ ಕಿತ್ತಾಟದಿಂದಾಗಿ ಪಂಚಾಯಿತಿಗೆ ವಿದ್ಯುತ್ ಇಲ್ಲದೆ ಸಾರ್ವಜನಿಕರು ತಮ್ಮ ಕೆಲಸಗಳಾಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ.