* ಶಾಸಕ ಎಂ.ವೈ ಪಾಟೀಲ್ ಪುತ್ರ ಮತ್ತು ಸಹೋದರನ ಹೆಸರು
* ಡೀಲ್ ಆರಂಭಿಸಿದ್ದು ಶಾಸಕರ ಪುತ್ರ
* ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ
ಕಲಬುರಗಿ(ಜು.12): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಫಜಲಪೂರದ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್ ಪುತ್ರ ಮತ್ತು ಸಹೋದರನ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಕಿಂಗ್ ಪಿನ್ ಆರ್.ಡಿ.ಪಾಟೀಲ್‌ನೇ ಸ್ವತಃ ಇವರ ಹೆಸರು ಬಾಯ್ಬಿಟ್ಟಿದ್ದಾನೆ. ಆದಾಗ್ಯೂ ಸಿಐಡಿ ಅವರನ್ನು ಬಂಧಿಸದಿರುವುದು ಸಿಐಡಿ ತನಿಖೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ಡೀಲ್ ಆರಂಭಿಸಿದ್ದು ಶಾಸಕರ ಪುತ್ರ
undefined
ಎಂ.ವೈ ಪಾಟೀಲ್ ಗನ್ ಮ್ಯಾನ್ ಹಯ್ಯಾಳಿ ದೇಸಾಯಿಯನ್ನು ಪಿ.ಎಸ್.ಐ ಮಾಡಲು ಡೀಲ್ ಕುದುರಿಸಿದ್ದೇ ಶಾಸಕ ಎಂ.ವೈ ಪಾಟೀಲ್ ಪುತ್ರ ಅರುಣಕುಮಾರ ಪಾಟೀಲ್. ಈ ವಿಚಾರ ಹೇಳಿದ್ದು ಬೇರಾರೋ ಅಲ್ಲ, ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್.ಡಿ ಪಾಟೀಲ್ ಸ್ವಖುಷಿ ಹೇಳಿಕೆಯಲ್ಲಿ ಎಂ.ವೈ ಪಾಟೀಲ್ ಪುತ್ರ ಹಾಗೂ ಸಹೋದರನ ಹೆಸರು ಪ್ರಸ್ತಾಪ ಮಾಡಿದ್ದಾನೆ. ಗನ್ ಮ್ಯಾನ್ ಹಯ್ಯಾಳಿಗೆ ಪಿ.ಎಸ್.ಐ ಮಾಡಲು ಆರ್.ಡಿ ಪಾಟೀಲ್ ಗೆ ಮಾತಾಡಿದ್ದೇ ಶಾಸಕ ಎಂ.ವೈ ಪಾಟೀಲರ ಪುತ್ರ ಅರುಣಕುಮಾರ ಪಾಟೀಲ್ ಅಂತೆ.
PSI Recruitment Scam; ಎಫ್‌ಎಸ್‌ಎಲ್ ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ
ಆರ್.ಡಿ ಪಾಟೀಲ್ ಹೇಳಿದ್ದಿಷ್ಟು ?
ಅರುಣಕುಮಾರ ಪಾಟೀಲ್ ನನಗೆ ಕರೆ ಮಾಡಿ ನಮ್ಮ ತಂದೆಯವರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿಗೆ ಪಿಎಸ್ಐ ಮಾಡಲು ಸಹಾಯ ಮಾಡುವಂತೆ ಕೇಳಿದ್ದರು. ಈ ವಿಚಾರಕ್ಕೆ ಮಂಜುನಾಥ್ ಮೇಳಕುಂದಿಗೆ ಸಂಪರ್ಕಿಸಲು ನಾನು ಅರುಣಕುಮಾರ ಪಾಟೀಲರಿಗೆ ಹೇಳಿದ್ದೆ. ಅರುಣಕುಮಾರ ಪಾಟೀಲ್ ರು ಮಂಜುನಾಥ್ ಮೇಳಕುಂದಿಗೆ ಸಂಪರ್ಕಿಸಿದಾಗ ಹಣ ನನ್ನ ಚಿಕ್ಕಪ್ಪ ಎಸ್.ವೈ ಪಾಟೀಲ್ ಕೊಡ್ತಾರೆ ಎಂದಿದ್ದರು. ಮಂಜುನಾಥ್ ಮೇಳಕುಂದಿ ಈ ಡೀಲ್ ಗೆ 40 ಲಕ್ಷ ರೂಪಾಯಿ ಡಿಮಾಂಡ್ ಮಾಡಿದ್ದ. ಕೊನೆಗೆ, ನಾನು ಮತ್ತು ಶಾಸಕರ ಸಹೋದರ ಎಸ್.ವೈ ಪಾಟೀಲ್ ಸೇರಿ 30 ಲಕ್ಷಕ್ಕೆ ಡೀಲ್ ಮುಗಿಸಿದೇವು. ಅದರಂತೆ ಬಸ್ ನಿಲ್ದಾಣದ ಬಳಿ ನನ್ನ ಕಾರಿನಲ್ಲಿಯೇ 10 ಲಕ್ಷ ಮುಂಗಡ ಪಡೆದೆ ಎಂದು ಆರ್.ಡಿ ಪಾಟೀಲ್ ಸ್ವಖುಷಿ ಹೇಳಿಕೆಯಲ್ಲಿ ಹೇಳಿದ್ದಾನೆ.
ಚಾರ್ಜ್‌ಶೀಟ್ ಪ್ರತಿ ಲಭ್ಯ
ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ವಿಚಾರಗಳಿದ್ದು ಚಾರ್ಜ್‌ಶೀಟ್‌ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
PSI Scam: ಎಡಿಜಿಪಿ ಮನೆಯಿಂದ ಬರಿಗೈಲಿ ವಾಪಸ್ ಬಂದ ಸಿಐಡಿ ತಂಡ
ಬಂಧನ ಏಕಿಲ್ಲ ?
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕಿಂಗ್ ಪಿನ್ ಆರ್.ಡಿ ಪಾಟೀಲ್ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್ ರ ಮಗ ಮತ್ತು ಸಹೋದರನ ಹೆಸರು ಪ್ರಸ್ತಾಪ ಮಾಡಿದ್ದರೂ ಸಿಐಡಿ ಅವರನ್ನು ಬಂಧಿಸಿಲ್ಲ. ಹೋಗಲಿ ಕನಿಷ್ಟ ವಿಚಾರಣೆ ಸಹ ನಡೆಸಿಲ್ಲ. ಕಿಂಗ್ ಪಿನ್ ಆರ್.ಡಿ ಪಾಟೀಲ್ , ತನ್ನ ಸ್ವಖುಷಿ ಹೇಳಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಶಾಸಕರ ಕುಟುಂಬದವರ ವಿಚಾರಣೆಯೂ ನಡೆಸಿಲ್ಲ, ಬಂಧನವೂ ನಡೆಸಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ
ದಿವ್ಯಾ ಹಾಗರಗಿ ಜೊತೆ ಆತ್ಮೀಯರು ಎನ್ನುವ ಕಾರಣಕ್ಕೆ ಹಲವರ ವಿಚಾರಣೆ ನಡೆಸಿ ಪಾತ್ರ ಕಾಣದಾದಾಗ ಬಿಟ್ಟು ಕಳುಹಿಸಿದೆ. ಆದ್ರೆ ಆರೋಪಿಯೇ ಶಾಸಕ ಪುತ್ರನ ಮತ್ತು ಸಹೋದರನ ಹೆಸರು ಹೇಳಿದ್ರೂ ವಿಚಾರಣೆ ನಡೆಸದೇ ಇರುವುದು ಸರಿಯಲ್ಲ ಎಂದು ಈ ಹಿಂದೆ ಸಿಐಡಿ ವಿಚಾರಣೆ ಎದುರಿಸಿ ಬಂದಿರುವ ಕಲಬುರಗಿಯ ಆರ್.ಟಿ ಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಐಡಿ ಪ್ರಭಾವಿಗಳ ವಿಚಾರಣೆ ಮಾಡದೇ ತಾರತಮ್ಯ ನಡೆಸುತ್ತಿದೆ.
ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲದಿದ್ರೂ ಎರಡು ಮೂರು ಬಾರಿ ವಿಚಾರಣೆ ನಡೆಸಿದ್ದಿರಿ. ಆದ್ರೆ ಶಾಸಕರ ಮಗ ಮತ್ತು ಸಹೋದರನ ಹೆಸರಿದ್ದರೂ ಯಾಕೆ ವಿಚಾರಣೆ ಮಾಡಿಲ್ಲ.. ಯಾಕೆ ಬಂಧಿಸಿಲ್ಲ? ನನ್ನ ವಿಚಾರಣೆ ನಡೆಸಿದ್ದು ಸ್ವಾಗತಾರ್ಹ ಆದ್ರೆ ಶಾಸಕರ ಕುಟುಂಬದವರನ್ನು ಏಕೆ ವಿಚಾರಣೆಗೊಳಪಡಿಸಿಲ್ಲ? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಏಕೆ? ಕೂಡಲೇ ಶಾಸಕ ಎಂ.ವೂ ಪಾಟೀಲರ ಮಗ ಮತ್ತು ಸಹೋದರನನ್ನ ಬಂಧಿಸಿ ಎಂದು ಆರ್.ಟಿ.ಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಆಗ್ರಹಿಸಿದ್ದಾರೆ.