ಮಳೆಗಾಲ ಕಾಲಿಡುತ್ತಿದ್ದಂತೇ ಜೂನ್ ತಿಂಗಳಿಂದ ನಿಯಮದ ಪ್ರಕಾರ ಮೀನುಗಾರಿಕೆಯೂ ಸ್ಥಗಿತಗೊಂಡಿದೆ. ಹೀಗಾಗಿ ಇಷ್ಟು ದಿನಗಳ ಕಾಲ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳೆಲ್ಲವೂ ಬಂದರಿನಲ್ಲಿ ಲಂಗರು ಹಾಕಿವೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಜೂ.01): ಮಳೆಗಾಲ ಕಾಲಿಡುತ್ತಿದ್ದಂತೇ ಜೂನ್ ತಿಂಗಳಿಂದ ನಿಯಮದ ಪ್ರಕಾರ ಮೀನುಗಾರಿಕೆಯೂ ಸ್ಥಗಿತಗೊಂಡಿದೆ. ಹೀಗಾಗಿ ಇಷ್ಟು ದಿನಗಳ ಕಾಲ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳೆಲ್ಲವೂ ಬಂದರಿನಲ್ಲಿ ಲಂಗರು ಹಾಕಿವೆ. ಇದರ ಜತೆ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಭೂ ಕುಸಿತ, ಶಾಲೆಗಳ ರಿಪೇರಿ, ಚರಂಡಿಗಳ ಸ್ವಚ್ಛತೆ ಮುಂತಾದವುಗಳ ಕುರಿತು ಅಧಿಕಾರಿಗಳ ಸಭೆಗಳನ್ನು ನಡೆಸಲಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು, ಮೀನುಗಳ ಸಂತಾನೋತ್ಪತ್ತಿಯ ದೃಷ್ಠಿಯಿಂದ ಜೂನ್ ತಿಂಗಳಿಂದ ಎರಡು ತಿಂಗಳ ಕಾಲ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳೆಲ್ಲವೂ ಈಗಾಗಲೇ ಬಂದರಿನಲ್ಲಿ ಲಂಗರು ಹಾಕಿವೆ. ಇನ್ನು ಮಳೆಗಾಲ ಕೂಡಾ ಪ್ರಾರಂಭಗೊಂಡಿರುವುದರಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದೆ. ಭೂ ಕುಸಿತ, ನೆರೆ ಎದುರಿಸುವ ಪ್ರದೇಶಗಳು, ಶಾಲೆಗಳ ರಿಪೇರಿ, ಚರಂಡಿಗಳ ಸ್ವಚ್ಛತೆ ಮುಂತಾದವುಗಳ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಭೂ ಕುಸಿತ ದೊಡ್ಡ ಸಮಸ್ಯೆಯಾಗಿರುವುದರಿಂದ ಮಳೆಗಾಲದ ವೇಳೆ ಭೂಕುಸಿತವಾಗುವ ಸಾಧ್ಯತೆಗಳಿರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿಂದ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸುವ ಯೋಜನೆಗಳನ್ನು ನಡೆಸಲಾಗಿದೆ.
ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ?: ಎಂ.ಬಿ.ಪಾಟೀಲರೋ? ಶಿವಾನಂದ ಪಾಟೀಲರೋ ಎಂಬ ಕುತೂಹಲ
ಇನ್ನು ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ, ಇನ್ನೂ ಸಹ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲವಾಗಿದ್ದು, ಕಾಮಗಾರಿಗಾಗಿ ಅಲ್ಲಲ್ಲಿ ಗುಡ್ಡಗಳನ್ನು ಕೊರೆದು ಹಾಗೆಯೇ ಬಿಡಲಾಗಿದೆ. ಈ ಗುಡ್ಡಗಳಿಂದ ಬೇಸಿಗೆಯಲ್ಲಿ ಅಷ್ಟೇನೂ ಆತಂಕ ಇಲ್ಲವಾದರೂ ಮಳೆಗಾಲದಲ್ಲಿ ಇವು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತವೆ. ಅದರಲ್ಲೂ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವುದರಿಂದ ಅಪಾಯಕಾರಿ ರೀತಿಯಲ್ಲಿ ಕೊರೆದಿರುವ ಗುಡ್ಡಗಳು ಕುಸಿದು ಹೆದ್ದಾರಿಗೇ ಬೀಳುವ ಆತಂಕ ಎದುರಾಗಿದ್ದು, ಮಳೆ ಆರಂಭವಾದಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.
ಹೀಗಾಗಿ ಮಳೆಗಾಲ ಆರಂಭಕ್ಕೆ ಮುನ್ನ ಸೂಕ್ತ ಮುನ್ನೆಚ್ಚರಿಕೆಯನ್ನು ಜಿಲ್ಲಾಡಳಿತ ಕೈಗೊಳ್ಳಲು ಮುಂದಾಗಿದೆ. ಅಂದಹಾಗೆ, 2021ರಲ್ಲಿ ಸುರಿದ ಭಾರೀ ಮಳೆಗೆ ಅಣಶಿ ಹಾಗೂ ಅರಬೈಲ್ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಸಂಪರ್ಕವೇ ಕಡಿತಗೊಂಡಿತ್ತು. ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಅಲ್ಲಲ್ಲಿ ಅಗಲೀಕರಣಕ್ಕಾಗಿ ಕೊರೆದ ಗುಡ್ಡಗಳಿಂದ ಕಲ್ಲು, ಮಣ್ಣು ಕುಸಿದು ಬಿದ್ದು ಸಂಚಾರ ಅಸ್ತವ್ಯಸ್ತವಾದ ಘಟನೆಗಳು ನಡೆದಿವೆ. ಅದರಂತೆ ಈ ಬಾರಿಯೂ ಸಹ ಕೆಲವೆಡೆ ಅಪಾಯಕಾರಿ ರೀತಿಯಲ್ಲಿ ಗುಡ್ಡಗಳನ್ನು ಕೊರೆದು ಬಿಡಲಾಗಿದ್ದು, ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಏಕಾಏಕಿ ಕುಸಿತ ಕಂಡ ರೇಷ್ಮೆ ಗೂಡಿನ ಧಾರಣೆ: ಕಂಗಾಲಾದ ರೇಷ್ಮೆ ಬೆಳೆಗಾರರು
ಈ ಹಿನ್ನೆಲೆ ಮಳೆಗಾಲದಲ್ಲಿ ಹೆದ್ದಾರಿ ಸುರಕ್ಷತೆ ವಿಚಾರವಾಗಿ ಐಆರ್‌ಬಿ, ನೌಕಾನೆಲೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೇ, ಗುಡ್ಡ ಕುಸಿತ ಉಂಟಾದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಕೂಡಾ ಆದೇಶಿಸಲಾಗಿದೆ. ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲೂ ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಾಕೃತಿಕ ವಿಕೋಪಗಳು ಎದುರಾಗುತ್ತಿದ್ದು, ಜನಸಾಮಾನ್ಯರು ಭಾರೀ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಈ ಕಾರಣದಿಂದ ಈ ಬಾರಿಯೂ ಜನರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಅಧಿಕಾರಿಗಳ ಸಭೆ ನಡೆಸುವ ಮೂಲಕ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.