* ಆಲಮಟ್ಟಿ ಆಣೆಕಟ್ಟಿಗೆ ಅಪಾರ ಪ್ರಮಾಣದ ಒಳಹರಿವು
* 18 ಕ್ರಸ್ಟ್ ಗೇಟ್ ಮೂಲಕ 70 ಸಾವಿರ ಕ್ಯು. ನೀರು ಹೊರಕ್ಕೆ
* ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಜು.12): ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ವರುಣ ಬೆಂಬಿಡದೆ ಕಾಡ್ತಿದ್ದಾನೆ. ಆದ್ರೆ ಬರದ ನಾಡು ಎನ್ನುವ ಅಪಖ್ಯಾತಿ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಬಿಟ್ಟರೇ ಹೇಳಿಕೊಳ್ಳುವಂತ ಮಳೆಯಾಗ್ತಿಲ್ಲ. ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ.
ಆಲಮಟ್ಟಿ ಡ್ಯಾಂಗೆ ಹೆಚ್ಚಿದ ಒಳ ಹರಿವು
ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ವರದಾನವಾಗಿರುವ ಆಲಮಟ್ಟಿ ಡ್ಯಾಂಗೆ ಒಳಹರಿವು ಹೆಚ್ಚಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರೋ ಅಪಾರ ಪ್ರಮಾಣದ ಮಳೆಯಿಂದ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರೀ ಸಾಗರಕ್ಕೆ ನೀರು ಹರಿದು ಬರ್ತಿದೆ. ಸದ್ಯದ ಅಪಡೇಟ್ ಪ್ರಕಾರ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನಷ್ಟು ನೀರು ಹರಿದು ಬರ್ತಿದೆ. ಅಪಾರ ಪ್ರಮಾಣದಲ್ಲಿ ನೀರು ಹರಿದು ಬರ್ತಿರೋದ್ರಿಂದ 75 ಸಾವಿರ ಕ್ಯುಸೆಕ್ ನೀರನ್ನ ಹೊರಬಿಡಲಾಗ್ತಿದೆ.
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯ ಅಬ್ಬರ: ಕೃಷ್ಣಾ ಮಟ್ಟ ಹೆಚ್ಚಳ
ಆರಂಭವಾದ ವಿದ್ಯುತ್ ಉತ್ಪಾದನೆ
ಆಲಮಟ್ಟಿ ಡ್ಯಾಂನಲ್ಲಿ ಒಳಹರಿವು- ಹೊರಹರಿವು ಹೆಚ್ಚಾದ ಕಾರಣ ವಿದ್ಯುತ್ ಉತ್ಪಾದನೆ ಕೂಡ ಆರಂಭವಾಗಿದೆ. ವಿದ್ಯುತ್ ಉತ್ಪಾದನೆಗಾಗಿ ಕರ್ನಾಟಕ ಪವರ್ ಕಾರ್ಪೋರೆಷನ್‌ಗೆ 45 ಸಾವಿರ ಕ್ಯುಸೆಕ್ ಹರಿಸಲಾಗ್ತಿದೆ. 18 ಕ್ರಸ್ಟ್ ಗೇಟ್ ಮೂಲಕ ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ 30 ಸಾವಿರ ಕ್ಯುಸೆಕ್ ನೀರನ್ನ ಹರಿಬಿಡಲಾಗ್ತಿದೆ.
ನದಿಪಾತ್ರದ ಜನರಲ್ಲಿ ಮುಂಜಾಗೃತೆಗೆ ಸೂಚನೆ
ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ಒಳಹರಿವು ಇರುವುದರಿಂದ ಕೃಷ್ಣಾನದಿ ಪಾತ್ರದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ಪಾತ್ರದಲ್ಲಿರುವ ಜನರು ನದಿಗೆ ಇಳಿಯಬಾರದು, ತಮ್ಮ ಜಾನುವಾರುಗಳನ್ನ ನದಿಗೆ ಇಳಿಸಬಾರದು ಎಂದು ಮುನ್ನಚ್ಚರಿಕೆ ನೀಡಿದೆ.
ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ
ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿ ಪಾತ್ರದಲ್ಲಿರುವ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದ ಜಾಕವೆಲ್ ಗೆ ಭೇಟಿ ನೀಡಿದರು. ಪ್ರವಾಹದ ಮುನ್ನಚ್ಚರಿಕೆ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಕೃಷ್ಣಾ ನದಿ ಪಾತ್ರದಲ್ಲಿರುವ ಮಸೂತಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಸ್ಥರಿಂದ ಕೆಲ ಮಾಹಿತಿಗಳನ್ನ ಪಡೆದುಕೊಂಡು, ಮುನ್ನೆಚ್ಚರಿಕಾ ಕ್ರಮಗಳನ್ನ ಪರಿಶೀಲನೆ ನಡೆಸಿದರು. ಬಳಿಕ ಯಲ್ಲಮ್ಮನ ಬೂದಿಹಾಳ ಗ್ರಾಮಕ್ಕು ಭೇಟಿ ನೀಡಿ ಮುಂಜಾಗೃತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಯಾ ಗ್ರಾಮಗಳಲ್ಲಿ ಪ್ರವಾಹದಿಂದ ಎಚ್ಚರ ವಹಿಸುವಂತೆ ಡಂಗೂರ ಸಾರಲು ಆದೇಶಿಸಿದರು.
ವಿಜಯಪುರ, ಬಾಗಲಕೋಟೆಯಲ್ಲಿ ಭೂಕಂಪನ ಅನುಭವ: ಆತಂಕದಲ್ಲಿ ಜನತೆ
ಜಿಟಿ ಜಿಟಿಗೆ ಮಳೆಗೆ ಕುಸಿದ ಮನೆ ಛಾವಣಿಗಳ
ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದೆ. ಪರಿಣಾಮ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಬಸವರಾಜ್ ಸಿಂದಗಿ ಎಂಬುವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಜನರು ಓಡಿ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಜಖಂ ಆಗಿದ್ದು 2 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎನ್ನಲಾಗಿದೆ. ಇನ್ನು ಮುದ್ದೇಬಿಹಾಳ ತಾಲೂಕಿನ ತಮದಡ್ಡಿ ಗ್ರಾಮದ ಪರಸಪ್ಪ ದೊಡಮನಿ ಎಂಬುವರ ಮನೆಯ ಮೇಲ್ಚಾವಣಿ ಕುಸಿದಿದೆ. ಕುಟುಂಬಸ್ಥರು ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಏಪ್ರಿಲ್‌ನಿಂದ ಈ ವರೆಗೆ 62 ಮನೆಗಳಿಗೆ ಹಾನಿ
ಏ. 1 ರಿಂದ ಈ ಜುಲೈ 8 ರ ವರೆಗೆ ಜಿಲ್ಲೆಯಲ್ಲಿ 62 ಮನೆಗಳಿಗೆ ಹಾನಿಯಾಗಿದೆ. 49 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 9 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.